ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ 11ನೇ ವರ್ಷದ ಹನುಮಜ್ಜಯಂತಿ ಉತ್ಸವ ಎ. 10 ಮತ್ತು 11ರಂದು ಜರಗಿತು.
ಮಂಗಳವಾರ ಬೆಳಗ್ಗೆ ವಾಯು ಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮ, ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ವಜ್ರಕವಚ ಸೇವೆ ಜರಗಿತು. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಬೆಳಗ್ಗೆ ಭಜನೆ ಹಾಗೂ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಬೆಳಗ್ಗಿನಿಂದ ಸಂಜೆಯವರೆಗೆ ವಸಂತ ಮಂಟಪದಲ್ಲಿ ಪ್ರಶಸ್ತಿ ವಿಜೇತ 4 ತಂಡಗಳಿಂದ ಭಜನೆ, ಚಂದ್ರಶಾಲೆ ಯಲ್ಲಿ ದೂರದರ್ಶನ ಕಲಾವಿದ ಸತೀಶ ಭಜಂತ್ರಿ ಅವರಿಂದ ಶಹನಾಯಿ ವಾದನ ನಡೆಯಿತು. ಮಧ್ಯಾಹ್ನ ಯತಿದ್ವಯರ ಉಪಸ್ಥಿತಿಯಲ್ಲಿ ಪಲ್ಲಪೂಜೆ ಯಾಗಿ ಹಾಲು ಪಾಯಸ ಸಹಿತ ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಬ್ರಹ್ಮರಥ, ನವರತ್ನ ರಥ, ಚಿನ್ನದ ರಥ, ಗರುಡರಥ, ಮಹಾಪೂಜಾ ರಥಸೇವೆ ಜರಗಿತು.
ದಿವಾನ್ ರಘುರಾಮ ಆಚಾರ್ಯ, ಸೇವಾ ಸಮಿತಿಯ ಪ್ರಮುಖರಾದ ಭುವನೇಂದ್ರ ಕಿದಿಯೂರು, ಜಿತೇಶ್ ಕಿದಿಯೂರು, ಯುವರಾಜ್ ಮಸ್ಕತ್, ಹೀರಾ ಬಿ. ಕಿದಿಯೂರು ಗೋಪಾಲ ಕುಂದರ್, ಡಾ| ಜಿ. ಶಂಕರ್, ಹರಿಯಪ್ಪ ಕೋಟ್ಯಾನ್, ರಮೇಶ್ ಕೋಟ್ಯಾನ್, ಆನಂದ ಪಿ. ಸುವರ್ಣ, ಬೋಜರಾಜ್ ಕಿದಿಯೂರು, ಹಿರಿಯಣ್ಣ ಟಿ. ಕಿದಿಯೂರು, ಮಾಧವ ಸುವರ್ಣ, ವಿಜಯ ಡಿ. ಸುವರ್ಣ, ಎಂ.ಎಸ್. ಭಟ್ ಮತ್ತಿತರರು ಉಪಸ್ಥಿತರಿದ್ದರು.