Advertisement
ಬದಲಾವಣೆ ಪರ್ವ“ಇಂಥದ್ದೊಂದು ಪಾತ್ರ ಮಾಡಬೇಕು ಅಂತ ಕಾಯುತ್ತಿದ್ದೆ. ಅದು “8ಎಂಎಂ’ ಮೂಲಕ ಈಡೇರಿದ ಖುಷಿ ನನ್ನದು. ನಿಜ ಹೇಳುವುದಾದರೆ, ಆರಂಭದಲ್ಲಿ ನನ್ನನ್ನು ನೋಡಿದವರಿಗೆ ಅವನೊಬ್ಬ ಕಳ್ಳ ಎನಿಸಬಹುದು. ಆದರೆ, ನೋಡ್ತಾ ನೋಡ್ತಾ ಅವನೊಬ್ಬ ರಿಯಲ್ ಹೀರೋ ಅನಿಸೋಕೆ ಶುರುವಾಗುತ್ತೆ. ದ್ವಿತಿಯಾರ್ಧದಲ್ಲಿ ಅವನ ಬದುಕಿನ ಹೊಸ ಪುಟ ತೆರೆದುಕೊಳ್ಳುತ್ತೆ. ಏನು, ಎತ್ತ ಎಂಬ ಕುತೂಹಲದೊಂದಿಗೇ ಚಿತ್ರ ಸಾಗುತ್ತೆ. ಈ ಮೊದಲು ಎಲ್ಲೂ ರಿಜಿಸ್ಟರ್ ಆಗದ ಪಾತ್ರ ನನಗಿಲ್ಲಿ ಸಿಕ್ಕಿದೆ. ಒಬ್ಬ ಕಲಾವಿದ ಎಲ್ಲವನ್ನೂ ಬ್ರೇಕ್ ಮಾಡಿ ಮಾಡುವಂತಹ ಪಾತ್ರ ನಿಜಕ್ಕೂ ನೋಡುಗರಿಗೆ ಅಚ್ಚರಿ ಮೂಡಿಸುತ್ತೆ. ಇದುವರೆಗೆ ಜನರು ನನ್ನ ನೋಡಿದ್ದು ಬೇರೆ ರೀತಿ. ಈ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ, ನೋಟ ಎಲ್ಲವೂ ಐವತ್ತು ಪ್ಲಸ್‌ಗೆ ತಕ್ಕಂತೆ ಸಿಕ್ಕಿದೆ. ನಾನು ಕಾಮಿಡಿ ಮಾಡಿದರೆ ಜನ ನೋಡಿ ಇಷ್ಟಪಡ್ತಾರೆ. ಅದೇ ಹೊಸತನ್ನು ಕೊಟ್ಟರೆ, ಇನ್ನಷ್ಟು ಕುತೂಹಲಗೊಳ್ಳುತ್ತಾರೆ. ಆ ಕುತೂಹಲ ಈ ಚಿತ್ರದಲ್ಲಿದೆ. ಎಲ್ಲರೂ ಪ್ರೀತಿಯಿಂದ ನವರಸನಾಯಕ ಅಂತಾರೆ. ಆದರೆ, ನನಗೆ ನವರಸನಾಗಿ ಕಂಡಿಲ್ಲ ಎಂಬ ಸಣ್ಣ ಬೇಸರವೂ ಇತ್ತು. ಅದು ಈ ಸಿನ್ಮಾ ಮೂಲಕ ಈಡೇರಿದೆ ಎಂದುಕೊಳ್ತೀನಿ. ಪ್ರತಿ ಕಲಾವಿದನಿಗೂ ಫಿಫ್ಟಿ ಪ್ಲಸ್ ಆದಾಗ ಬದಲಾವಣೆ ಬೇಕೆನಿಸುತ್ತೆ. ಅಂತಹ ಬದಲಾವಣೆಯನ್ನು ಸ್ವತಃ ಡಾ.ರಾಜಕುಮಾರ್ ಅವರೂ ಬಯಸಿದ್ದರು. ಒಂದು ವಯಸ್ಸಿನವರೆಗೆ ಎಲ್ಲಾ ನಟರು ಮುದ್ದಾದ ನಾಯಕಿಯರ ಜೊತೆ ನಟಿಸುವುದು ಸಾಮಾನ್ಯ. ಆದರೆ, ಫಿಫ್ಟಿ ಪ್ಲಸ್ ಆಗುತ್ತಿದ್ದಂತೆಯೇ ಹೊಸ ಬದಲಾವಣೆ ಬಯಸುವುದು ಸುಳ್ಳಲ್ಲ. ರಾಜಕುಮಾರ್ ಅವರೇ ಬದಲಾವಣೆ ಬೇಕು ಅಂದಿದ್ದರು. ಆಗ ಶುರುವಾಗಿದ್ದೇ, “ವಸಂತಗೀತ’ ಚಿತ್ರ. ಅದೊಂದು ಅದ್ಭುತ ಚಿತ್ರವಾಗಿ ಹೊರಹೊಮ್ಮಿತ್ತು.
