Advertisement

 ಅರ್ಥಪೂರ್ಣ ಅರ್ಥಾಂತರಂಗ ಕಾರ್ಯಾಗಾರ 

08:15 AM Mar 09, 2018 | |

ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಅದರ ಅಧ್ಯಕ್ಷರಾದ ತೆಂಕುತಿಟ್ಟಿನ ಶ್ರೇಷ್ಠ ಭಾಗವತರಲ್ಲಿ ಒಬ್ಬರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಶ್ರೇಷ್ಠ ಅರ್ಥಧಾರಿಗಳಲ್ಲಿ ಒಬ್ಬರಾದ ರಾಧಾಕೃಷ್ಣ ಕಲ್ಚಾರ್‌ ಅವರ ದ್ವಂದ್ವ ನಿರ್ದೇಶನದಲ್ಲಿ, ವಿದ್ಯಾದಾಯಿನಿ ಯಕ್ಷಗಾನ ಸಭಾ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಎಂ.ಜಿ.ಎಂ.ಕಾಲೇಜಿನ ಧನ್ಯಾಲೋಕ ಸಭಾಂಗಣದಲ್ಲಿ ಒಂದು ದಿನದ ರಂಗಪ್ರಸಂಗದ “ಅರ್ಥಾಂತರಂಗ’ ತಾಳಮದ್ದಳೆ ಶಿಬಿರ ಅರ್ಥಪೂರ್ಣವಾಗಿ ಮೂಡಿ ಬಂದು ತಾಳಮದ್ದಳೆಯಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಿತು. 

