ಹೆಣ್ಣು ಸಮಾಜದ ಕಣ್ಣು. ಸ್ತ್ರೀ ಇರುವ ಮನೆ ಅಚ್ಚುಕಟ್ಟಾಗಿ ಇರುತ್ತದೆ. “ಗೃಹಿಣೀ ಗೃಹ ಮುಚ್ಯತೇ’ ಎನ್ನುವುದೇ ಆ ಕಾರಣಕ್ಕೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ, ಅವಳ ವಿಶೇಷತೆಗಳಿಗೆ ತಕ್ಕುದಾದ ವಿಶೇಷ ಗೌರವ, ಜವಾಬ್ದಾರಿಗಳನ್ನು ವಹಿಸಿದ್ದಾರೆ. ಶಿಕ್ಷಣವಿಲ್ಲದೆ ಸ್ವೇಚ್ಛೆಯಿಂದ ವರ್ತಿಸುವುದು ಎಂದೂ ಸ್ವಾತಂತ್ರ್ಯವಾಗದು. ಸ್ವಾತಂತ್ರ್ಯ, ಮನುಜನಿಗೆ ನಿಸರ್ಗದತ್ತವಾಗಿ ಬಂದ ತಂತ್ರ.
ಅದರಂತೆ ನಡೆಯುವುದೇ ನಿಜವಾದ ಸ್ವಾತಂತ್ರ್ಯ. ಪುರುಷ ಒಂದು ಬಗೆಯ ಶರೀರ, ಮನಸ್ಸುಗಳನ್ನು ಹೊತ್ತು ಬಂದಿದ್ದಾನೆ. ಸ್ತ್ರೀ ಇನ್ನೊಂದು ಬಗೆಯ ದೇಹ, ಮನಸ್ಸುಗಳನ್ನು ಹೊಂದಿ ಬಂದಿದ್ದಾಳೆ. ಅದರಂತೆ, ನಿರ್ವಹಿಸುವ ಕೆಲಸವೂ ಕೆಲವೊಮ್ಮೆ ಬೇರೆ ಬೇರೆಯಾಗಿರುತ್ತವೆ. ಇಬ್ಬರೂ, ಅವರವರಿಗೆ ಒದಗಿ ಬಂದ ಸೌಲಭ್ಯಕ್ಕೆ ಅನುಗುಣವಾಗಿ, ಒಳ್ಳೆಯ ಜೀವನವನ್ನು ನಿರ್ವಹಿಸುವಂತಾಗುವುದೇ ಸಹಬಾಳ್ವೆ. ಅವನ ಉಡುಪನ್ನು ಇವಳು ಧರಿಸುವುದು,
ಇವಳ ಉಡುಪನ್ನು ಅವನು ತೊಡುವುದು, ಸಮಾನತೆ ಎನಿಸಿಕೊಳ್ಳುವುದಿಲ್ಲ. ಶಿವ ಶಕ್ತತ್ಮಕಂ ಇದಂ ಜಗತ್- ಅಂದರೆ, ಶಿವ- ಶಕ್ತಿಯರು ಸೇರಿಯೇ ಈ ಸೃಷ್ಟಿ. ಸ್ತ್ರೀ, ಶಕ್ತಿ ಸ್ವರೂಪಿಣಿ. ಇದು ಭಾರತೀಯರ ದೃಷ್ಟಿಕೋನ. ಇಲ್ಲಿ ನಾ ಹೆಚ್ಚು, ನೀ ಕಡಿಮೆ ಎಂಬ ಪ್ರಶ್ನೆ ಇಲ್ಲ. ಪುರುಷ ಮತ್ತು ಸ್ತ್ರೀ ಇಬ್ಬರೂ, ಯೋಗ-ಭೋಗಮಯ ಜೀವನ ನಡೆಸಲು, ಪರಸ್ಪರರನ್ನು ಅವಲಂಬಿಸಿದ್ದಾರೆ.
ಒಬ್ಬರ ಅವಶ್ಯಕತೆಯನ್ನು ಇನ್ನೊಬ್ಬರು ಪೂರೈಸಬಲ್ಲರು. ಪರಮಾರ್ಥವನ್ನು ಸಾಧಿಸಬಲ್ಲರು. ಇದಕ್ಕಾಗಿಯೇ ಗೃಹಸ್ಥಾಶ್ರಮ-ವಿವಾಹವೆಂಬ ಪದತಿ ಚಾಲ್ತಿಯಲ್ಲಿರುವುದು. ಹೀಗಿರುವಾಗ, ಒಬ್ಬರನ್ನೊಬ್ಬರು ಪೂಜ್ಯ ಭಾವದಿಂದ ನೋಡುವುದು ಮುಖ್ಯ. ಪ್ರವಚನಗಳ, ಒಳ್ಳೆಯ ಕೆಲಸಗಳ ಆರಂಭದಲ್ಲಿ, ಸ್ತ್ರೀ ಹಸ್ತದಿಂದ ದೀಪ ಬೆಳಗಿಸುವ ಮೂಲಕ, ವಿದ್ಯಾದೇವಿಯ ಅನುಗ್ರಹ ಪಡೆಯಬೇಕು ಎಂಬುದು ಶ್ರೀರಂಗ ಮಹಾಗುರುಗಳ ಪಾಠವಾಗಿತ್ತು.
* ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