Related Articles
– ಜಗ್ಗೇಶ್, ನಟ
Advertisement
ಅಪರೂಪದ ಸಂದೇಶ“ಸಿನಿಮಾ ಅನ್ನೋದು ಪವರ್‌ಫುಲ್ ಮೀಡಿಯಾ. ನಾನು ನಿರ್ದೇಶಕ ಆಗಬೇಕು ಅಂತ ಬಂದ ಉದ್ದೇಶ, ಸಿನಿಮಾ ಮೂಲಕ ನನ್ನೊಳಗಿನ ಆಲೋಚನೆಗಳನ್ನು ಜನರಿಗೆ ತಲುಪಿಸಬಹುದು ಎಂಬ ಕಾರಣಕ್ಕೆ. ಇದರ ಒಟ್ಟಾರೆಯ ಹೂರಣ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಇರುವಂತಹ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬ ಕಾರಣಕ್ಕೆ ನಾನು ನಿರ್ದೇಶಕನಾದೆ. ನಾನು ಇದುವರೆಗೆ ಮಾಡಿದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಆ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯ ಅಂಶಗಳನ್ನು ಕಾಣಬಹುದು. “ಮೊಗ್ಗಿನ ಮನಸು’, “ಬಚ್ಚನ್; “ಕೃಷ್ಣನ್ ಲವ್‌ಸ್ಟೋರಿ’ ಇವು ಪಕ್ಕಾ ಕಮರ್ಷಿಯಲ್ ಆಗಿದ್ದರೂ ಅಲ್ಲಿ ಸಾಮಾಜಿಕ ಜವಾಬ್ದಾರಿ ಇರುವಂತಹ ಅಂಶಗಳಿದ್ದವು. ನಾನು ನಿರ್ದೇಶಕನಾದ ಉದ್ದೇಶ ಸಾಕಾರವಾದ ತೃಪ್ತಭಾವ ನನ್ನದು. ಈಗ “ತಾಯಿಗೆ ತಕ್ಕ ಮಗ’ ಚಿತ್ರದ ಮೂಲಕ ನಾನು ನಿರ್ಮಾಪಕನಾಗಿದ್ದೇನೆ. ಇದರ ಉದ್ದೇಶ ಕೂಡ ಅದೇ ಆಗಿದೆ. ಕೆಲವೊಮ್ಮೆ ಇಂತಹ ಅಪರೂಪದ ವಿಷಯಗಳನ್ನಿಟ್ಟು ಸಿನಿಮಾ ಮಾಡ್ತೀನಿ ಅಂತ ಹೊರಟರೆ, ಕೆಲ ನಿರ್ಮಾಪಕರಿಗೆ ಅದು ಇಷ್ಟ ಆಗದೇ ಇರಬಹುದು. ಅಥವಾ ನಿರ್ದೇಶಕ, ಆ ನಿರ್ಮಾಪಕನನ್ನು ಒಪ್ಪಿಸಲು