Advertisement

ಕರಾವಳಿ ಭಾಗದಲ್ಲಿ ಮರಳು ಸಮಸ್ಯೆ ನಿವಾರಣೆಗೆ ಕ್ರಮ: ಸಿ.ಸಿ.ಪಾಟೀಲ್‌

09:57 AM Mar 14, 2020 | Sriram |

ವಿಧಾನಸಭೆ: ಕರಾವಳಿ ಭಾಗದಲ್ಲಿ ಮರಳು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಲಿಖೀತ ಉತ್ತರ ನೀಡಿರುವ ಅವರು,ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 2019-20 ನೇ ಸಾಲಿನ ಜನವರಿ ಅಂತ್ಯದವರೆಗೆ ಸಿಆರ್‌ಜಡ್‌ ನದಿ ಪಾತ್ರದ ವ್ಯಾಪ್ತಿಯಲ್ಲಿನ ಮರುಳು ದಿಬ್ಬಗಳಿಂದ ಟೆಂಡರ್‌ ಕಂ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲಾದ ಮರಳು ಗುತ್ತಿಗೆ ಪ್ರದೇಶಗಳಿಂದ ಸರ್ಕಾರಿ ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಿದ ಮರಳು ಬ್ಲಾಕ್‌ಗಳಿಂದ ಎಂ-ಸ್ಯಾಂಡ್‌ ಘಟಕಗಳಿಂದ, ಡ್ಯಾಂಗಳಲ್ಲಿ ಹೂಳು ತೆರವುಗೊಳಿಸಿರುವುದರಿಂದ ಸಂಗ್ರಹಿಸಲಾಗಿರುವ ಮರಳು ಹಾಗೂ ಪ್ರವಾಹದಿಂದ ಪಟ್ಟಾ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳು ತೆರವುಗೊಳಿಸುವಿಕೆಯಿಂದ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ 1,85,251 ಮೆಟ್ರಿಕ್‌ ಟನ್‌ ಮರಳು ಪೂರೈಸಲಾಗಿದೆ ಎಂದು ವಿವರಿಸಲಾಗಿದೆ.

ಆದರೂ ಉಡುಪಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಮರಳಿನ ಕೊರತೆ ಇರುವುದು ಕಂಡು ಬಂದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಮರಳು ಪೂರೈಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕ್ರಮ
ಬಿಜೆಪಿಯ ರಘುಪತಿ ಭಟ್‌ ಅವರ ಪ್ರಶ್ನೆಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಉತ್ತರಿಸಿ, ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ತೆರೆಯುವ ಬಗ್ಗೆ ಪ್ರಸ್ತಾಪ ಇದೆ. ಪ್ರತ್ಯೇಕ ಬ್ಯಾಂಕ್‌ ತೆರೆಯುವ ಬಗ್ಗೆ ಸರ್ಕಾರ 2009 ರಲ್ಲಿ ಆದೇಶ ಹೊರಡಿಸಲಾಗಿದೆ. ಡಿಸಿಸಿ ಬ್ಯಾಂಕ್‌ ರಚನೆ ಕುರಿತು ಮೊದಲು ಸಾಧ್ಯತಾ ವರದಿ ಪಡೆದು ನಂತರ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿ ಮಾಡಿ ಆರ್‌ಬಿಐ, ನಬಾರ್ಡ್‌ನಿಂದ ಪರವಾನಗಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ಹಿಂದೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವಿಭಜಿಸಿ ಉಡುಪಿ ಜಿಲ್ಲೆಗೆ ನೂತನ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಪ್ರಸ್ತಾವನೆ ಬ್ಯಾಂಕ್‌ನ ಮಹಾಸಭೆಯಲ್ಲಿ ಮಂಡಿಸಲಾಗಿದ್ದು, ಉಡುಪಿ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್‌ ಬೇಡ ಎಂದು ತೀರ್ಮಾನಿಸಲಾಗಿರುತ್ತದೆ. ಹೀಗಾಗಿ, ಪ್ರತ್ಯೇಕ ಮಾಡುವ ಪ್ರಸ್ತಾವನೆ ಕೈ ಬಿಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಡೆಪ್ಯುಟಿ ಗವರ್ನರ್‌ ಅಧ್ಯಕ್ಷತೆಯ ಸಭೆಯಲ್ಲಿ ಶಿಫಾರಸು ಮಾಡಲಾಗಿತ್ತು. ಪ್ರತ್ಯೇಕ ಬ್ಯಾಂಕ್‌ ಸಂಬಂಧ ನ್ಯಾಯಾಲಯಕ್ಕೂ ಮೊರೆ ಹೋಗಿ ಸದ್ಯ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದೆ. ಹೀಗಾಗಿ ಪ್ರಕರಣ ಸದ್ಯ ಅಂತಿಮ ತೀರ್ಪಿಗೆ ಬಾಕಿ ಇರುತ್ತದೆ ಎಂದು ತಿಳಿಸಿದ್ದಾರೆ.

Advertisement

ನಿಯಮಾವಳಿ ಪ್ರಕಾರ ಇದೆ
ರಘುಪತಿ ಭಟ್‌ ಅವರ ಮತ್ತೂಂದು ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಉತ್ತರಿಸಿ, ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ 200 ಬೆಡ್‌ಗಳ ಬಿ.ಆರ್‌.ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯ ಕಟ್ಟಡ ನಿಯಮಾವಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಸದಸ್ಯರ ಆಕ್ರೋಶ
ವಿಧಾನಸಭೆಯಲ್ಲಿ ನಗರಸಭೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ಸೌಲಭ್ಯ ಸರಿಯಾಗಿಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ್‌, ಕಾಂಗ್ರೆಸ್‌ನ ಈಶ್ವರ ಖಂಡ್ರೆ ಆರೋಪಿಸಿದರು. ಸಚಿವ ಬೈರತಿ ಬಸವರಾಜ್‌ ಸದ್ಯದಲ್ಲೇ ಶಾಸಕರ ಸಭೆ ಕರೆದು ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ನ ಎಸ್‌.ಎನ್‌.ನಾರಾಯಣಸ್ವಾಮಿಯವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ರುದ್ರಭೂಮಿಗಳಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ, ಅದಕ್ಕಾಗಿ ಹಣಕಾಸು ವ್ಯವಸ್ಥೆ ಕಲ್ಪಿಸಿಲ್ಲ ಎಂದು ದೂರಿದರು. ಪೌರಾಡಳಿತ ಸಚಿವ ನಾರಾಯಣಗೌಡರು ಉತ್ತರ ನೀಡಿದರೂ ಉತ್ತರ ಸರಿಯಾಗಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next