Advertisement

 ಭಾಗವತ ರಮೇಶ ಭಟ್ಟರ ಸುರುಟಿ ಏಕತಾಳದ ಪಾಲಿಸು ಗಜವದನ… ಪದ್ಯ ಹಳೆಯ ಸಂಪ್ರದಾಯದಲ್ಲಿ ಗಣಪತಿ ಸ್ತುತಿಯನ್ನು ಹೇಗೆ ಮಾಡಬೇಕು ಎನ್ನುವುದನ್ನು ನೆನಪಿಸಿತು.ರಾಮಚಂದ್ರ ಪಾಂಗಣ್ಣಾಯ ಮತ್ತು ಮುರಾರಿ ಕಡಂಬಳಿತ್ತಾಯರ ಹಿಮ್ಮೇಳ ಪದ್ಯಕ್ಕೆ ಕಳೆ ನೀಡಿತು. ವಿಮರ್ಶಕರಾದ ಎ. ಈಶ್ವರಯ್ಯ, ಕೆ.ಎಲ್‌.ಕುಂಡಂತಾಯ, ವಾಸುದೇವ ಸಾಮಗ, ಪ್ರಭಾಕರ ಭಟ್‌, ನಾಗರಾಜ ಉಡುಪ,ಮೋಹನ ತೋನ್ಸೆ ಮುಂತಾದ ವಿಶೇಷ ಆಮಂತ್ರಿತರು ಮತ್ತು ಗಣ್ಯರೊಂದಿಗೆ ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಹಿರಿಯ ಹಿಮ್ಮೇಳ ವಾದಕರಾದ ರಾಮಚಂದ್ರ ಪಾಂಗಣ್ಣಾಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲ ಗೋಷ್ಠಿಯಲ್ಲಿ ಶರಸೇತು ಬಂಧ ಪ್ರಸಂಗದ “ಕೇಳಯ್ಯ ಎಮ್ಮೆಯ ತನು ಬಡವಾದುದ…’ ಪದ್ಯದಿಂದ ಪ್ರಾರಂಭಿಸಿ ಕೇವಲ ಎರಡು ಪದ್ಯಗಳಿಂದ ಹನುಮಂತ ಮತ್ತು ಅರ್ಜುನನ ಸಂವಾದವನ್ನು ರಸವತ್ತಾಗಿ ಕಟ್ಟಿಕೊಟ್ಟವರು ತಾಳಮದ್ದಳೆ ಅರ್ಥಧಾರಿಗಳಾದ ಹರೀಶ ಬಳಂತಿಮೊಗರು ಮತ್ತು ರಾಧಾಕೃಷ್ಣ ಕಲ್ಚಾರ್‌ರವರು. ಅದೇ ಎರಡು ಪದ್ಯವನ್ನು ಬೇರೆ ರಾಗದಲ್ಲಿ ಹಾಡಿದಾಗ ಅರ್ಥದ ಭಾವದ ಮೇಲೆ ಮತ್ತು ಮಾತುಗಾರಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತೋರಿಸಿಕೊಟ್ಟರು. ಭೈರವಿ ಅಷ್ಟತಾಳದ ಪದ್ಯವನ್ನು ತ್ರಿವುಡೆ ಏಕ ಕೋರೆತಾಳದಲ್ಲಿ ಹಾಡುವುದು ತೆಂಕು ಬಡಗು ಎರಡೂ ತಿಟ್ಟಿನಲ್ಲಿ ಛಾಲ್ತಿ ಇದೆ. ಆದರೆ ಘಂಟಾರವ ಅಷ್ಟತಾಳದ ಪದ್ಯದ ಸಾಹಿತ್ಯ ವಿಸ್ತಾರ ಕಡಿಮೆ ಇದ್ದು ಅದನ್ನು ಅದೇ ಮಟ್ಟಿನಲ್ಲಿ ಹಾಡುವುದು ಸುಲಭವಾದರೂ ತ್ರಿವುಡೆ ತಾಳದಲ್ಲಿ ಹಾಡಲು ಭಾಗವತಿಕೆಯಲ್ಲಿ ಅಸಾಧಾರಣ ಸಿದ್ಧಿ ಬೇಕಾಗುತ್ತದೆ. ರಮೇಶ ಭಟ್ಟರು ನಿರರ್ಗಳವಾಗಿ ಹಳೆಯ ಆರಭಿ,ಅಠಾಣ,ದುರ್ಗ ಸುರುಟಿ ಹಿಂದೋಳ ಇನ್ನೂ ಅನೇಕ ರಾಗಗಳನ್ನು ಬಳಸಿ ಪರಂಪರೆಯ ಮಟ್ಟಿನಲ್ಲಿ ಎರಡು ಪದ್ಯಗಳನ್ನು ಬೇರೆ ಬೇರೆ ವಿಧಾನದಲ್ಲಿ ಹಾಡಿದರು.ಪರಿಣಾಮ ಈ ಎರಡೂ ಬೇರೆ ಬೇರೆ ರಾಗದ ಸಂದರ್ಭದಲ್ಲಿ ಅದೇ ಅರ್ಥದಾರಿಗಳ ಮಾತಿನ ಶೈಲಿ ಅರ್ಥಗಾರಿಕೆ ಬೇರೆಯೇ ಆಗಿದ್ದು ವಿಶೇಷವೆನಿಸಿತು.ಇದೇ ರೀತಿ ಸುಭದ್ರಾ ಕಲ್ಯಾಣದ “ಆವ ನಾರಿಯ ಮೇಲೆ ಮನವಾಯ್ತು ನಿಮಗೆ ಈ ವಿದದಿ ನಗಲೇಕೆ ಕಾಂತ ಪೇಳೆನಗೆ…’ ಭಾಗದ ಸತ್ಯಭಾಮೆ-ಕೃಷ್ಣನ ಸಂವಾದ ಭಾಗದಲಿ Éಸತ್ಯಭಾಮೆಯಾಗಿ ಕರುಣಾಕರ ಶೆಟ್ಟಿ ಮತ್ತು ಕೃಷ್ಣನಾಗಿ ನಾರಾಯಣ ಹೆಗಡೆಯವರು ಅರ್ಧ ತಾಸು ಅವಧಿಯಲ್ಲಿ ಅರ್ಥಾಂತರಂಗದ ಸಾಧ್ಯತೆಯನ್ನು ಪ್ರಸ್ತುತ ಪಡಿಸಿದರು.ಬೇರೆ ಬೇರೆ ರಸದ ಸನ್ನಿವೇಷವನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಶ್ರೀ ಕ್ರಷ್ಣ ಪರಂಧಾಮದ ಕೃಷ್ಣನಾಗಿ ಹರೀಶ ಬೊಳಂಜಿಮೊಗರು, ದುರ್ವಾಸನಾಗಿ ರಾಧಾಕೃಷ್ಣ ಕಲ್ಚಾರ್‌ ಒಬ್ಬರಿಗೊಬ್ಬರು ಈ ಶತಮಾನದ ಅಪೂರ್ವ ಜೋಡಿ ಎನ್ನುವುದನ್ನು ಸಾಬೀತು ಪಡಿಸಿದರು. ಪಾರ್ವತಿ ಕಲ್ಯಾಣದ ಪಾರ್ವತಿ ಮತ್ತು ಭೈರಾಗಿ ಈಶ್ವರನ ಸಂವಾದದ ಬಳಿಕ ಬೆಳಗಿನ ಗೋಷ್ಠಿ ಮುಕ್ತಾಯವಾಯಿತು.ನಾಲ್ಕೂ ಪ್ರಸಂಗಗಳಲ್ಲಿ ರಮೇಶ ಭಟ್‌ ಮತ್ತು ಮುರಾರಿ ಕಡಂಬಳಿತ್ತಾಯರ ಹಿಮ್ಮೇಳ ರಂಜಿಸಿತು.