ಸಾಧ್ಯವಾಗದೇ ಇರಬಹುದು. ಯಾಕೆಂದರೆ, ಹಣ ಹಾಕುವ ನಿರ್ಮಾಪಕರ ದೃಷ್ಟಿಕೋನ ಬೇರೆಯದ್ದೇ ಆಗಿರುತ್ತೆ. ಹೀಗಾಗಿ “ತಾಯಿಗೆ ತಕ್ಕ ಮಗ’ ಕಥೆ ಮತ್ತು ಅದರೊಳಗಿರುವ ಅಂಶಗಳನ್ನಿಟ್ಟುಕೊಂಡು ನಾನೇ ಯಾಕೆ ನಿರ್ಮಾಣ ಮಾಡಬಾರದು ಅಂತೆನಿಸಿ, ನಿರ್ಮಾಣಕ್ಕೂ ಇಳಿದೆ. ನನ್ನತನದ ಸಿನಿಮಾಗಳಲ್ಲಿ ನಾನು ಏನೆಲ್ಲಾ ಆಸೆ ಪಡ್ತೀನಿ ಅದೆಲ್ಲವನ್ನೂ ಅಳವಡಿಸಲು ಇಲ್ಲಿ ಸಾಧ್ಯವಾಗಿದೆ ಎಂಬ ಖುಷಿ ಇದೆ. ನಾನು ನನ್ನದೇ ಆದ ನಿರ್ಮಾಣ ಸಂಸ್ಥೆಯಡಿ “ತಾಯಿಗೆ ತಕ್ಕ ಮಗ’ ಚಿತ್ರ ಮಾಡಿದ್ದು ಹೆಮ್ಮೆ ಎನಿಸಿದೆ. ನನ್ನ ಮತ್ತು ನನ್ನ ನಿರ್ಮಾಣ ಸಂಸ್ಥೆಯ ಅಜೆಂಡಾ ಒಂದೇ. ಅದು ಕನ್ನಡತನ ಮತ್ತು ಸಾಮಾಜಿಕ ಕಳಕಳಿ ಇರುವ ಸಿನಿಮಾ ಮಾಡಬೇಕೆಂಬುದು. ನಾನು ಇಲ್ಲಿಯವರೆಗೆ ರಿಮೇಕ್ ಚಿತ್ರಗಳನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಕನ್ನಡ ಭಾಷೆಯ ಚಿತ್ರಗಳು ಯಾವ ಭಾಷೆಯ ಚಿತ್ರಗಳಿಗಿಂತಲೂ ಕಡಿಮೆ ಇಲ್ಲ. ಕಡಿಮೆ ಎನಿಸಬಾರದು. ಅಂತಹ ಚಿತ್ರ ಕೊಡಬೇಕು ಎಂಬ ಮಾತನ್ನು ನನ್ನ ಗುರು ಹಂಸಲೇಖ ಅವರು ಹೇಳಿದ್ದಾರೆ. ಹಾಗಾಗಿ ನಾನು ಆರಂಭದಿಂದಲೂ ನಮ್ಮತನ ಇರುವಂತಹ ಅದರಲ್ಲೂ ಕನ್ನಡತನ ಬಿಟ್ಟುಕೊಡದೆ, ಸಾಮಾಜಿಕ ಸಂದೇಶ ಇರುವ ಚಿತ್ರ ಮಾಡುತ್ತ ಬಂದಿದ್ದೇನೆ. “ತಾಯಿಗೆ ತಕ್ಕ ಮಗ’ ಅಂತಹ ಕನ್ನಡತನ ಮತ್ತು ಅಪರೂಪದ ಸಂದೇಶ ಸಾರುವ ಚಿತ್ರ ಅಂತ ಹೆಮ್ಮೆಯಿಂದ ಹೇಳಿಕೊಳ್ತೀನಿ.
