ಮಹಾನಗರ: ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಎಂಬಿಎ ಮಾರ್ಕೆಟಿಂಗ್ ಸ್ಪೆಷಲೈಸೇನ್ ವಿಭಾಗದ ವಿದ್ಯಾರ್ಥಿಗಳು ಶನಿವಾರ ಬೀದಿಗಿಳಿದಿದ್ದರು!
ಪ್ರತಿಭಟನೆ ಅಥವಾ ಇನ್ಯಾವುದೋ ಉದ್ದೇಶಕ್ಕೆ ಅಲ್ಲ. ಬದಲಾಗಿ ಒಂದು ಒಳ್ಳೆಯ ಉದ್ದೇಶದೊಂದಿಗೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಸಹಾಯ ಮಾಡುವ ಪರಿಕಲ್ಪನೆಯೊಂದಿಗೆ ನಗರ ಕದ್ರಿ ಪಾರ್ಕ್ ಗೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿನ ವ್ಯಾಪಾರಿಗಳೊಂದಿಗೆ ಕೆಲ ಹೊತ್ತು ಬೆರೆತರು.
ಸುಮಾರು 35 ವರ್ಷಗಳಿಂದ ಕಡ್ಲೆ ಮಾರುತ್ತಿರುವ ಅಜ್ಜಿ ಪಾರ್ವತಿಯವರಿಗೆ ಕಡಲೆ ಮಾರುವುದಕ್ಕೆ ಸಹಾಯ ಮಾಡಿದರು. ಅಜ್ಜಿ ಸಿದ್ಧಪಡಿಸಿದ ಕಡ್ಲೆಯ ಪೊಟ್ಟಣವನ್ನು ತೆಗೆದುಕೊಂಡು ಪಾರ್ಕ್ ನ ಮೂಲೆ ಮೂಲೆ, ರಸ್ತೆ ಬದಿಯಲ್ಲಿ ಸುತ್ತಿದ ವಿದ್ಯಾರ್ಥಿಗಳು ಸಾರ್ವಜನಿಕರು, ವಾಹನ ಸವಾರರಿಗೆ ಕಡ್ಲೆ ಖರೀದಿಸುವಂತೆ ಪ್ರೇರೇಪಿಸಿದರು. ಪ್ರತಿ ದಿನ 300-400 ರೂ. ವ್ಯಾಪಾರವಾಗುತ್ತಿದ್ದ ಅಜ್ಜಿಗೆ ಶನಿವಾರ ಎರಡು ಗಂಟೆಯಲ್ಲಿ 7 ಕೆ.ಜಿಯಷ್ಟು ಕಡ್ಲೆ ವ್ಯಾಪಾರ ಮಾಡಿಕೊಟ್ಟರು.
ಆ ಮೂಲಕ ವ್ಯಾಪಾರದ ಜ್ಞಾನವನ್ನು ವಿದ್ಯಾರ್ಥಿಗಳು ಕಂಡು ಕೊಂಡರು. ಕಾಲೇಜಿನ ಆಸಿಸ್ಟೆಂಟ್ ಪ್ಲೇಸ್‌ಮೆಂಟ್ ಅಧಿಕಾರಿ, ಪ್ರಾಧ್ಯಾಪಕಿಯಾಗಿರುವ ದಿಶಾ ಸಿ.ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಯ ಮಧ್ಯದಿಂದ ಬೀದಿಗೆ ಕರೆದುಕೊಂಡು ಬಂದಿದ್ದರು. 14 ಮಂದಿ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.
ಸಹಾಯಕ್ಕೆ ಕೃತಜ್ಞತೆ: ವ್ಯಾಪಾರಕ್ಕೆ ಬರುವ ಬಗ್ಗೆ ವಿದ್ಯಾರ್ಥಿಗಳು ಮೊದಲೇ ಕೇಳಿಕೊಂಡಿದ್ದರು. ಆದರಂತೆ ಬಂದು ಕಡ್ಲೆ ವ್ಯಾಪಾರ ಮಾಡಿದ್ದಾರೆ. ಅವರಿಗೂ ನಮ್ಮ ಕಷ್ಟದ ಅರಿವಾಗಿದೆ. ನಮ್ಮ ಜೀವನ ಇದರಿಂದಲೇ ಆಗಬೇಕಿದ್ದು, ಸಹಾಯ ಮಾಡಿದ ಮಕ್ಕಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. –
ಪಾರ್ವತಿ, ಕಡ್ಲೆ ಮಾರುವ ಅಜ್ಜಿ