Advertisement

ಜಿಮ್ಸ್‌ ವೈದ್ಯಕೀಯ ಕಾಲೇಜಿಗೆ ಎಂಡಿ ಕೋರ್ಸ್‌ ಮಂಜೂರು

04:26 PM Jan 26, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಹು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಗುಲ್ಬರ್ಗ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ (ಜಿಮ್ಸ್‌) ಮೆಡಿಕಲ್‌ ಕಾಲೇಜಿನಲ್ಲಿ ಪಿಜಿ (ಎಂಡಿ) ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.

Advertisement

ಕೊರೊನಾದಿಂದ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಕಲಬುರಗಿಯ ಜಿಮ್ಸ್‌ ವೈದ್ಯಕೀಯ ಕಾಲೇಜು ಸೇರಿ ಯಾವುದೇ ಕಾಲೇಜುಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿರಲಿಲ್ಲ. ಪಿಜಿ ಕೋರ್ಸ್‌ ಆರಂಭಿಸಲು ಇನ್ನಷ್ಟು ವೈದ್ಯಕೀಯ ಸಲಕರಣೆಗಳು ಮತ್ತು ಪ್ರಯೋಗಾಲಯಗಳನ್ನು ಆರಂಭಿಸಬೇಕಾಗುತ್ತದೆ.

ಜತೆಗೆ ಹೆಚ್ಚುವರಿ ಪ್ರಾಧ್ಯಾಪಕರ ಅಗತ್ಯವಿರುತ್ತದೆ. ಇದಕ್ಕೆ ಹಣ ನೀಡಲು ಆಗಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ, ಹೇಗಾದರೂ ಮಾಡಿ ಪಿಜಿ ಕೋರ್ಸ್‌ ಆರಂಭಿಸಬೇಕು ಎಂದುಕೊಂಡು ಕೆಕೆಆರ್‌ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ ಮತ್ತು ಸಂಸದ ಡಾ| ಉಮೇಶ ಜಾಧವ್‌ ಅವರ ಕಾಳಜಿ ಹಾಗೂ ಪ್ರಯತ್ನದ ಪರಿಣಾಮದಿಂದ ಈ ವರ್ಷ ಕಲಬುರಗಿಗೆ ಧಕ್ಕಲು ಸಾಧ್ಯವಾಗಿದೆ. ಇದು ವೈದ್ಯಕೀಯ ಲೋಕಕ್ಕೆ ಕೊಡುಗೆ ನೀಡಿದಂತಾಗಿದೆ.

ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಭೆಯಲ್ಲಿ ಕಲಬುರಗಿಯ ಜಿಮ್ಸ್‌ನಲ್ಲಿ ಪಿಜಿ ಕೋರ್ಸ್‌ ಆರಂಭಿಸಲು ಅನುಮತಿಸಿದೆ. ಹೀಗಾಗಿ ಅದಕ್ಕೆ ಪೂರಕವಾಗಿರುವ ತಯಾರಿ ಮಾಡಿಕೊಂಡು ಎಂಸಿಐ ನಿಯಮದಂತೆ ಕೋರ್ಸ್‌ ಆರಂಭಿಸಲಾಗುವುದು.