“
ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ತಾಯಿ ತನ್ನ ಮಗನನ್ನು ಹೇಗೆ ಬೆಳೆಸಬೇಕು, ಆ ಮಗ ತನ್ನ ತಾಯಿಯ ಸಿದ್ಧಾಂತವನ್ನು ಹೇಗೆ ಪಾಲಿಸಬೇಕು ಎಂಬ ಪವರ್‌ಫುಲ್ ಅಂಶವಿದೆ. ನಾವೊಬ್ಬ ಪ್ರಜೆಯಾಗಿ ನಮಗಿರುವ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎಂಬ ವಿಷಯವಿದೆ. ಚಿತ್ರದಲ್ಲಿರುವ ಎಲ್ಲಾ ವಿಚಾರ, ಘಟನೆ, ಪಾತ್ರಗಳು ನಿಜ ಬದುಕಿನಲ್ಲಿ ಸ್ಫೂರ್ತಿಯಾಗಿದ್ದು. ಹಾಗಂತ ಯಾವುದೋ ಒಂದು ಘಟನೆ, ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಡೆದ ಘಟನೆಯಲ್ಲ. ಸಮಾಜದಲ್ಲಿ ನಡೆದ ಸಾಕಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಅದನ್ನೆಲ್ಲಾ ದೃಶ್ಯರೂಪಕ್ಕೆ ಅಳವಡಿಸಿದ್ದೇನೆ. ಒಂದೇ ಮಾತಲ್ಲಿ ಹೇಳುವುದಾದರೆ, “ತಾಯಿಗೆ ತಕ್ಕ ಮಗ’ ಎಲ್ಲರನ್ನೂ ಹುರುದುಂಬಿಸುವ ಸಿನಿಮಾ. ಸಮಾಜಕ್ಕೆ ಅಗತ್ಯವಾಗಿ ಬೇಕಿರೋದು ಕೋಪ. ಅದನ್ನೇ ಇಲ್ಲಿ ಮುಖ್ಯವಾಗಿರಿಸಿಕೊಂಡು ಕಥೆ ಮಾಡಿದ್ದೇನೆ. ಒಂದು ಸಮಸ್ಯೆ ಎದುರಾದಾಗ, ಆ ಕ್ಷಣಕ್ಕೆ ಮಾತ್ರ ಕೋಪ ಮಾಡಿಕೊಂಡು, ಆ ಸಮಸ್ಯೆ ಬಗೆಹರಿದ ನಂತರ ಕೋಪ ಬಿಟ್ಟುಬಿಡುವುದಲ್ಲ. ಆದರೆ, ಆ ಕೋಪಕ್ಕೆ ಕಾರಣವಾದ ಮೂಲ ಸಮಸ್ಯೆ ಏನು ಅಂತ ತಲೆಕೆಡಿಸಿಕೊಂಡರೆ, ಅದಕ್ಕೊಂದು ಶಾಶ್ವತ ಪರಿಹಾರ ಸಿಗುತ್ತೆ. ಅದೇ ವಿಷಯ ಚಿತ್ರದಲ್ಲಿದೆ. ಒಳ್ಳೆಯ ಸಮಾಜ ಬೇಕಾದರೆ, ಯಾರಾದರೂ ಕೋಪ ಮಾಡಿಕೊಳ್ಳಬೇಕು. ಇದು “ತಾಯಿಗೆ ತಕ್ಕ ಮಗ’ನ ಸಿದ್ಧಾಂತ. ಕೋಪದ ಉದ್ದೇಶ, ನಾಲ್ಕು ಜನರಿಗೆ ಒಳ್ಳೆಯದಾಗಬೇಕು. ಇಲ್ಲಿ ಮೋಹನ್‌ದಾಸ್ ಕೂಡ ರೆಬೆಲ್ ಆಗ್ತಾನೆ. ಯಾವ ವಿಷಯಕ್ಕೆ ಎಂಬುದೇ ಕಥೆ.