 ಭೋಜನ ವಿರಾಮದ ನಂತರ ಆಹ್ವಾನಿತ ಶ್ರೋತೃಗಳು ಮತ್ತು ಹಿರಿಯ ಅರ್ಥದಾರಿಗಳಿಂದ ನಾಲ್ಕು ಸನ್ನಿವೇಷಗಳ ಅವಲೋಕನ ನಡೆಯಿತು. ಸಾಮಗ, ಕುಂಡಂತಾಯರಿಂದ ಒಟ್ಟು ಕಾರ್ಯಕ್ರಮದ ಅವಲೋಕನ ನಡೆಯಿತು.ಬಳಿಕ ಹಿರಿಯ ಕಲಾವಿದರಿಂದ “ಸುಧನ್ವ ಕಾಳಗ’ ಪ್ರಸಂಗದ ತಾಳ ಮದ್ದಳೆ ನೆರವೇರಿತು.ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯರೊಂದಿಗೆ ಅನೇಕ ಹವ್ಯಾಸಿ ಕಲಾವಿದರು ಭಾಗವಹಿಸಿದರು.ಸುಧನ್ವನಾಗಿ ಕಲ್ಚಾರ್‌, ಅರ್ಜುನನಾಗಿ ಸಾಮಗ, ಪ್ರಭಾವತಿಯಾಗಿ ಅಣ್ಣಯ್ಯ ಪಾಲನ್‌ ಮತ್ತು ಮೋಹನ ತೋನ್ಸೆ ,ಕೃಷ್ಣನಾಗಿ ಬಳಂತಿಮೊಗರು, ನಾಗರಾಜ ಉಡುಪ ಭಾಗವಹಿಸಿದರು.

 ಯಕ್ಷಗಾನ ಕಲೆ ಸಂದಿಗ್ಧತೆಯಲ್ಲಿರುವ ಈ ಸಂದರ್ಭದಲ್ಲಿ ಅದರ ಸಾಂಪ್ರದಾಯಿಕ ಸ್ವರೂಪವನ್ನು ಯಥಾರೂಪದಲ್ಲಿ ಉಳಿಸಿ ಅನಂತರ ಬೆಳೆಸುವ ಅಗತ್ಯ ಇದೆ.ಈ ನಿಟ್ಟಿನಲ್ಲಿ ಶಾಸ್ತ್ರೀಯ,ವೈಜ್ಞಾನಿಕ ಯೋಚನೆ ಯೋಜನೆಯೊಂದಿಗೆ ರಂಗಕ್ಕಿಳಿದಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ವರ್ಷವಿಡೀ ಅನೇಕ ಅರ್ಥಪೂರ್ಣ ಕಾರ್ಯಕ್ರಮವನ್ನು ಯಕ್ಷಗಾನಕ್ಕೆ ಸಂಬಂಧ ಪಟ್ಟ ಹಾಗೆ ಮಾಡುತ್ತಾ ಬಂದಿದೆ. ಕಳೆದ ಐದು ವರ್ಷಗಳಿಂದ ಆಟ ಕೂಟ ,ಪೂರ್ವರಂಗ ಪ್ರಾತ್ಯಕ್ಷಿಕೆ ಗಾನ ವೈವಿದ್ಯ, ಸಹಿತ ಈ ವಲಯಕ್ಕೆ ಸಲ್ಲುವ ಅನೇಕ ಕಾರ್ಯಕ್ರಮವನ್ನು ಮಾಡಿ ಜನಮನ್ನಣೆ ಗಳಿಸಿದೆ.ಕೇವಲ ಕಲಾ ಪ್ರದರ್ಶನಗಳಿಗೆ ಸೀಮಿತಗೊಳ್ಳದೆ ಒಂದಿಡೀ ಕಲಾ ವಲಯವನ್ನು ಪೋಷಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಆಂದೋಲನವಾಗಿ ತನ್ನ ಕಾಯಕದಲ್ಲಿ ತೊಡಗಿಸಿ ಕೊಂಡಿದೆ. ಸಾಂಪ್ರದಾಯಿಕ ಸೊಗಸನ್ನು ಆಧುನಿಕತೆಯ ಸೌಂದರ್ಯಕ್ಕೆ ಅಳವಡಿಸಿ ಕಲೆಯನ್ನು ನವನವೀನಗೊಳಿಸುವ ಮಹತ್ತರ ಉದ್ದೇಶವೂ ಇದರ ಹಿಂದಿದೆ. ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಯಕ್ಷಗಾನಕ್ಕೆ ತನ್ನಿಂದೇನಾದರು ಸಲ್ಲಬೇಕೆಂಬ ಇರಾದೆಯಿಂದ ಹುಟ್ಟು ಹಾಕಿದ ಅವರ ಕನಸಿನ ಕೂಸು ಸಿರಿಬಾಗಿಲು ಪ್ರತಿಷ್ಠಾನ. ಅದು ಹೆಮ್ಮರವಾಗಿ ಬೆಳೆಯಲು ಕಲಾಭಿಮಾನಿಗಳ ಸಹಕಾರ ಅಗತ್ಯ.
                    
ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next