Advertisement
“ಬಕಾಸುರ’ ಒಂದೇ ನೋಟಕ್ಕೆ ಅರ್ಥವಾಗುವಂಥದ್ದಲ್ಲ. ಹಾಗಂತ, ಸಿಕ್ಕಾಪಟ್ಟೆ ಗೊಂದಲಗಳೂ ಇಲ್ಲ. ಕೆಲವೆಡೆ ನಿರ್ದೇಶಕರೇ ಗೊಂದಲಕ್ಕೀಡಾಗಿರುವಂತೆ ಕಾಣುತ್ತದೆ. ಹಣಕ್ಕಾಗಿ ಎಂಥಾ ಕೇಸನ್ನು ಬೇಕಾದರೂ ಹಿಡಿದು, ವಾದ ಮಂಡಿಸುವ ಕ್ರಿಮಿನಲ್ ಲಾಯರ್ ಹಂಗೂ ಇರುತ್ತಾರಾ ಎಂಬುದನ್ನಿಲ್ಲಿ ಕಾಣಬಹುದು. ಇಲ್ಲಿ ಎಲ್ಲವೂ ಸರಿ. ಆದರೆ, ಕೋರ್ಟ್ ಹಾಲ್‌ನಲ್ಲಿ ನಡೆಯುವ ಕೆಲ ಸನ್ನಿವೇಶಗಳು ನೋಡುಗರಲ್ಲಿ ಬೇಸರ ತರಿಸದೇ ಇರದು.
Related Articles
Advertisement
ಒಂದು ಕಡೆ, ಪ್ರೀತಿ, ಇನ್ನೊಂದು ಕಡೆ ಅಮ್ಮನ ವಾತ್ಸಲ್ಯ. ಇದರ ನಡುವೆ ಹಣ. ಈ ಮೂರರ ಮೌಲ್ಯವನ್ನು ತೋರಿಸುವುದರ ಜೊತೆಗೊಂದು “ತಿರುವು’ ಬಂದು, ನೋಡುಗರಿಗೊಂದು ಸರ್‌ಪ್ರೈಸ್ ಕೊಡುತ್ತೆ. ಆ ಸರ್‌ಪ್ರೈಸ್ ಏನೆಂಬುದನ್ನು ತಿಳಿಯುವ ಕುತೂಹಲವಿದ್ದರೆ, “ಬಕಾಸುರ’ನ ನೋಡಿ ತಮ್ಮದೇ ಶೈಲಿಯಲ್ಲಿ ಗುಣಗಾನ ಮಾಡಬಹುದು. ಆರ್ಯ (ರೋಹಿತ್) ಒಬ್ಬ ಕ್ರಿಮಿನಲ್ ಲಾಯರ್. ಎಂಥಾ ಕೇಸನ್ನು ಬೇಕಾದರು ಉಲ್ಟಾ ಮಾಡುವಂತಹ ಚಾಣಾಕ್ಷ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಆ ಕೇಸಿನಿಂದ ಪಾರು ಮಾಡುವಂತೆ ಆರ್ಯನ ಮೊರೆ ಹೋಗುವ ಆ ಆರೋಪಿಯನ್ನು, ಅಷ್ಟೇ ಕ್ರಿಮಿನಲ್ ಬುದ್ಧಿ ಉಪಯೋಗಿಸಿ ಕೇಸ್ ಗೆಲ್ಲುತ್ತಾನೆ. ಆ ವಿಷಯ ತಿಳಿದು, ಚಕ್ರವರ್ತಿ ಗ್ರೂಪ್ ಆಫ್ ಕಂಪೆನಿ ಮಾಲೀಕ ಚಕ್ರವರ್ತಿ (ರವಿಚಂದ್ರನ್) ಹಣ, ಕಾರು ಬಂಗಲೆಯ ಆಸೆ ತೋರಿಸಿ, ಆರ್ಯನನ್ನು ತನ್ನ ಕಂಪೆನಿ ವಕೀಲನನ್ನಾಗಿಸುತ್ತಾನೆ. ಹಣದ ಆಸೆಗೆ ಆರ್ಯ, ಪ್ರೀತಿ, ಅಮ್ಮನ ವಾತ್ಸಲ್ಯವನ್ನೂ ಬದಿಗಿಡುತ್ತಾನೆ. ಚಕ್ರವರ್ತಿ ಒಂದೊಂದೇ ರಿಸ್ಕ್ ಟಾಸ್ಕ್ ಕೊಡುತ್ತಾ ಹೋಗುತ್ತಾನೆ.