ಶಶಾಂಕ್, ನಿರ್ದೇಶಕ
ಚಿತ್ರರಂಗಕ್ಕೆ ಕೊಡುಗೆ
“ನನಗೆ ಇಂತಹ ಚಿತ್ರಗಳನ್ನು ನಿರ್ದೇಶಿಸುತ್ತಿರುವುದರಿಂದ ತೃಪ್ತಿ ಇದೆ. ಹಾಗೆಯೇ ಖುಷಿಯೂ ಇದೆ. “ಪುಟ 109′ ಒಂದು ಫಾರ್ಮಲ ಒಳಗಿರುವ ಕ್ರೈಮ್ ಥ್ರಿಲ್ಲರ್. ಆದರೆ, ನರೇಷನ್ ಮಾತ್ರ ಫಾರ್ಮಲ ಒಳಗಿರುವುದಿಲ್ಲ. ಅದೇ ಈ ಚಿತ್ರದ ಹೈಲೈಟ್. ಒಂದು ಕ್ರೈಮ್ ಥ್ರಿಲ್ಲರ್‌ನಲ್ಲೂ ಈ ರೀತಿಯಾಗಿ ನರೇಟ್ ಮಾಡಬಹುದಾ ಎಂಬಷ್ಟರ ಮಟ್ಟಿಗೆ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದೇನೆ. ಚಿತ್ರ ನೋಡುವ ಪ್ರತಿಯೊಬ್ಬರಿಗೂ ಹೊಸ ಅನುಭವ ಕಟ್ಟಿಕೊಡುತ್ತದೆ ಎಂಬ ಗ್ಯಾರಂಟಿ ಕೊಡ್ತೀನಿ. ಅದು ಯಾವ ರೀತಿಯೆಂದರೆ, ಕೊಡಚಾದ್ರಿಗೆ ಪಯಣ ಬೆಳೆಸುವ ಪ್ರಯಾಣಿಕರು, ಕೊಡಚಾದ್ರಿ ಬೆಟ್ಟ ನೋಡಿ, ಒಂಬತ್ತು ಕಿ.ಮೀ. ದೂರ ಹತ್ತಬೇಕಾ? ಅದು ತುಂಬಾ ಟಫ್ ಎನಿಸುವುದೂ ಹೌದು. ಆದರೆ, ಬೆಟ್ಟದ ತುತ್ತ ತುದಿಗೆ ಹೋದಾಗ, ಆಗುವ ಖುಷಿಗೆ ಪಾರವೇ ಇರಲ್ಲ. ಇಂತಹ ಜಾಗವನ್ನು ನಾವು ಮೇಲೆ ಹತ್ತದೆ ಮಿಸ್ ಮಾಡಿಕೊಳ್ಳುತ್ತಿದ್ದೆವಲ್ಲಾ ಎಂಬ ಮಾತು ಕೇಳಿ ಬಂದಂತೆ, “ಪುಟ 109′ ಚಿತ್ರ ನೋಡುಗರಿಗೂ ಅಂಥದ್ದೇ ಅನುಭವ ಆಗುವುದರಲ್ಲಿ ಅನುಮಾನವಿಲ್ಲ. ಆರಂಭದಲ್ಲಿ ಸ್ವಲ್ಪ ಆಚೀಚೆ ಏನೋ ಆಗುತ್ತಿದೆಯಲ್ಲಾ ಅನಿಸಿದರೂ, ನೋಡುತ್ತಲೇ ಬ್ಯೂಟಿಫುಲ್ ಎನಿಸುತ್ತಾ ಹೋಗುತ್ತೆ.
