ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಮುಂಬರುವ ಐಬಿಎ ಎಲೈಟ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಯುವ ಬಾಕ್ಸರ್‌ಗಳಿಗೆ ದಾರಿ ಬಿಡುವುದು ಹಾಗೂ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಗೆ ಸಿದ್ಧತೆ ನಡೆಸುವುದು ತನ್ನ ಉದ್ದೇಶ ಎಂದಿದ್ದಾರೆ ಮೇರಿ ಕೋಮ್.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪೀಳಿಗೆಯ ಬಾಕ್ಸರ್‌ಗಳು ತಮ್ಮನ್ನು ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಅವರಿಗೆ ಪ್ರಮುಖ ಕೂಟಗಳಲ್ಲಿ ಮಾನ್ಯತೆ ಮತ್ತು ಅನುಭವ ಪಡೆಯಲು ಅನುಕೂಲವಾಗಲೆಂದು ಈ ಕೂಟದಿಂದ ಹಿಂದೆ ಸರಿಯಲು ಬಯಸಿದ್ದೇನೆ.
ಹಾಗೆಯೇ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ’ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾಗೆ ಮೇರಿ ಕೋಮ್ ಮಾಹಿತಿ ನೀಡಿದ್ದಾರೆ.
“ಮೇರಿ ಕೋಮ್ ಕಳೆದ ಎರಡು ದಶಕಗಳಿಂದ ಭಾರತೀಯ ಬಾಕ್ಸಿಂಗಿಗೆ ಅಪಾರ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ನಾವು ಅವರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಇತರ ಬಾಕ್ಸರ್‌ಗಳಿಗೆ ದಾರಿ ಮಾಡಿ ಕೊಡಬೇಕೆಂಬ ಅವರ ನಿರ್ಧಾರ ಚಾಂಪಿಯನ್ ನಡತೆಗೆ ಸಾಕ್ಷಿಯಾಗಿದೆ’ ಎಂದು ಭಾರತದ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.