ಬೆಂಗಳೂರು: ಲಾಕ್‌ಡೌನ್ ಮೇ 3ರ ವರೆಗೆ ಮುಂದುವರಿಕೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಶ್ರಯ ಪಡೆದಿರುವ ವಲಸೆ ಕಾರ್ಮಿಕರ ಊಟ ಮತ್ತು ವಸತಿ ಕುರಿತು ಗಮನಹರಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಿ, ಆರೋಗ್ಯ ತಪಾಸಣೆ ಮಾಡಿಸಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಈ ಕುರಿತು ಸಮಾಜ ಕಲ್ಯಾಣ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಟಾರ್ ಹಾಗೂ ಅಧಿಕಾರಿಗಳ ಜತೆ ಮಾತನಾಡಿದ ಮುಖ್ಯಮಂತ್ರಿಯವರು, ಕಲ್ಯಾಣ ಮಂಟಪ, ಸಮುದಾಯ ಭವನ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಆಶ್ರಯ ಪಡೆದಿರುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಿ ಎಂದು ಹೇಳಿದ್ದಾರೆ.
ಮೊಬೈಲ್ ಟೆಸ್ಟಿಂಗ್ ಬೂತ್‌ಗೆ ಚಾಲನೆ
ಸಿಎಂ ಯಡಿಯೂರಪ್ಪ ಅವರು ಗುರುವಾರ ಕೋವಿಡ್ ಟೆಸ್ಟಿಂಗ್ ಮೊಬೈಲ್ ಬೂತ್‌ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು. ಮೊಬೈಲ್ ಟೆಸ್ಟಿಂಗ್ ಬೂತ್ ಪ್ರತಿ ವಾರ್ಡ್ ಗಳಲ್ಲಿ ಸ್ಥಾಪಿಸಿ ಅದರ ಮೂಲಕ ಕೋವಿಡ್ -19 ಟೆಸ್ಟಿಂಗ್ ಮಾಡಲಾಗುವುದು. ಇದರಿಂದ ತಪಾಸಣೆಗೆ ಅನುಕೂಲವಾಗಲಿದೆ ಎಂದರು.