“
ಪುಟ 109′ ರ ವಿಶೇಷವೆಂದರೆ, ಚಿತ್ರದಲ್ಲಿ ಶೇ.70ರಷ್ಟು ಭಾಗ ಎರಡೇ ಪಾತ್ರಗಳ ಮೂಲಕ ಸಿನಿಮಾ ಸಾಗುತ್ತದೆ. ಆ ಎರಡು ಪಾತ್ರಗಳನ್ನಿಟ್ಟುಕೊಂಡು ದೃಶ್ಯರೂಪ ಕಟ್ಟಿಕೊಡುವುದು ಸವಾಲಿನ ಕೆಲಸ. ಇಂತಹ ಪ್ರಯೋಗ ಮಾಡುವಾಗ ಕಷ್ಟ ಅನಿಸೋದು ನಿಜ. ಆದರೆ, ಬೇರೆ ಚಿತ್ರಗಳನ್ನು ಮಾಡುವಾಗ ಸಿಗದಂತಹ ತೃಪ್ತಿ ಇಲ್ಲಿ ಸಿಗುತ್ತೆ. ಇಂತಹ ಚಿತ್ರಗಳು ಚಿತ್ರರಂಗದಲ್ಲಿ ಕೊನೆಯವರೆಗೂ ನೆನಪಲ್ಲುಳಿಯುತ್ತವೆ. ಹಾಗಂತ, ನಾನು ಕಮರ್ಷಿಯಲ್ ಸಿನಿಮಾ ಮಾಡುವಾಗಲೂ ಟಿಪಿಕಲ್ ಸಬೆjಕ್ಟ್ ತೆಗೆದುಕೊಂಡಿಲ್ಲ ಅಂತಲ್ಲ, ಶೇ.80 ರಷ್ಟು ಕಮರ್ಷಿಯಲ್ ಅಂಶಗಳಿರುವ ಚಿತ್ರಗಳಲ್ಲೂ ಹೊಸ ರೀತಿಯ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ನಿಜ ಹೇಳುವುದಾದರೆ, ಕಮರ್ಷಿಯಲ್ ಚಿತ್ರಗಳಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳುವುದಕ್ಕಿಂತ ಇಂತಹ ಪ್ರಯೋಗಾತ್ಮಕ ಚಿತ್ರ ಮಾಡಿ, ಚಿತ್ರರಂಗಕ್ಕೆ ಸಣ್ಣ ಕೊಡುಗೆ ಕೊಡುವ ಬಯಕೆ ನನ್ನದು. “ಪುಟ 109′ ಒಂದು ಅದ್ಭುತ ಪಯಣ. ಮೊದಲೇ ಕಥೆ ಬಗ್ಗೆ ಚರ್ಚಿಸಿ, ಎಲ್ಲರಿಗೂ ಆತ್ಮವಿಶ್ವಾಸ ಹೆಚ್ಚಿದ್ದರಿಂದಲೇ ಚಿತ್ರಕ್ಕೆ ಮುಂದಾಗಿದ್ದು. ಈ ಚಿತ್ರ ಹೆಸರು ತಂದುಕೊಡುವ ಅದಮ್ಯ ವಿಶ್ವಾಸವಿದೆ.
ದಯಾಳ್ ಪದ್ಮನಾಭ್, ನಿರ್ದೇಶಕ ಕನಸಿನ ಸುತ್ತ …
*”ಜೀರ್ಜಿಂಬೆ’. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದೊಂದು ಸೈಕಲ್ ಕಥೆ. ಸರ್ಕಾರ ಹೆಣ್ಣು ಮಕ್ಕಳಿಗೆ ಸೈಕಲ್ ಭಾಗ್ಯ ಕೊಟ್ಟಂತಹ ವಿಷಯ ಇಟ್ಟುಕೊಂಡು ಮಾಡಿದ ಕಥೆ. ಸರ್ಕಾರಿ ಶಾಲೆ ಓದುವ ಹಳ್ಳಿ ಹುಡುಗಿಗೆ ಸೈಕಲ್ ಸಿಕ್ಕರೆ ಆಕೆಯ ಬದುಕು ಹೇಗೆಲ್ಲಾ ಬದಲಾವಣೆಯಾಗುತ್ತೆ ಎಂಬುದು ಕಥೆ. ಹದಿಮೂರು ವಯಸ್ಸಿನ ಬಾಲಕಿಯೊಬ್ಬಳನ್ನು ತನಗಿಂತ ಮೂರು ಪಟ್ಟು ವಯಸ್ಸಿನ ವ್ಯಕ್ತಿಗೆ ಮದ್ವೆ ಮಾಡಿಕೊಡುವ ನಿರ್ಧಾರ ಮಾಡಿದಾಗ, ಆಕೆ, ತನ್ನ ಸೈಕಲ್‌ನೊಂದಿಗೆ ರಾತ್ರೋ ರಾತ್ರಿ ಸುಮಾರು 78ಕಿ.ಮೀ. ಕ್ರಮಿಸಿ ಬೆಂಗಳೂರು ನಗರ ಸೇರುತ್ತಾಳೆ. ಕೇವಲ ಎಂಟು ವರ್ಷ ಓದಿದ್ದಕ್ಕೆ ಎರಡು ಚಕ್ರವಿರುವ ಸೈಕಲ್ ಸಿಕ್ಕಿದೆ. ಇನ್ನು ಎಂಟು ವರ್ಷ ಓದಿದರೆ ನಾಲ್ಕು ಚಕ್ರದ ಕಾರು ಸಿಗುತ್ತೆ ಎಂಬ ಕನಸು ಕಂಡು ತನ್ನ ಹೊಸ ಬದುಕು ಕಟ್ಟಿಕೊಳ್ಳುವ ಹುಡುಗಿಯ ಕಥೆ ಇಲ್ಲಿ ಹೈಲೈಟ್. ಎಷ್ಟೋ ಜನ ಪ್ಯಾಷನ್‌ಗೆ ಸೈಕಲ್ ತುಳೀತಾರೆ. ಇನ್ನೂ ಕೆಲವರು ಫ್ಯಾಷನ್‌ಗೆ ತುಳಿತಾರೆ. ಮತ್ತೆ ಕೆಲವರು ಫಿಟ್‌ನೆಸ್‌ಗೆ ಸೈಕಲ್ ತುಳೀತಾರೆ. ಆದರೆ, ಈ ಚಿತ್ರದ ಹುಡುಗಿಯೊಬ್ಬಳು, ತನ್ನ ಬದುಕನ್ನು ಬದಲಾಯಿಸಿಕೊಳ್ಳಲು ಸೈಕಲ್ ತುಳಿತಾಳೆ. ಇಲ್ಲಿ ಸೈಕಲ್ ಅನ್ನು ಒಂದು ರೂಪಕವಾಗಿ ತೋರಿಸಲಾಗಿದೆ. ಇಲ್ಲಿ ನಾಲ್ಕು ಹಂತದ ಕಥೆ ಇದೆ. ಅದನ್ನು ಅರ್ಥಪೂರ್ಣವಾಗಿ ತೋರಿಸಲಾಗಿದೆ. ಸಾಮಾನ್ಯವಾಗಿ ದೊಡ್ಡವರ ಸಿನಿಮಾ ನೋಡಲು ಮಕ್ಕಳು ಹೋಗುತ್ತಾರೆ. ಆದರೆ, ಮಕ್ಕಳ ಚಿತ್ರ ನೋಡೋಕೆ ಮಕ್ಕಳೇ ಹೋಗಲ್ಲ. ಇದು ಸಮೂಹ ಬಂಡವಾಳದ ಚಿತ್ರ. ಸುಮಾರು 40 ಜನರು ಹಣ ಹಾಕಿದ್ದಾರೆ. ಒಬ್ಬ ವಯೋವೃದ್ಧರು ತಮ್ಮ ಎಫ್ಡಿ ಹಣ ಒಂದು ಲಕ್ಷ ಹಾಕಿರುವುದು ವಿಶೇಷ. ಆದರೆ, ಮಧ್ಯೆ ಚಿತ್ರಕ್ಕೆ ಸಮಸ್ಯೆ ಆದಾಗ, ಪುಷ್ಕರ್ ಮಲ್ಲಿಕಾರ್ಜುನ್ ಸಾಥ್ ನೀಡಿ, ಈಗ ಚಿತ್ರವನ್ನು ನವೆಂಬರ್ 16 ರಂದು ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಳೆದ ವರ್ಷ ನಾಲ್ಕು ಪ್ರಶಸ್ತಿಗಳು ಸಿಕ್ಕಿವೆ. ಸಂಗೀತ ನಿರ್ದೇಶಕ ಚರಣ್‌ರಾಜ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. 28 ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಚಿತ್ರದಲ್ಲಿ ಸಿರಿ ವಾನಳ್ಳಿ, ಲಾವಣ್ಯ ನಟನಾ, ಪಲ್ಲವಿ, ಚಿತ್ರಾ, ಹಾಗು ಸುಮನ್ ನಗರ್‌ಕರ್ ನಟಿಸಿದ್ದಾರೆ.
ಕಾರ್ತಿಕ್ ಸರಗೂರು, ನಿರ್ದೇಶಕ ವಿಜಯ್ ಭರಮಸಾಗರ