ಅದರ ಮುಂದಿನ ಅಗತ್ಯ ಕ್ರಮ ಕೈಗೊಂಡು ಅನುಮತಿ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ. 2021-22ನೇ ಸಾಲಿನಿಂದಲೇ ಎಂಡಿಗೆ ಪ್ರವೇಶ ನೀಡಲಾಗುತ್ತದೆ. ಇದರಿಂದ ಕಲ್ಯಾಣ ಭಾಗದ ಪ್ರತಿಭಾವಂತ 90 ಮೆಡಿಕಲ್‌ ವಿದ್ಯಾರ್ಥಿಗಳಿಗೆ ಪಿಜಿ ಸೀಟುಗಳು ಸಿಗಲಿದೆ. ಜಿಮ್ಸ್‌ನಲ್ಲಿ ಪಿಸಿ ಕೋರ್ಸ್‌ನ ಜನರಲ್‌ ಮೆಡಿಸಿನ್‌ ಮತ್ತು ಜನರಲ್‌ ಸರ್ಜರಿ ವಿಭಾಗಕ್ಕೆ ತಲಾ 11, ಎಂಎಸ್‌ ಒಬಿಜಿ, ಆಥೋಪೆಡಿಕ್‌ ಮತ್ತು ಎಂಡಿ-ಪಿಡಿಯಾಟ್ರಿಕ್‌ ವಿಭಾಗಕ್ಕೆ ತಲಾ 7,
ಅನಸ್ಥೆಷಿಯಾ ಮತ್ತು ಕಮ್ಯೂನಿಟಿ ಮೆಡಿಸಿನ್‌ ಮತ್ತು ಪ್ಯಾಥಾಲಜಿ ವಿಭಾಗಕ್ಕೆ ತಲಾ 9, ಎಂಎಸ್‌ ಆಪ್ತಮಾಲೋಜಿ ಮತ್ತು ಇಎನ್‌ಟಿ ಹಾಗೂ ಎಂಡಿ ಫೋರೆನ್ಸಿಕ್‌ ಮೆಡಿಸಿನ್‌ ವಿಭಾಗದಲ್ಲಿ ತಲಾ 5 ಸೇರಿದಂತೆ ಒಟ್ಟಾರೆ 90 ಸೀಟುಗಳಿಗೆ ಪಿಜಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ರಾಜೀವಗಾಂಧಿ ಆರೋಗ್ಯ ವಿವಿ ಅನುಮತಿಸಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜ್ಯೋತಿ ಪ್ರಕಾಶ ಪತ್ರದಲ್ಲಿ ವಿವರಿಸಿದ್ದಾರೆ.

Advertisement

ಜಿಮ್ಸ್‌ ಮೆಡಿಕಲ್‌ ಕಾಲೇಜಿನಲ್ಲಿ ಪಿಜಿ ಕೋರ್ಸ್‌ ಆರಂಭಕ್ಕೆ ಗ್ರೀನ್‌ ಸಿಗ್ನಲ್‌ ದೊರೆತ್ತಿರುವುದು ತಮ್ಮ ಹಾಗೂ ಸಂಸದರ ಪ್ರಯತ್ನ ಸಾರ್ಥಕವೆನಿಸಿದೆ. ಜಿಮ್ಸ್‌ಗೆ ಅಗತ್ಯವಿರುವ ಪ್ರಯೋಗಾಲಯ, ಯಂತ್ರೋಪರಣ ಖರೀದಿಗೆ ಕೆಕೆಆರ್‌ ಡಿಬಿಯಿಂದಲೇ ಅನುದಾನ ನೀಡುವುದಾಗಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ ಸ್ಪಂದಿಸಿ ಈಗ ಅನುಮತಿ ಸಿಕ್ಕಿದೆ. ವೈದ್ಯ ವಿದ್ಯಾರ್ಥಿಗಳಿಗೆ 371 (ಜೆ) ಅಡಿಯಲ್ಲಿ ಪ್ರವೇಶ ಲಭ್ಯವಾಗಲಿದೆ.ಇದರಿಂದ ನಮ್ಮ ಭಾಗಕ್ಕೆ ಹೆಚ್ಚಿನ ಉಪಯೋಗವಾಗಲಿದೆ.
ದತ್ತಾತ್ರೇಯ ಪಾಟೀಲ್‌ ರೇವೂರ, ಕೆಕೆಆರ್‌ಡಿಬಿ ಅಧ್ಯಕ್ಷರು

ಈಗ ಪ್ರಮುಖವಾಗಿ ಎಂಸಿಐ ಶೀಘ್ರ ಅನುಮೋದನೆ ದೊರಕಿಸಲು ಶ್ರಮಿಸಲಾಗುವುದು. ಜಿಮ್ಸ್‌ನಲ್ಲಿ ಪಿಜಿ ಕೋರ್ಸ್‌ ಆರಂಭಿಸಲು ರಾಜೀವಗಾಂಧಿ ಆರೋಗ್ಯ ವಿವಿ ಅನುಮತಿ ನೀಡಿದೆಯಲ್ಲದೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ರು ಮಂಡಳಿಯಿಂದಲೇ ಅನುದಾನ ನೀಡುವುದಾಗಿ ಹೇಳಿದ್ದರಿಂದ ಇದು ಸಾಧ್ಯವಾಗಿದೆ.
ಡಾ| ಉಮೇಶ ಜಾಧವ, ಸಂಸದರು ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next