Advertisement

ರಾಜ್ಯ ಸಹಕಾರಿ ಶಿಕ್ಷಣ ನಿಧಿಗೆ ರೂ. 6.32 ಲಕ್ಷ ರೂ.ಹಸ್ತಾಂತರ 

12:17 PM Jun 20, 2018 | Team Udayavani |

ಮೂಡಬಿದಿರೆ: ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ನಡೆಸಿದ ಮೂಡಬಿದಿರೆ ಕೋ-ಆಪರೇಟಿವ್‌ ಸರ್ವಿಸ್‌ ಬ್ಯಾಂಕ್‌ ಲಿ. ರಾಜ್ಯ ಸಹಕಾರಿ ಶಿಕ್ಷಣ ನಿಧಿಗೆ ರೂ. 6,32,558 ರೂ. ಅನ್ನು ಸಲ್ಲಿಸಿದೆ. ‘ಕಲ್ಪವೃಕ್ಷ’ ಸಭಾಭವನದಲ್ಲಿ ರವಿವಾರ ನಡೆದ ಎಂಸಿಎಸ್‌ ಬ್ಯಾಂಕ್‌ನ 102ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರು ಲಾಡಿಯಲ್ಲಿರುವ ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ಅವರಿಗೆ ಈ ನಿಧಿಯ ಚೆಕ್‌ ಅನ್ನು ಹಸ್ತಾಂತರಿಸಿದರು.

Advertisement

ಮಾರ್ಪಾಡಿ, ಪ್ರಾಂತ್ಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಎಂಸಿಎಸ್‌ ಬ್ಯಾಂಕ್‌ನಲ್ಲಿ 8,118 ಸದಸ್ಯಬಲದೊಂದಿಗೆ ರೂ. 8,53,81,000 ಪಾಲುಬಂಡವಾಳ ಹೊಂದಿದೆ. ಕಳೆದ ಸಾಲಿನಲ್ಲಿ ರೂ. 10 ಕೋಟಿ ಲಾಭವನ್ನು ದಾಖಲಿಸಿದೆ. 18 ವರ್ಷಗಳಿಂದಲೂ ಶೇ. 25 ಡೆವಿಡೆಂಡ್‌ ಘೋಷಿಸಿದ್ದು, ಪಾಲು ಬಂಡವಾಳದ ಮಿತಿಯನ್ನು ರೂ. 50,000ಕ್ಕೇರಿಸಲಾಗಿದೆ ಅಶಕ್ತರ ಮರಣ ನಿಧಿಯನ್ನು ಪಾರ್ಶ್ವವಾಯು ಪೀಡಿತರಿಗೆ ನೀಡುವ ಸಹಾಯಧನವನ್ನು 12,000 ರೂ. ಗೆ ಏರಿಸಲಾಗಿದೆ. ಹೃದ್ರೋಗ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ ಚಿಕಿತ್ಸೆ ಬಗ್ಗೆ ನೀಡಲಾಗುವ ಸಹಾಯಧನವನ್ನು 12 ಸಾವಿರ ರೂ.ಗೆ ಏರಿಸಲಾಗಿದೆ. ಇದೇ ಮೊದಲ ಬಾರಿಗೆ ಇತರ ನಿರ್ದಿಷ್ಟ ಚಿಕಿತ್ಸೆಗಳಿಗೆ ರೂ. 5,000 ನೀಡಲು ನಿರ್ಧರಿಸಲಾಗಿದೆ ಎಂದು ಅಮರನಾಥ ಶೆಟ್ಟಿ ಪ್ರಕಟಿಸಿದರು.