ಆ ಟಾಸ್ಕ್ ಗೆದ್ದರೆ, ಹಣ, ಅಂತಸ್ತು ಆರ್ಯನದ್ದಾಗುತ್ತ ಹೋಗುತ್ತೆ. ಕೊನೆಗೊಂದು ರಿಸ್ಕೀ ಟಾಸ್ಕ್ ಸಿಗುತ್ತೆ. ಆರ್ಯ ಅದನ್ನು ಗೆಲ್ತಾನಾ? ಅದೇ ಸಸ್ಪೆನ್ಸ್. ಅಲ್ಲೊಂದು ಭಯಂಕರ ಟ್ವಿಸ್ಟ್ ಕೊಟ್ಟು ನೋಡುಗರನ್ನು ಕೊಂಚ ಟೆಸ್ಟ್ ಮಾಡಲಾಗಿದೆ. ಆ ಟೆಸ್ಟ್‌ಗೆ ಒಳಪಡುವ ಆಸೆ ಇದ್ದರೆ, ಚಿತ್ರಮಂದಿರದತ್ತ ಹೋಗಬಹುದು. ರವಿಚಂದ್ರನ್ ಎಂದಿನ ಶೈಲಿಯ ನಟನೆಯಲ್ಲಿ ಗಮನಸೆಳೆಯುತ್ತಾರೆ. ಅವರಿನ್ನಿಲ್ಲಿ ರಿಚ್ ಆಗಿ ತೋರಿಸಿರುವುದೇ ಸಮಾಧಾನ.
ರೋಹಿತ್ ಅವರ ಧ್ವನಿ ಬಿಟ್ಟರೆ, ಇಲ್ಲಿ ಬೇರೇನೂ ವಕೌಟ್ ಆಗಿಲ್ಲ. ನಟನೆ, ಫೈಟ್‌ನಲ್ಲಿನ್ನೂ ದೂರ ಸಾಗಬೇಕಿದೆ. ಕಾವ್ಯಾ ಗೌಡ ಸಿಕ್ಕ ಪಾತ್ರವನ್ನು ಸಲೀಸಾಗಿ ನಿರ್ವಹಿಸಿದ್ದಾರೆ. ಸಿತಾರಾ ಅಮ್ಮನಾಗಿ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಉಳಿದಂತೆ ಸಾಧು ಕೋಕಿಲ, ವಿಜಯ್ ಚೆಂಡೂರ್, ಸಿಹಿಕಹಿ ಚಂದ್ರು ಅವರ ಬಗ್ಗೆ ಹೇಳುವುದೇನೂ ಇಲ್ಲ. ನಿರ್ದೇಶಕರ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರಷ್ಟೇ. ಅವಿನಾಶ್ ಸಂಗೀತಕ್ಕಿನ್ನೂ ಸ್ವಾದವಿರಬೇಕಿತ್ತು. ಮೋಹನ್ ಛಾಯಾಗ್ರಹಣದಲ್ಲಿ “ಬಕಾಸುರ’ನ ಸೊಗಸಿದೆ.
ಚಿತ್ರ: ಬಕಾಸುರನಿರ್ಮಾಣ: ರೋಹಿತ್ ಮತ್ತು ತಂಡ
ನಿರ್ದೇಶನ: ನವನೀತ್
ತಾರಾಗಣ: ರವಿಚಂದ್ರನ್, ರೋಹಿತ್, ಕಾವ್ಯಾಗೌಡ, ಸಿತಾರಾ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಸಿಹಿಕಹಿ ಚಂದ್ರು ಮತ್ತಿತರರು * ವಿಜಯ್ ಭರಮಸಾಗರ