ಬಾಲ್ಯದಿಂದಲೇ ಭರತನಾಟ್ಯದೆಡೆಗೆ ಆಕರ್ಷಿತರಾಗಿ, ಸತತ ಸಾಧನೆಯಿಂದ ವಿದ್ಯುತ್ ಪದವಿ ಮುಗಿಸಿ ರಂಗಪ್ರವೇಶವನ್ನು ಮಾಡಿದ ವಿದುಷಿ ವೈಷ್ಮಾ ಶೆಟ್ಟಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿನಿ. ಕಲಾ ಯಾನಕ್ಕೆ ಅಡ್ಡಿಯಾಗಬಾರದೆಂದು ಕೈತುಂಬ ಸಂಬಳ ತರುವ ನೌಕರಿ ತೊರೆದ ನಿಜವಾದ ಕಲಾಭಿಮಾನಿ ಅವರು.
ಪ್ರಾರಂಭದಲ್ಲಿ ವೈಷ್ಮಾ ಗುರು ಶಾರದಾಮಣಿ ಶೇಖರ್ ರಚಿಸಿರುವ ಸ್ವರಾಗ್ ಕಣ್ಣೂರು ಇವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದ ನಳಿನಕಾಂತ ರಾಗದ ಪುಷ್ಪಾಂಜಲಿಯನ್ನು ಪ್ರಸ್ತುತ ಪಡಿಸಿದರು. ಅಂಗಶುದ್ಧಿಯಲ್ಲಿ ತನ್ನ ಪಕ್ವತೆಯನ್ನು ತೋರಿದ್ದರೂ, ಮುಖದಲ್ಲಿ ಕೊಂಚ ಬಿಗು ಭಾಸವಾಯಿತು. ಇದರೊಂದಿಗೆ ಸರಸ್ವತಿ ಶ್ಲೋಕವನ್ನು ಅಭಿನಯಿಸಿದರು. ಮುಂದೆ ಮಧುರೈ ಮುರಳೀಧರನ್ ರಚಿಸಿರುವ ಗೌಳರಾಗ ಆದಿತಾಳದ ದೇವಿಕೃತಿ ಮಹಾಕಾಳಿ, ಮಹಾಶಕ್ತಿ, ಮಹೇಶ್ವರಿ ಎಂಬ ನೃತ್ಯವನ್ನು ಶಾರದಾಮಣಿಯವರ ಪುತ್ರಿ ಶುಭಾಮಣಿಯು ಶೋಲ್ಕಟ್ಟುಗಳನ್ನು ಅಳವಡಿಸಿ, ನೃತ್ಯ ಸಂಯೋಜನೆ ಮಾಡಿದ ರೀತಿ ಅಮೋಘವಾಗಿತ್ತು. ಜೊತೆಗೆ ಮೃದಂಗದ ನುಡಿಕಾರದಿಂದಲೂ ಮತ್ತಷ್ಟು ಶೋಭಿಸಿತು. ಜನಮೆಚ್ಚುಗೆ ಗಳಿಸಿದ ಈ ನೃತ್ಯ ವೈಷ್ಮಾಗೆ ಒಂದು ಸವಾಲಾಗಿದ್ದರೂ ತನ್ನ ಪ್ರಬುದ್ಧ ಪ್ರಸ್ತುತಿಯಿಂದ ಭೇಷ್ ಎನಿಸಿಕೊಂಡರು.
ಕಾರ್ಯಕ್ರಮದ ಪ್ರಮುಖ ಅಂಗ ಪದವರ್ಣ ರಾಗಮಾಲಿಕೆ ಆದಿತಾಳದಲ್ಲಿದ್ದು ಬೆಂಗಳೂರಿನ ಗುರುಮೂರ್ತಿಯವರ ರಚನೆಯಾಗಿತ್ತು. ಈ ವರ್ಣದಲ್ಲಿ ನೀಲಮೇಘ ಶ್ಯಾಮನಾದ ತನ್ನ ಸ್ವಾಮಿಯನ್ನು ನನ್ನ ಬಳಿ ಕರೆ ತಾರೆ ಸಖೀ ಎಂದು ನಾಯಕಿಯು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಮಧುರವಾದ ಮುರಳೀನಾದವನ್ನು ಆಲಿಸಲು ತನ್ನ ಮನ ಹಾತೊರೆಯುತ್ತಿದೆ. ನಿರ್ಮಲವಾದ ಮನಸ್ಸನ್ನು ಹೊಂದಿರುವ ನನ್ನ ಸ್ವಾಮಿಗೆ ಮನ ಸೋತಿದ್ದೇನೆ. ನವರಸ ರಂಜಿತ ನಯನ ಮನೋಹರ ಮೋಹನಾಂಗನಾದ ಶ್ರೀ ವೇಣುಗೋಪಾಲ ಕೃಷ್ಣನೇ ನಿನ್ನ ಚರಣ ಕಮಲಕ್ಕೆರಗುವೆ. ನಿನ್ನನ್ನಗಲಿ ಒಂದು ಕ್ಷಣವೂ ಇರಲಾರೆ. ಹೀಗೆ ಪರಿಪರಿಯಾಗಿ ಬೇಡುವ ನಾಯಕಿ ಭಾವವನ್ನು ವೈಷ್ಮಾ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದರು.