3,500 ಪಡಿತರ ಕಾರ್ಡುದಾರರಲ್ಲದೆ ಹೊಸಬೆಟ್ಟು ವ್ಯಾಪ್ತಿಯ 150 ಕಾರ್ಡುದಾರರಿಗೆ ಪಡಿತರ ವಿತರಣೆ, ಕೃಷಿಕರಿಗೆ ರೂ. 3 ಲಕ್ಷದವರೆಗೆ ಶೂನ್ಯಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದ್ದು 50,000 ರೂ. ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಕೃಷಿಕರಿಗೆ ರಸಗೊಬ್ಬರಕ್ಕಾಗಿ ತಿಂಗಳ ಅವಧಿಗೆ ನಿಬಡ್ಡಿ ಸಾಲ, ಪವರ್‌ ಟಿಲ್ಲರ್‌,ಟ್ರಾಕ್ಟರ್‌ ಕೊಳ್ಳಲು ನಿಬಡ್ಡಿ ಸಾಲ ಸೌಲಭ್ಯನೀಡಲಾಗುತ್ತಿದೆ. ರೈತರ ಪಿಂಚಣಿ ಯೋಜನೆ ಚಾಲ್ತಿಯಲ್ಲಿದ್ದು, ಕೃಷಿ ಕೂಲಿ ಕಾರ್ಮಿಕರಿಗೂ ಪಿಂಚಣಿ ಬಗ್ಗೆ ಚಿಂತಿಸಲಾಗುತ್ತಿದೆ. ಸೋಲಾರ್‌ ಲೈಟ್‌/ ವಾಟರ್‌ ಹೀಟರ್‌ ಅಳವಡಿಸುವವರಿಗೆ ಶೇ. 5ರ ದರದಲ್ಲಿ ಸಾಲ, ಸ್ಥಳೀಯ ರೈತರ ತರಕಾರಿ ಮಾರುಕಟ್ಟೆಗಾಗಿ ಉಚಿತ ಸ್ಥಳಾವಕಾಶ, ರಿಯಾಯಿತಿ ದರದಲ್ಲಿ ಡಯಾಲಿಸಿಸ್‌ (ಆಳ್ವಾಸ್‌ ಆಸ್ಪತ್ರೆಯಲ್ಲಿ) ಸೌಲಭ್ಯ, ರೈತರ ಸಮ್ಮಾನ, ಪ್ರತಿಭಾ ಪುರಸ್ಕಾರ, ಅಂಗವಿಕಲ ಮಕ್ಕಳಿಗೆ ಪ್ರೋತ್ಸಾಹ ಧನವಿತರಣೆ, ವಾರಪೂರ್ತಿ ಸಹಕಾರಿ ಸಪ್ತಾಹ ಆಚರಣೆ ನಡೆಸಲಾಗುತ್ತಿದೆ ಎಂದು ಅಮರನಾಥ ಶೆಟ್ಟಿ ತಿಳಿಸಿದರು.

ಸಿಇಒ ಸೇವಾವಧಿ ಮುಂದುವರಿಕೆ
ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ್‌ ಎಂ. ಅವರು ನಿವೃತ್ತಿ ಹೊಂದಿದ್ದರೂ ಬ್ಯಾಂಕಿನ ಪ್ರಗತಿಯಲ್ಲಿ ಅವರ ಪಾತ್ರವನ್ನು ಪರಿಗಣಿಸಿ, ಅವರ ಸೇವೆಯನ್ನು ಇನ್ನೂ 5 ವರ್ಷಗಳವರೆಗೆ ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಪ್ರಸ್ತಾವನೆಯನ್ನು ಅಮರನಾಥ ಶೆಟ್ಟಿ ಅವರು ಸಭೆಯ ಮುಂದಿರಿಸಿದಾಗ ಕರತಾಡನದಿಂದ ಅಂಗೀಕರಿಸಲಾಯಿತು.

ಸಿಇಒ ಚಂದ್ರಶೇಖರ್‌ ಎಂ. ಸ್ವಾಗತಿಸಿದರು. ಹೆರಾಲ್ಡ್‌ ತೌವ್ರೋ ಮಹಾಸಭೆ ಮೀಟಿಂಗ್‌ ನೋಟಿಸ್‌ ಓದಿ ದಾಖಲಿಸಿದರು. ಲೆಕ್ಕಿಗ ಕೆ.ಧರಣೇಂದ್ರ ಜೈನ್‌ 2017- 18ನೇ ಸಾಲಿನ ವರದಿ, ಗುಮಾಸ್ತರಾದ ಕೆ. ರಘುವೀರ ಕಾಮತ್‌ ಲೆಕ್ಕ ಪರಿಶೋಧನಾ ವರದಿ, ಬಾಲಕೃಷ್ಣ ಕಿಣಿ 2018-19ನೇ ಸಾಲಿನ ಬಜೆಟ್‌ ಮಂಡಿಸಿದರು. ಉಪಾಧ್ಯಕ್ಷ ಜಾರ್ಜ್‌ ಮೋನಿಸ್‌, ನಿರ್ದೇಶಕರಾದ ಎಂ. ಬಾಹುಬಲಿ ಪ್ರಸಾದ್‌, ಎಂ. ಗಣೇಶ ನಾಯಕ್‌, ಡಾ| ಎಂ. ಪಾಂಡುರಂಗ ಮಲ್ಯ, ಎಚ್‌. ಪ್ರೇಮಾನಂದ ಪ್ರಭು, ಎಂ. ಪದ್ಮನಾಭ, ಪ್ರೇಮಾ ಎಸ್‌. ಸಾಲ್ಯಾನ್‌, ಮನೋಜ್‌ ಶೆಟ್ಟಿ, ಸಿ. ಎಚ್‌. ಅಬ್ದುಲ್‌ ಗಫೂರ್‌, ಅನಿತಾ ಶೆಟ್ಟಿ ಉಪಸ್ಥಿತರಿದ್ದರು. ಎಂ.ಬಾಹುಬಲಿ ಪ್ರಸಾದ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next