Advertisement
ನಾವು ಹುಟ್ಟುತ್ತಲೆ ಯಾವುದನ್ನೂ ತಿಳಿದುಬಂದವರಾಗಿರುವುದಿಲ್ಲ. ಪ್ರತಿಯೊಂದನ್ನೂ ಕಲಿಯುವುದೇ ಆಗಿರುತ್ತದೆ. ಪ್ರತಿಯೊಂದು ಹಂತದಲ್ಲಿ ಕಲಿಯಲು ಬೆಟ್ಟದಷ್ಟಿರುವಾಗ ನನಗೆಲ್ಲವೂ ತಿಳಿದಿದೆ ಎಂದುಕೊಳ್ಳಲು ಹೇಗೆ ಸಾಧ್ಯ. ನಮಗೆ ಯಾರಾದರೂ ಏನನ್ನು ಹೇಳಲು ಬಂದಾಗ ಇತರರು ಸುಖ ಸುಮ್ಮಗೆ ನನಗೆ ಬೋಧಿಸಲು ಬರುತ್ತಾರೆ ಎನ್ನುವುದು ನಮ್ಮೊಳಗಿನ ಅರಿವು. ಅದೇನನ್ನೇ ಅವರು ಹೇಳಲಿ, ನಾನು ಏನು ಮಾಡಬೇಕು – ಮಾಡಬಾರದು, ಎನ್ನುವ ಜ್ಞಾನ ನಮ್ಮಲ್ಲಿದ್ದರೆ ಅವರ ಮಾತುಗಳನ್ನು ಒಮ್ಮೆ ವಿಶ್ಲೇಷಿಸಿ ಬಿಡಬಹುದು, ಅದರಲ್ಲೂ ನಮಗೆ ತಿಳಿಯಬೇಕಾದದ್ದು ಸಾಕಷ್ಟಿರಬಹುದು.
Related Articles
Advertisement
ಇಂದು ನಾನು ಸೇವಿಸುವ ನೀರು, ಉಸಿರಾಡುವ ಗಾಳಿ, ಇರುವ ನೆಲ, ಬೆಳಕು ಯಾವುದು ನನ್ನ ಸ್ವಂತದ್ದಲ್ಲ. ಎಲ್ಲವೂ ಆ ದೇವರ, ಪ್ರಕೃತಿ ಮಾತೆಯ ವರದಾನ. ಅವಳೊಮ್ಮೆಯೂ ಯೋಚಿಸಲೇ ಇಲ್ಲವಲ್ಲ. ಇದೆಲ್ಲವೂ ನನ್ನದು, ನಾನೇಕೆ ಇತರಿಗೆ ನೀಡಲಿ ಎಂದು. ಭೂಮಿಯ ಮೇಲಿರುವ ಎಲ್ಲ ಜೀವ ಸಂಕುಲಗಳನ್ನು ತನ್ನದಾಗಿ ಕಂಡಿದೆಯಲ್ಲ ಅದುವೇ ನಮ್ಮೆಲ್ಲರಿಗೂ ಮಾದರಿ.
ನಾನು ನನ್ನದು ನನ್ನಿಂದಲೇ ಎನ್ನುವುದು ಎಂದಿಗೂ ಒಳ್ಳೆಯದಲ್ಲ ಎನ್ನುವುದು ನಾವು ಕೇಳುತ್ತಲೇ ಬಂದಿರುವ ವಿಷಯ. ಅಂತಹ ಮನಸ್ಥಿತಿಯನ್ನು ಹೊಂದಿರುವವರು ಎಂದಿಗೂ ಯಶಸ್ಸಿನ ದಾರಿಯನ್ನು ಕಾಣಲು ಸಾಧ್ಯವಿಲ್ಲ ಎನ್ನುವುದನ್ನು ಕೇಳಿದ್ದೇವೆ. ಒಬ್ಬಳು ತಾಯಿ ತನಗಾಗಿ ಏನನ್ನೂ ಮಾಡುವುದಿಲ್ಲ. ತನ್ನ ಮನೆಯವರಿಗಾಗಿ ತನ್ನ ಕುಟುಂಬಕ್ಕಾಗಿ ಬದುಕುತ್ತಾಳೆ.
ಅದರೊಂದಿಗೆ ಇತರ ಮಕ್ಕಳನ್ನು ಕಂಡಾಗಲೂ ಅವಳ ಮಾತೃಹೃದಯ ಮಿಡಿಯುತ್ತದೆ. ಹಾಗೆಯೇ ಈ ಸಮಾಜಕ್ಕಾಗಿ, ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿದ ಅದೆಷ್ಟೋ ಜೀವಗಳನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ದೇಶಕ್ಕಾಗಿ, ತನ್ನವರನ್ನು ಬಿಟ್ಟು ತನ್ನ ಪ್ರಾಣವನ್ನು ಅರ್ಪಿಸಿದ ಅದೆಷ್ಟೋ ಮಹನೀಯರಿದ್ದಾರೆ, ಅವರೆಲ್ಲರೂ ಈ ಮನುಕುಲಕ್ಕೆ ಆದರ್ಶಪ್ರಾಯರು.
ತಿಳಿದೋ ತಿಳಿಯದೆಯೋ ನಮ್ಮೊಳಗೆ ಕೆಲವೊಮ್ಮೆ ಅನಾವಶ್ಯಕ ನಡೆಗಳು ಉಂಟಾಗುತ್ತದೆ. ಅವುಗಳಿಂದ ಪಾರಾಗಲು ಸಂದರ್ಭಗಳು ಬರುತ್ತದೆ. ಅಂತಹ ಹೊತ್ತಲ್ಲಿ ನಮ್ಮೊಳಗಿರುವ ಅಹಂ ತೊರೆದು, ನಾವು ಬೆಳೆಯಲು ಸನ್ಮಾರ್ಗವನ್ನು ಕಂಡುಕೊಳ್ಳುವುದು ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣ ನಮ್ಮದಾಗಿಸಿಕೊಳ್ಳುವುದು ಉತ್ತಮ.
-ಲತಾ ಚೆಂಡೆಡ್ಕ ಪಿ.
ವಿವೇಕಾನಂದ ಕಾಲೇಜು,
ಪುತ್ತೂರು