ಹೊಸದಿಲ್ಲಿ: ಬಿಜೆಪಿ ಮತ್ತು ಆಪ್ ನಡುವಿನ ತೀವ್ರ ಹಣಾಹಣಿ ನಡುವೆ ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್‌ಗಳಿಗೆ ರವಿವಾರ ಮತದಾನ ಪೂರ್ಣಗೊಂಡಿದೆ. ಸಂಜೆ 5.30ರ ವೇಳೆಗೆ ಶೇ.50ರಷ್ಟು ಮತದಾನವಾಗಿದೆ.
ದೆಹಲಿಯಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಎಲ್ಲಿಯೂ ಇವಿಎಂ ತಾಂತ್ರಿಕ ತೊಂದರೆ ಕಾಣಿಸಲಿಲ್ಲ. ಬಿಗಿ ಬಂದೋಬಸ್ತ್ನಲ್ಲಿ 493 ಸ್ಥಳಗಳ 3,360 ಬೂತ್‌ಗಳಲ್ಲಿ ಜನರು ಉತ್ಸಾಹದಿಂದ ಮತ ಹಾಕಿದರು. ಆದರೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾಗಿರುವ ಬಗ್ಗೆ ಈಶಾನ್ಯ ದೆಹಲಿ ಮತ್ತು ಇತರೆ ಪ್ರದೇಶಗಳಲ್ಲಿ ಅನೇಕ ನಾಗರಿಕರು ದೂರಿದರು. ಸ್ವತಃ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ, ಮತದಾನ ಮಾಡದೇ ವಾಪಸಾದರು.
ಹೆಸರುಗಳು ಕಾಣೆಯಾಗಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಡಿ.7ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ. ರಾಷ್ಟ್ರ ರಾಜಧಾನಿಯ ಮಹಾನಗರ ಪಾಲಿಕೆ ಯಾವ ಪಕ್ಷದ ತೆಕ್ಕೆಗೆ ಜಾರಲಿದೆ ಎಂಬುದನ್ನು ಕಾದುನೋಡಬೇಕಿದೆ.