ಎಡವಟ್ಟುಗಳು ನನಗೆ ಎಲ್ಲಿಂದ ಅಂಟಿಕೊಂಡವು ಅಂತ ಕೇಳಬೇಡಿ. ಹಾಗೇನಾದರೂ ಕೇಳಿದರೆ ನಾನು ಏನೋ ಒಂದು ಹೇಳಿ, ನೀವು ಅದಲ್ಲ ಎಂದು, ನಾನು ಪುನಃ ಮತ್ತೇನೋ ಹೇಳಿ ಎಡವಟ್ಟಾಗೋದು ಬೇಡ. ಇದು ನಿಜಕ್ಕೂ ಎಲ್ಲಿಂದ ತಗುಲಿಕೊಂಡಿತು ಅಂತ ಗೊತ್ತೇ ಇಲ್ಲ. ಆದರೆ ಬುದ್ಧಿ ತಿಳಿದಾಗಿನಿಂದ ಇದು ನನ್ನನ್ನು ಪೇಚಿಗೆ ಸಿಕ್ಕಿಸದ ಕ್ಷಣಗಳೇ ಇಲ್ಲವೇನೋ. ಇದರ ಹಿಸ್ಟರಿ ಶುರುವಾಗೋದು ನಾನು ಹೈಸ್ಕೂಲಿನಲ್ಲಿ ಇದ್ದಾಗಿನಿಂದ. ಅದಕ್ಕೂ ಮೊದಲು ಇತ್ತಾ? ಗೊತ್ತಿಲ್ಲ. ಆದರೆ, ಸಣ್ಣಂದಿನಿಂದಲೂ ನನ್ನ ಸಂಬಂಧಿಕರ ನಡುವೆ ನಾನು ದೊಡ್ಡ ಟ್ಯೂಬ್‌ಲೈಟ್ ಅಂತಲೇ ಗುರುತಿಸಿಕೊಂಡಿದ್ದೆ. ನನಗದು ಆಗ ಗೊತ್ತಿಲ್ಲದೆ ಇದ್ದರೂ ಈಗ ಗೊತ್ತಾಗಿ ಹೋಗಿದೆ. ಸ್ವಿಚ್ಚು ಒತ್ತಿ ಅದೆಷ್ಟೋ ನಿಮಿಷದ ನಂತರ ಹತ್ತಲೋ ಬೇಡವೋ ಎಂದು ಆಲೋಚನೆ ಮಾಡಿ ಫಳಕ್ ಫಳಕ್ ಎಂದು, ಆನಂತರ ಅದು ಹೊತ್ತಿಕೊಳ್ಳುವಷ್ಟರಲ್ಲಿ ಅದರ ಸ್ವಿಚ್ ಹಾಕಿ ಕಾದ ವ್ಯಕ್ತಿ ನಿಂತಲ್ಲೇ ನಿದ್ದೆ ಮಾಡಿರುತ್ತಾನೆ.
ಥೇಟ್ ನಾನು ಹಾಗೆಯೇ ಇದ್ದೆ! ಸಭೆ, ಸಮಾರಂಭ ನಡೆದಾಗ ನನ್ನ ಅಜ್ಜನ ಮನೆಯಲ್ಲಿ ದೊಡ್ಡ ಪೆಂಡಾಲ್ ಹಾಕುವಷ್ಟು ನೆಂಟರು ಸೇರಿ ಗಲಾಟೆ ಎಬ್ಬಿಸುತ್ತಿದ್ದರು. ಭರಪೂರ ಮನರಂಜನೆ. ಹಾಡು, ಕುಣಿತ, ಆಟ ಎಲ್ಲವೂ ಅಲ್ಲಿರುತ್ತಿತ್ತು. ಒಬ್ಬೊಬ್ಬರು ಒಂದೊಂದು ಕತೆ ಹೇಳುವುದೋ, ಜೋಕ್ ಹೇಳುವುದೋ ಮಾಡುತ್ತಲೇ ಇರುತ್ತಿದ್ದರು. ನಾನು ಕತೆಯನ್ನು ಆಲಿಸುತ್ತಿದ್ದೆನಾದರೂ, ತಮಾಷೆಗಳು ತಕ್ಷಣಕ್ಕೆ ಅರ್ಥವಾಗುತ್ತಿರಲಿಲ್ಲ. ಆಗೆಲ್ಲ, ಎಲ್ಲರೂ ನಕ್ಕು ಮುಗಿದ ನಂತರ ನಾನು ನಕ್ಕು ಅಲ್ಲಿದ್ದ ಎಲ್ಲರನ್ನೂ ಗಾಬರಿಗೆ ಬೀಳಿಸುತ್ತಿದ್ದೆ. ಜೋಕ್ ಹೇಳಿದವರಿಗೆ ತಾನು ಏನು ಹೇಳಿದೆ ಎನ್ನುವುದು ಕೂಡ ಮರೆತು ಹೋದ ಮೇಲೆ ನನಗದು ಅರ್ಥವಾಗುತ್ತಿತ್ತು. ಇದಕ್ಕೆ ನಾನು ಹೊಣೆಯಲ್ಲ. ಸದಾ ಏನಾದರೊಂದು ಯೋಚಿಸುತ್ತಲೇ ಇರುತ್ತಿದ್ದ ನನಗೆ, ನನ್ನ ಮಿದುಳು ಆಗಾಗ ಕೈ ಕೊಟ್ಟು ನಿಧಾನಕ್ಕೆ ಸೇಡು ತೀರಿಸಿಕೊಳ್ಳುವ ವಿಧಾನ ಇದಾಗಿತ್ತು ಎನ್ನಿಸುತ್ತದೆ. ನಾನು ಎಷ್ಟು ಹಿಂದಿದ್ದೆ ಎಂದರೆ, ಅದನ್ನು ಮತ್ತೆ ನನಗೆ ಯಾರಾದರೂ ವಿವರಿಸಿ ಹೇಳಿದ ಮೇಲೆ ಅರ್ಥವಾಗಿ ನಾನು ಜೋರಾಗಿ ನಗುತ್ತಿದ್ದೆ. ಹೀಗಾಗಿ, ಬಹುತೇಕರು ಅವಿÛಗೆ ಗೊತ್ತಾಗಲ್ಲ ಬಿಡಿ. ಅದು ದೊಡ್ಡ ಟ್ಯೂಬ್‌ಲೈಟು ಎನ್ನುತ್ತ ಮುಂದುವರೆಯುತ್ತಿದ್ದರು. ನನಗೆ ಅವಮಾನವಾದಂತೆ ಅನ್ನಿಸಿದರೂ, ನನಗೆ ಅಂತಹ ವಿಚಾರಗಳಲ್ಲಿ ಆಸಕ್ತಿ ಇಲ್ಲ ಎನ್ನುವ ಸ್ಟೈಲ್ ತೋರಿಸಿ ಎದ್ದು ಬರುತ್ತಿದ್ದೆ.
ಆ ದಿನಗಳೇನೋ ತೀರಾ ತೊಂದರೆ ಇಲ್ಲದೆ ಮುಗಿದು ಹೋದವು. ಆಮೇಲೆ ಶುರುವಾಯಿತು ನೋಡಿ; ನಾನಾಗ ಹೈಸ್ಕೂಲಿನಲ್ಲಿ ಇದ್ದೆ. ನಮ್ಮ ಮನೆಯ ಬಳಿಯೇ ಇದ್ದ ಇಬ್ಬರು ಸೀನಿಯರ್ ಹುಡುಗಿಯರು ನನ್ನ ಜೊತೆ ದಿನವೂ ಶಾಲೆಗೆ ಬರುತ್ತಿದ್ದರು. ನಮ್ಮ ಮನೆ ಪಕ್ಕದಲ್ಲಿ ಒಬ್ಬನಿದ್ದ. ಅವ ಒಂದು ದಿನ ನನಗೊಂದು ಲೆಟರ್ ಕೊಟ್ಟು, “ಅವಳಿಗೆ ಕೊಡು’ ಎಂದ. ನಾನು ಸರಿಯಾಗಿ ಹೆಸರು ಕೇಳಿಸಿಕೊಳ್ಳಲಿಲ್ಲ. ಅವ ದಿನವೂ ಯಾರ ಬಳಿಯಲ್ಲಿ ಹರಟೆ ಕೊಚ್ಚುತ್ತ ನಿಲ್ಲುತ್ತಿದ್ದನೋ ಅವಳಿಗೆ ಕೊಟ್ಟೆ. ಎರಡು ದಿನವಾದ ಮೇಲೆ ಅವನಿಗೆ ಅನುಮಾನ ಬಂದು ಕೇಳಿದ. ನಾನು ಇರುವ ವಿಚಾರ ಹೇಳಿದ್ದೆ. ಅವನು ಸಿಟ್ಟಿನಿಂದ- “ಒಂದು ಕೆಲಸನೂ ನಿನಗೆ ನೆಟ್ಟಗೆ ಮಾಡಕ್ಕೆ ಬರಲ್ಲ’ ಅನ್ನೋದಾ? ನನಗೋ ವಿಪರೀತ ಕೋಪ. ಲೆಟರ್ ಕೊಡೋ ತಾಕತ್ತಿಲ್ಲ ಅಂದ್ರೆ ಯಾಕೆ ಬರೀಬೇಕು? ಅಂತೇನೋ ನನ್ನೊಳಗೆ ನಾನೇ ಬೈದುಕೊಂಡ ನೆನಪು.
