Advertisement

ಮೇರಿ, ಮಂಜುರಾಣಿ ಕ್ವಾರ್ಟರ್‌ ಫೈನಲಿಗೆ

11:06 PM Oct 08, 2019 | Team Udayavani |

ಉಲನ್‌ ಉಡೆ (ರಶ್ಯ): ಆರು ಬಾರಿಯ ಚಾಂಪಿಯನ್‌ ಎಂಸಿ ಮೇರಿ ಕೋಮ್‌ ಅವರು ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ವಿಶ್ವ ವನಿತಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಇದೇ ವೇಳೆ 48 ಕೆ.ಜಿ. ವಿಭಾಗದಲ್ಲಿ ಭಾರತದ ಮಂಜು ರಾಣಿ ಅವರು ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಆದರೆ 75 ಕೆ.ಜಿ. ವಿಭಾಗದಲ್ಲಿ ಸವೀಟಿ ಬೋರಾ ಅವರು ಪ್ರಬಲ ಹೋರಾಟ ನಡೆಸಿದ್ದರೂ ಪ್ರೀ-ಕ್ವಾರ್ಟರ್‌ಫೈನಲ್‌ ಹೋರಾಟದಲ್ಲಿ ಸೋತು ನಿರಾಸೆ ಮೂಡಿಸಿದರು.

ಹೋರಾಟದ ಗೆಲುವು
ಕಠಿನ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೇರಿ ಕೋಮ್‌, ಮೊದಲ ಬಾರಿಗೆ ಇಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಈ ಹಿಂದೆ 48 ಕೆ.ಜಿ. ವಿಭಾಗದಲ್ಲಿ 6 ವಿಶ್ವಕಪ್‌ ಗೆದ್ದಿರುವ ಮೇರಿ, ಈ ಬಾರಿ ತೂಕ ವಿಭಾಗವನ್ನು ಬದಲಿಸಿಕೊಂಡು ಕಣಕ್ಕಿಳಿದಿದ್ದಾರೆ. ಹಿಂದಿನ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರೂ, ಹೊಸ ವಿಭಾಗ ಅವರಿಗೆ ಸ್ವಲ್ಪ ಸವಾಲಾಗಿ ಪರಿಣಮಿಸಿದೆ.

ಮೊದಲ ಪಂದ್ಯದಲ್ಲಿ ಬೈ ಪಡೆದಿದ್ದ ಮೇರಿ, 16ರ ಘಟ್ಟದಲ್ಲಿ ಬಹಳ ಹೋರಾಟ ಮಾಡಿ ಗೆಲುವು ಸಾಧಿಸಿದರು. ಥಾಯ್ಲೆಂಡ್‌ನ‌ ಜುಟಾಮಸ್‌ ಜಿಟಾ³ಂಗ್‌ ಎದುರು 36 ವರ್ಷದ ಮೇರಿ 5-0 ಅಂತರದಿಂದ ಜಯಭೇರಿ ಮೊಳಗಿಸಿದರು. ಆದರೆ ಇದು ಸುಲಭವಾಗಿರಲಿಲ್ಲ. ಸ್ಪರ್ಧಾ ಲೆಕ್ಕಾಚಾರದಲ್ಲಿ 5-0 ಗೆಲುವು ಸಾಧಿಸಿದರೂ, ಪ್ರತೀ ಹೋರಾಟದಲ್ಲಿಯೂ ಬಡಿದಾಡಬೇಕಾಯಿತು. ಪಂದ್ಯಾರಂಭವಾದ ಮೊದಲ ಮೂರು ನಿಮಿಷ ಮೇರಿ ಕೋಮ್‌, ದಾಳಿ ಮಾಡಲು ಮುಂದಾಗದೇ ಕೇವಲ ರಕ್ಷಣೆ ಮಾಡಿಕೊಳ್ಳುತ್ತ; ಎದುರಾಳಿಯ ಚಲನೆಯ ಗತಿಯನ್ನು ನಿರೀಕ್ಷಿಸುತ್ತ ಸಾಗಿದರು. ಅದಾದ ನಂತರ ತಿರುಗಿಬಿದ್ದು ಆಕ್ರಮಣ ನಡೆಸಿದರು. ಇಲ್ಲಿ ಮೇರಿಯ ಅನುಭವ ಬಹಳ ಕೆಲಸ ಮಾಡಿತು.