ಮಹಾಕವಿ ಸುಬ್ರಹ್ಮಣ್ಯ ಭಾರತೀಯವರ ರಾಗ ಮಾಲಿಕೆ ಆದಿತಾಳದ ಪದಂ ದಿಕ್ಕು ತೆರಿಯಾದ್ ಕಾಟಿಲ್‌ನಲ್ಲಿ ನಾಯಕಿ ತನ್ನ ಸ್ವಾಮಿಯ ಕೊಳಲ ನಾದವನ್ನು ಆಲಿಸಿ, ದಟ್ಟ ಕಾಡಿನೊಳಗೆ ಪ್ರವೇಶಿಸುತ್ತಾಳೆ. ಕಾಡಿನ ಸೌಂದರ್ಯವನ್ನು ಸವಿಯುತ್ತಾ ತನ್ನನ್ನು ತಾನೇ ಮರೆಯುತ್ತಾಳೆ. ನಿದ್ದೆಯಿಂದ ಎಚ್ಚರವಾದಾಗ ತನ್ನ ಮುಂದೆ ನಿಂತಿರುವ ಬೇಟೆಗಾರ ತನ್ನ ಸ್ವಾಮಿಯಾದ ಶ್ರೀಕೃಷ್ಣನೇ ಎಂದು ತಿಳಿದಾಗ ನಾಚಿ ತನ್ನನ್ನೇ ಸ್ವಾಮಿಗೆ ಸಮರ್ಪಿಸುತ್ತಾಳೆ. ಈ ಪದಂನಲ್ಲಿ ವೈಷ್ಮಾ ಭಾವಾಭಿನಯದ ಸ್ಪಷ್ಟತೆ, ನಿಖರತೆ ಮಂತ್ರ ಮುಗ್ಧಗೊಳಿಸಿತು.
ಮುಂದಿನ ಪ್ರಸ್ತುತಿಯಾದ ರಾಮ ಸಂಕೀರ್ತನೆ, ಆದಿತಾಳದ ಅಹಿರ್‌ಭೈರವ್ ರಾಗದ ಪಿಬರೆ ರಾಮರಸಂ ಭಕ್ತಿ ಪ್ರಧಾನವಾಗಿದ್ದು ಸದಾಶಿವ ಬ್ರಹೆ¾àಂದ್ರಿಯರ ರಚನೆಯಾಗಿತ್ತು. ಜಟಾಯು ಮೋಕ್ಷದ ಕಥೆ ಹಾಗೂ ರಾಮನಿಗಾಗಿ ತನ್ನ ಜೀವನವಿಡೀ ಕಾಯುತ್ತಿದ್ದ ಶಬರಿಯ ಕಥೆಯನ್ನು ಗುರು ಶಾರದಾಮಣಿ ಶೇಖರ್‌ರವರು ನೃತ್ಯಕ್ಕೆ ಸಂಯೋಜಿಸಿದ್ದು, ಸ್ವತಃ ಗುರುಗಳಂತೆ ಮನೋಜ್ಞವಾಗಿ ಅಭಿನಯಿಸಿದ್ದು, ಗುರುಗಳ ಶಬರಿ ಪಾತ್ರವನ್ನು ನೆನಪಿಸಿತು.
ಕೊನೆಯ ಭಾಗದಲ್ಲಿ ವರಮು ರಾಗ, ಆದಿತಾಳದ ತಿಲ್ಲಾನದಲ್ಲಿ ಶಕ್ತಿರೂಪಿಣಿಯಾದ ಪಾರ್ವತಿಯನ್ನು ಸ್ತುತಿಸುವ ಸಾಹಿತ್ಯವನ್ನೊಳಗೊಂಡಿದ್ದು, ವಿದ್ವಾನ್ ಸ್ವರಾಗ್ ಕಣ್ಣೂರು ಸುಲಲಿತವಾಗಿ ಹಾಡಿದರೆ, ರಾಜನ್ ಪಯ್ಯನ್ನೂರ್‌ರವರ ಮೃದಂಗ ಛಾಪು ಹಿತಮಿತವಾಗಿತ್ತು. ದೀಪಕ್ ಹೆಬ್ಟಾರ್‌ರವರ ಕೊಳಲು ವಾದನ ಪ್ರೌಢಿಮೆಯಿಂದ ಕೂಡಿತ್ತು. ಗುರು ಶಾರದಾಮಣಿ ಶೇಖರ್ ಹಾಗೂ ಪುತ್ರಿ ಶುಭಾಮಣಿ ಚಂದ್ರಶೇಖರ್ ನಟುವಾಂಗದ ಪ್ರಸ್ತುತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಮಮತಾ