ಮೈಸೂರು: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಆರ್ಥಿಕತೆ ನಡುವೆ ಮೈಸೂರು ಮಹಾನಗರ ಪಾಲಿಕೆ 2020-21ನೇ ಸಾಲಿನಲ್ಲಿ ಒಟ್ಟು 878.79 ಕೋಟಿ ಆಯವ್ಯಯ ಮಂಡಿಸಿ, 7.36 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿತು. ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲ 2019-20ನೇ ಸಾಲಿನ ಪರಿಷ್ಕೃತ ಮತ್ತು 2020-21ನೇ ಸಾಲಿನ ಆಯವ್ಯಯ ಮಂಡಿಸಿದರು.
ಪೌರಕಾರ್ಮಿಕರಿಗೆ ಉಪಹಾರ ವಿತರಣೆ, ಮರಣ ಹೊಂದುವ ಯೋಧರ ಕುಟುಂಬಕ್ಕೆ ನೆರವು, ಕೊರೊನಾ ವಾರಿಯರ್ ಗಳಿಗೆ ಸನ್ಮಾನ ಸೇರಿದಂತೆ ಇನ್ನಿತರ ಅನುಕೂಲಕ್ಕೆ ವಿಶೇಷ ಅನುದಾನ, ನಗರ, ಉದ್ಯಾನವನ ಅಭಿವೃದ್ಧಿ, ಆರ್ಥಿಕ ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು ನೀಡುವ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ಘೋಷಿಸಿದೆ. ಪ್ರಾರಂಭ ಶಿಲ್ಕು 26008.72 ಲಕ್ಷ ರೂ. ಜಮೆಗಳು ಸೇರಿ ಒಟ್ಟು 878.79.99 ಲಕ್ಷವಾದರೆ, 87143.34 ಪಾವತಿಯಾದರೆ, 736.65ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.
ಆದಾಯದ ಮೂಲ: 15ನೇ ಹಣಕಾಸು ಆಯೋಗದಿಂದ 69 ಕೋಟಿ ಹಂಚಿಕೆಯಾಗಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ ನಗರದ ಅಭಿವೃದ್ಧಿಗೆ 4.50 ಕೋಟಿ, ಸಿಎಂ ನಗರೋತ್ಥಾನ 2 ಮತ್ತು 3ನೇ ಹಂತದ ಯೋಜನೆ ಅನುದಾನದಿಂದ ಉಳಿಕೆಯಾದ 16 ಕೋಟಿ, ಮೂಲ ಸೌಲಭ್ಯ ಅಭಿವೃದ್ಧಿಗೆ 7.50 ಕೋಟಿ, ಪಾರಂಪರಿಕ ಕಟ್ಟಡ, ರಸ್ತೆ ಅಭಿವೃದ್ಧಿಗೆ 5 ಕೋಟಿ ನಿರೀಕ್ಷಿಸಲಾಗಿದೆ.
ನಗರದ ರಸ್ತೆ ಅಭಿವೃದ್ಧಿಗೆ ಸಿಎಂ 50 ಕೋಟಿ ವಿಶೇಷ ಅನುದಾನದ ಪೈಕಿ 45.61 ಕೋಟಿ ಬಿಡುಗಡೆಯಾಗಿದ್ದು, ಉಳಿದ 4.39 ಕೋಟಿ ನಿರೀಕ್ಷಿಸಲಾಗಿದೆ. ಮಹತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಪ್ರಸಕ್ತ ಸಾಲಿಗೆ 25 ಕೋಟಿ ನಿರೀಕ್ಷಿಸಲಾಗಿದೆ. ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಎಸ್‌ಎಫ್ಸಿ ವಿಶೇಷ ಅನುದಾನದಡಿ 15 ಕೋಟಿ ಹಂಚಿಕೆಯಾಗಿದೆ.
ಬರ ಪರಿಹಾರ ಯೋಜನೆಯಡಿ 1 ಕೋಟಿ ರೂ., ದಸರಾ ವಿಶೇಷ ಯೋಜನೆಯಡಿ 5 ಕೋಟಿ ರೂ., ಪೌರ ಕಾರ್ಮಿಕರು ಗೃಹ ಭಾಗ್ಯ ಅನುದಾನದ 2 ಕೋಟಿ ರೂ. ಮತ್ತು ನಲ್ಮ್ ಯೋಜನೆಯ 50 ಲಕ್ಷ, ಒಳ ಚರಂಡಿ ಮತ್ತು ನೀರಿನ ವಿಭಾಗದಿಂದ 86.25 ಕೋಟಿ ರೂ., ದಂಡ ಮತ್ತಿತರ ಶುಲ್ಕದಿಂದ 9.92 ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 8 ಕೋಟಿ ರೂ., ಆದಾಯ ನಿರೀಕ್ಷಿಸಲಾಗಿದೆ.
ನಗರ ಪಾಲಿಕೆ ಆಸ್ತಿಯಿಂದ 2.93 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿಯಿಂದ 19.39 ಕೋಟಿ, ಬೀದಿ ದೀಪ ನಿರ್ವಹಣೆಗೆ 75.23 ಕೋಟಿ ರೂ., ರಾಜ್ಯ ಹಣಕಾಸು ಆಯೋಗದಿಂದ ನೌಕರರ ವೇತನ, ಅನುದಾನವಾಗಿ ಪ್ರಸಕ್ತ ಸಾಲಿಗೆ 68.52 ಕೋಟಿ ಅನುದಾನ ಹಂಚಿಕೆಯಾಗಿದೆ. ಸಭೆಯಲ್ಲಿ ಆಡಳಿತ ಪಕ್ಷದ ನಾಯಕಿ ಪ್ರೇಮ ಶಂಕರೇಗೌಡ, ಮಾಜಿ ಮೇಯರ್ ಆಯುಬ್‌ಖಾನ್, ಉಪ ಮೇಯರ್ ಶ್ರೀಧರ್, ಪಾಲಿಕೆ ಆಯುಕ್ತ ಗುರುತ್ತ ಹೆಗಡೆ ಇದ್ದರು.