ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ವೇಳೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಇದೀಗ ಮತ್ತೆ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇನ್ನೊಂದು ಕಡೆಯಿಂದ ಲಿಂಗಾಯತ ಮಠಾಧೀಶರು ಬಿಜೆಪಿಗೆ ಕರೆತರುವ ಪ್ರಯತ್ನದಲ್ಲಿದ್ದು, ಈ ಆಹ್ವಾನವನ್ನು ಒಪ್ಪಿಕೊಳ್ಳಲೂ ಆಗದೇ ನಿರಾಕರಿಸಲೂ ಆಗದೆ, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಸಾಧ್ಯವಾದಷ್ಟು ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಿಸದೇ ಮುಂದೂಡುವ ಪ್ರಯತ್ನ ನಡೆಸುತ್ತಿರುವುದರಿಂದ ಆಕ್ರೋಶಗೊಂಡಿರುವ ಎಂ.ಬಿ. ಪಾಟೀಲ್, ಶೀಘ್ರ ಸಂಪುಟ ವಿಸ್ತರಣೆ ಮಾಡದಿದ್ದರೆ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಂ.ಬಿ. ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ವಿರಾಮ ನೀಡಿದ್ದರು. ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡರ ಸಭೆಯಲ್ಲಿ ಮತ್ತೆ ಹೋರಾಟ ಆರಂಭಿಸುವ ಕುರಿತಂತೆ ಚರ್ಚೆ ನಡೆದಿದ್ದು, ಶೀಘ್ರ ಸಂಪುಟ ವಿಸ್ತರಣೆ ಮಾಡಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ, ಲೋಕಸಭೆ ಚುನಾವಣೆಗೂ ಮುಂಚೆಯೇ ಪತ್ಯೇಕ ಧರ್ಮದ ಹೋರಾಟವನ್ನು ಮತ್ತೆ ಆರಂಭಿಸುವ ಸಂದೇಶವನ್ನು ಎಂ.ಬಿ. ಪಾಟೀಲ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಹುಲ್ ಮೇಲೂ ಒತ್ತಡ
ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಎಂ.ಬಿ. ಪಾಟೀಲ್ ಶೀಘ್ರವೇ ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಆದರೆ, ಆಷಾಢದ ಕಾರಣ ಹೇಳಿ ಸಂಪುಟ ವಿಸ್ತರಣೆ ಮುಂದೂಡಿದ್ದ ರಾಜ್ಯ ನಾಯಕರು ಈಗ ಸ್ಥಳೀಯ ಸಂಸ್ಥೆ ಚುನಾವಣೆಯ ನೆಪ ಹೇಳಿ ಮುಂದೂಡಿದ್ದಾರೆ. ಅದಾದ ನಂತರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹನ್ನೆರಡು ದಿನ ವಿದೇಶ ಪ್ರವಾಸ ಕೈಗೊಳ್ಳುವುದರಿಂದ ಅವರು ವಾಪಸ್ ಆಗುವವರೆಗೂ ಸಂಪುಟ ವಿಸ್ತರಣೆ ಆಗುವುದು ಅನುಮಾನ.
ರಾಜ್ಯ ಕಾಂಗ್ರೆಸ್ ನಾಯಕರ ಧೋರಣೆ ಎಂ.ಬಿ. ಪಾಟೀಲ್ ಬಂಡಾಯದ ಬಾವುಟ ಹಾರಿಸಿ ಮತ್ತೆ ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸುತ್ತಾರಾ ಅಥವಾ ಮಠಾಧೀಶರ ಒತ್ತಡಕ್ಕೆ ಮಣಿಯುತ್ತಾರೊ ಕಾದು ನೋಡಬೇಕು.