ಇನ್ನು ಮೊಬೈಲ್ ಕತೆ, ಆವತ್ತು ಏನಾಯಿತು ಗೊತ್ತಾ? ನನ್ನ ತಂಗಿ, ಮನೆಗೆ ಬರಲೇಬೇಕು ಎಂದು ಪದೇ ಪದೆ ಮೆಸೇಜ್ ಮಾಡುತ್ತಲೇ ಇದ್ದಳು. ನನಗೋ ವಿಪರೀತ ಕೆಲಸ. ಸರಿ, ಅವಳಿಗೆ-“ಬರುತ್ತೇನೆ, ಆದರೆ ಬೇಗ ಬಿಡಬೇಕು’ ಎಂದು ಮೆಸೇಜ್ ಮಾಡಿದೆ. ಆ ನಂತರ ನನಗೆ ವಿಪರೀತ ಕರೆಗಳು ಬರ ತೊಡಗಿದವು. ಯಾಕಿರಬಹುದು ಎಂದು ನೋಡಿದರೆ, ನಾನು ಮೈಮರೆವಿನಲ್ಲಿ ಆ ಮೆಸೇಜನ್ನು ಬ್ರಾಡ್ ಕಾಸ್ಟ್ ಗೆ ಹಾಕಿ ಬಿಟ್ಟಿದ್ದೆ. ಆ ಮೆಸೇಜು ಓದಿದವರೆಲ್ಲ-ಯಾರು ಹಿಡ್ಕಂಡಿದ್ದಾರೆ ನಿನ್ನ ಎನ್ನೋದಾ? ಯಾಕೆ ಹೇಳ್ತೀರಿ, ನಾಲ್ಕು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿ ಹಾಕಿದ್ದೆ.
ಇನ್ನೊಮ್ಮೆ ನನ್ನ ಗೆಳತಿಯೊಬ್ಬರು “ಅಮ್ಮ ಹೊರಟು ಹೋದರು’ ಎಂದು ಮೆಸೇಜ್ ಹಾಕಿದ್ದರು. ನಾನು, ಮನೆಗೆ ಬಂದಿದ್ದ ಅವರಮ್ಮ ವಾಪಸ್ ಊರಿಗೆ ಹೋಗಿರಬಹುದು ಎಂದು ಭಾವಿಸಿ-“ಈ ಬಾರಿ ಬರುವುದು ಸಾಧ್ಯವಾಗಲಿಲ್ಲ. ಮತ್ತೂಮ್ಮೆ ಖಂಡಿತ ಬಂದು ಭೇಟಿಯಾಗುವೆ’ ಎಂದೇನೋ ಟೈಪಿಸಿ ಹಾಕಿದೆ. ಅವರು ಏನಂದುಕೊಂಡರೋ ಗೊತ್ತಿಲ್ಲ. “ನಿನ್ನ ಪ್ರೀತಿಗೆ ಧನ್ಯವಾದ, ಆದರೆ, ನೀನು ಇನ್ನು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ’ ಎಂದರು. ಆಗಲೇ ಗೊತ್ತಾಗಿದ್ದು ನಿಜ ವಿಚಾರ. ಎಷ್ಟೋ ದಿನಗಳ ಕಾಲ ನಾನು ಅವರ ಕಣ್ಣು ತಪ್ಪಿಸಿಯೇ ಓಡಾಡುತ್ತಿದ್ದೆ.
