Advertisement

ತಾಲೂಕಿನ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ಶಾಸಕ

03:08 PM May 15, 2019 | Suhan S |

ಚನ್ನರಾಯಪಟ್ಟಣ: ತಾಲೂಕಿನ ಕಳೆದ ಮೂರು ವರ್ಷದಿಂದ ಉಂಟಾಗಿರುವ ಮಳೆ ಕೊರತೆಯಿಂದ 70 ರಿಂದ 80 ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು.

Advertisement

ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಭಗೀರಥ ಉಪ್ಪಾರ ಯುವಕ ಸಂಘ, ತಾಲೂಕು ಭಗೀರಥ ಉಪ್ಪಾರ ಸಂಘದಿಂದ ನಡೆದ ಭಗೀರಥ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

70 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಸತತ ಬರಗಾಲ ಆವರಿಸಿದ್ದರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾ ಗದಂತೆ ಎಚ್ಚರ ವಹಿಸಲಾಗಿದೆ. ಆದರೆ 70 ಗ್ರಾಮದಲ್ಲಿ ಮಾತ್ರ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹಾಗಾಗಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ನೀಡಲಾಗುತ್ತಿದೆ ಎಂದರು.

ಮಳೆ ನೀರು ಸಂಗ್ರಹಿಸಿ: ನೀರಿನ ಸಮಸ್ಯೆ ಬಗೆ ಹರಿಸಲು ಮಳೆ ನೀರು ಸಂಗ್ರಹ ಪದ್ಧತಿಯನ್ನು ರಾಷ್ಟ್ರಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು. ಜಲಸಂಪತ್ತು ಮುಖ್ಯವಾದುದು ಅದನ್ನು ಸಂರಕ್ಷಣೆ ಮಾಡುವತ್ತ ನಗರ ವಾಸಿಗಳು ಹಾಗೂ ಗ್ರಾಮೀಣರು ಸೇರಿದಂತೆ ಎಲ್ಲರೂ ಗಮನಹರಿಸಬೇಕಿದೆ. ಪರಿಸರದ ಬಗ್ಗೆ ಕಾಳಜಿ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಮಾನಿಕೆರೆ ಅಭಿವೃದ್ಧಿ: ಪಟ್ಟಣದ ಅಮಾನಿಕೆರೆ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಕೆರೆ ಪಕ್ಕದಲ್ಲಿರುವ ರಸ್ತೆಯಲ್ಲಿ ವಿದ್ಯುತ್‌ ಕಂಬ ಗಳನ್ನು ಅಳವಡಿಸಿ 36 ವಿದ್ಯುತ್‌ ದೀಪವ‌ನ್ನು ಅಳವಡಿಸುವ ಮೂಲಕ ವಾಯುವಿಹಾರ ನಡೆಸಲು ಅನುಕೂಲ ಕಲ್ಪಿಸಲಾಗುವುದು. ಈಗಾಗಲೇ ಅಮಾನಿಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ನಮ್ಮೂರ ಕೆರೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಕೆರೆಗೆ ಕಸ ಎಸೆದು ನೀರಿನ್ನು ಕಲುಷಿತ ಮಾಡಬಾರದು.ಶೀಘ್ರದಲ್ಲಿ ವಳಗೇರಮ್ಮ ದೇವಸ್ಥಾನದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗುವುದು ಎಂದರು.

Advertisement

ಜಲ ಸಂಪತ್ತು ಅಮೂಲ್ಯ: ವಾಗ್ಮಿ ಸಿ.ಎನ್‌.ಸುಬ್ಬಣ್ಣ ಮಾತನಾಡಿ, ಜೀವಜಲವನ್ನು ಜಗತ್ತಿಗೆ ಕರುಣಿಸಿದ ಕೀರ್ತಿ ಭಗೀರಥ ಮಹರ್ಷಿಗೆ ಸಲ್ಲುತ್ತದೆ ಎಂದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಅಲಂಕೃತ ವಾಹನದಲ್ಲಿ ಭಗೀರಥ ಮಹರ್ಷಿ ಭಾವಚಿತ್ರವನ್ನು ಜಾನಪದ ಕಲಾತಂಡ, ಮಂಗಳ ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು, ತಾ ಪಂ ಸದಸ್ಯೆ ಹೇಮಾವತಿ, ರತ್ನಮ್ಮ, ಭಗೀರಥ ಉಪ್ಪಾರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗೋಪಾಲ್ಗೌಡ, ತಾಲೂಕು ಘಟಕದ ಅಧ್ಯಕ್ಷ ಜನಾರ್ದನ್‌ ಪುರಸಭಾ ಸದಸ್ಯ ಸಿ.ಆರ್‌. ಸುರೇಶ್‌, ರವಿ, ಜಯಕುಮಾರ್‌, ಲೋಕೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next