ಥಾಯ್ಲೆಂಡ್‌ ಎದುರಾಳಿಯ ಪ್ರಬಲ ಹೊಡೆತಗಳನ್ನು ತಡೆದುಕೊಂಡು, ಸೂಕ್ತ ಪ್ರತಿಕ್ರಿಯೆ ನೀಡಲು ಯಶಸ್ವಿಯಾದರು. ಜಿಟಾ³ಂಗ್‌ ಆಕ್ರಮಣಕಾರಿಯಾಗಿ ಕಂಡರೂ, ಹೊಡೆತಗಳನ್ನು ನಿಖರವಾಗಿ ಗುರಿಮುಟ್ಟಿಸಲು ಸಾಧ್ಯವಾಗದೇ ಒದ್ದಾಡಿದರು. ಮೇರಿ ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಎದುರಾಳಿಯನ್ನು ಸೋಲಿನ ಬಲೆಗೆ ಕೆಡವಿದರು.

Advertisement

ಎಚ್ಚರಿಕೆಯ ಸೆಣಸಾಟ
ಈ ಹಿಂದೆ ಮೇರಿಕೋಮ್‌ ಹೋರಾಡುತ್ತಿದ್ದ 48 ಕೆ.ಜಿ. ವಿಭಾಗದಲ್ಲಿ ಕಣಕ್ಕೆ ಇಳಿದಿದ್ದ ಮಂಜು ರಾಣಿ ಅವರು ಯಾವುದೇ ಒತ್ತಡಕ್ಕೆ ಒಳಗಾಗದೇ ಸೆಣಸಾಟ ನಡೆಸಿದರು. ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ವೆನೆಜುವೆಲಾದ ರೋಜಾಸ್‌ ಟಯೊನಿಸ್‌ ಸಿಡೆನೊ ಅವರನ್ನು 5-0 ಅಂತರದಿಂದ ಉರುಳಿಸಿ ಕ್ವಾರ್ಟರ್‌ಫೈನಲಿಗೇರಿದರು.

ಚೊಚ್ಚಲ ಬಾರಿ ವಿಶ್ವಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಮಂಜು ರಾಣಿ ಇನ್ನೊಂದು ಸ್ಪರ್ಧೆಯಲ್ಲಿ ಗೆದ್ದರೆ ಪದಕ ಗೆಲ್ಲಲಿದ್ದಾರೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಅವರಿಗೆ ಕಠಿನ ಎದುರಾಳಿ ಸಿಕ್ಕಿದ್ದಾರೆ. ಕಳೆದ ಋತುವಿನ ಕಂಚು ಪದಕ ವಿಜೇತೆ ಮತ್ತು ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯದ ಕಿಮ್‌ ಹ್ಯಾಂಗ್‌ ಮೀ ಅವರನ್ನು ಮಂಜು ಎದುರಿಸಬೇಕಾಗಿದೆ. ಈ ಹೋರಾಟ ಗುರುವಾರ ನಡೆಯಲಿದೆ.

ಮಂಜು ರಾಣಿ ಈ ವರ್ಷದ ಆರಂಭದಲ್ಲಿ ಬಲ್ಗೇರಿಯಾದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಡ್ಜ ಮೆಮೊರಿಯನ್‌ ಬಾಕ್ಸಿಂಗ್‌ ಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.

ಬೋರಾ ನಿರಾಸೆ
75 ಕೆ.ಜಿ. ವಿಭಾಗದಲ್ಲಿ ಭಾರತದ ಸವೀಟಿ ಬೋರಾ ಪ್ರಬಲ ಹೋರಾಟ ನಡೆಸಿದ್ದರೂ ವೇಲ್ಸ್‌ ನ ಲಾರೆನ್‌ ಪ್ರೈಸ್‌ ಅವರಿಗೆ 3-1 ಅಂತರದಿಂದ ಶರಣಾದರು. ಯುರೋಪಿಯನ್‌ ಗೇಮ್ಸ್‌ನ ಚಿನ್ನ ವಿಜೇತೆ ಪ್ರೈಸ್‌ ಕಳೆದ ವರ್ಷದ ಈ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಅವರು ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next