ಅದಿರಲಿ; ಮೊನ್ನೆ ಏನಾಯ್ತು ಗೊತ್ತಾ? ಬೆಂಗಳೂರಿಗೆ ಹೋಗುವ ಸಲುವಾಗಿ ರೈಲು ನಿಲ್ದಾಣದಲ್ಲಿ ಕೂತಿದ್ದೆ. ಎದುರಿದ್ದ ಹುಡುಗಿ ನನ್ನನ್ನೇ ನೋಡುತ್ತಿದ್ದಳು. ನನಗೇನೋ ಬಿಗುಮಾನ. ಬಹುಶಃ ನಾನು ಚಂದ ಕಾಣ್ತಾ ಇರಬೇಕು ಅಂತ. ಸ್ವಲ್ಪ ಹೊತ್ತಿನ ನಂತರ ಅನುಮಾನ ಬಂದು ಎದ್ದು ನೋಡಿದ್ರೆ, ಹಾಕಿಕೊಂಡ ಡ್ರೆಸ್ ಉಲ್ಟಾಪಲ್ಟ. ಮಗಳಂತೂ-“ಅಮ್ಮ ನೀನಂತೂ ಯಾವತ್ತಿಗೂ ಸುಧಾರಿಸಲ್ಲ ಬಿಡು’ಎಂದಳು. ಏನು ಮಾಡಲು ಸಾಧ್ಯ? ಇದ್ದ ದೊಡ್ಡ ವೇಲನ್ನು ಪೂರ್ತಿ ಸುತ್ತಿಕೊಂಡು ಹೋಗಿದ್ದಾಯ್ತು.
ಹೀಗೆ ಅದೆಷ್ಟೋ ಸಂಗತಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅವು ನನ್ನನ್ನು ಎಷ್ಟು ಪೇಚಿಗೆ ಸಿಲುಕಿಸುತ್ತವೆ ಎಂದರೆ ನನ್ನ ಬಗ್ಗೆ ನನಗೆ ಕೋಪ ಉಕ್ಕುವಷ್ಟು. ಆದರೆ, ಅದು ಆ ಗಳಿಗೆಗೆ. ತದನಂತರದಲ್ಲಿ ನಾನು ಅವನ್ನೆಲ್ಲ ನೆನೆದು ನಗುತ್ತೇನೆ.
ಶಿವಮೊಗ್ಗ ರೈಲು ಅಂತ ತಿಳಿದು ಮೈಸೂರು ರೈಲಿಗೆ ಹತ್ತಿದ್ದು, ನನ್ನ ವೆಹಿಕಲ್ ಅಂತ ಮತ್ಯಾರದ್ದಕ್ಕೋ ಗಂಟೆಗಟ್ಟಲೆ ಕೀ ತಿರುವಿದ್ದು, ನನ್ನ ಊಟದ ಡಬ್ಬಿಯ ಬದಲಿಗೆ ಇನ್ಯಾರದೋ ತಂದು ಅವರಿಂದ ಕಣ್ಣಲ್ಲೇ ತಿವಿಸಿಕೊಂಡದ್ದು, ಯಾರೋ ಕರೆ ಮಾಡಿದಾಗ ಮತ್ಯಾರೋ ಅಂದುಕೊಂಡು ಹರಟೆ ಕೊಚ್ಚಿದ್ದು ಹೀಗೆ… ನನ್ನನ್ನು ಆವರಿಸಿಕೊಂಡ ಎಡವಟ್ಟುಗಳ ವಿವರ ಹೇಳಿದರೆ ಮುಗಿಯೋದೆ ಇಲ್ಲ ಬಿಡಿ.
-ದೀಪ್ತಿ, ಭದ್ರಾವತಿ