Advertisement

ನಕಲಿ ಆದೇಶ ಪತ್ರ ನೀಡಿ ಸಿಕ್ಕಿಬಿದ್ದ  ಎಂಬಿಎ ಪದವೀಧರ

02:00 AM Jan 17, 2019 | Team Udayavani |

ಬೆಂಗಳೂರು: ನಕಲಿ ನೇಮಕಾತಿ ಆದೇಶ ಪತ್ರ ನೀಡಿ ಕೆಎಸ್ಸಾರ್ಟಿಸಿ ಸಹಾಯಕ ಆಡಳಿತ ಅಧಿಕಾರಿ ಹುದ್ದೆ ಪಡೆಯಲು ಯತ್ನಿಸಿದ ದ. ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಂಬಿಎ ಪದವೀಧರನೊಬ್ಬ ಸಂಸ್ಥೆಯ ಭದ್ರತಾ ಸಿಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ.

Advertisement

ಅಶ್ವಿ‌ನ್‌ ಮೆಲಿಟೋನ್‌ ಸಿಕ್ವೇರಾ (25) ಎಂಬಾತನನ್ನು ಕೆಎಸ್ಸಾರ್ಟಿಸಿ ಭದ್ರತಾ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು, ಬಳಿಕ ವಿಲ್ಸನ್‌ಗಾರ್ಡನ್‌ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ವಿಚಾರಣೆ ವೇಳೆ ಅಶ್ವಿ‌ನ್‌ಗೆ ಪುತ್ತೂರಿನ ಈತನ ಸ್ನೇಹಿತರಾದ ಸೈರಿಯನ್‌ (24) ಹಾಗೂ ಪುನೀತ್‌ (25) ಎಂಬವರು 2 ಲಕ್ಷ ರೂ. ಪಡೆದು ನಕಲಿ ನೇಮಕಾತಿ ಆದೇಶ ಪತ್ರ ಕೊಟ್ಟು ವಂಚಿಸಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಘಟನೆ ಪುತ್ತೂರಿನಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಪುತ್ತೂರು ಠಾಣೆಗೆ ವರ್ಗಾಯಿಸಲಾಗುವುದು. ಹೀಗಾಗಿ ಆರೋಪಿಗೆ ನೋಟಿಸ್‌ ಕೊಟ್ಟು ಕಳುಹಿಸಿಕೊಡಲಾಗಿದೆ ಎಂದು ವಿಲ್ಸನ್‌ಗಾರ್ಡನ್‌ ಪೊಲೀಸರು ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆ 2017ರ ಡಿಸೆಂಬರ್‌ನಲ್ಲಿ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು, 2018ರ ಜುಲೈಯಲ್ಲಿ ಅಭ್ಯರ್ಥಿಗಳ ಆಯ್ಕೆ ಮುಗಿಸಿತ್ತು. ಆದರೆ ಈ ಮಾಹಿತಿ ತಿಳಿಯದ ಅಶ್ವಿ‌ನ್‌ಗೆ ಸ್ನೇಹಿತ ಸೈರಿಯಲ್‌ ಮತ್ತು ಪುನೀತ್‌ ನಕಲಿ ಆಯ್ಕೆ ಪತ್ರ ಹಾಗೂ ನಕಲಿ ಆದೇಶ ಪತ್ರ ಕೊಟ್ಟು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜ.10ರಂದು ಕಚೇರಿಗೆ ಆಗಮಿ ಸಿದ ಅಶ್ವಿ‌ನ್‌ ನಕಲಿ ನೇಮಕಾತಿ ಆದೇಶವನ್ನು ತೋರಿಸಿದ್ದ. ಆದರೆ ಅದರಲ್ಲಿ ಕರ್ನಾಟಕ ಸರಕಾರದ ಲಾಂಛನ ಇತ್ತು, ಸಹಿಯ ಜಾಗದಲ್ಲಿ ರಸ್ತೆ ಸಾರಿಗೆ ಇಲಾಖೆ ಬೆಂಗಳೂರು ಎಂದು ಮುದ್ರಿಸಲಾಗಿತ್ತು. ಅಸಲಿ ಪತ್ರ ದಲ್ಲಿ ಸಂಸ್ಥೆಯ ಲೋಗೋ, ನೇಮಕಾತಿ ಪ್ರಾಧಿಕಾರಸ್ಥರ ಸಹಿ ಇರುತ್ತದೆ. ಅನುಮಾನಗೊಂಡ ಸಂಸ್ಥೆಯ ಭದ್ರತಾ ಮತ್ತು ಜಾಗೃತಾಧಿಕಾರಿ ಬ್ಯಾಗ್‌ ಪರಿಶೀಲಿಸಿದಾಗ ಇನ್ನಷ್ಟು ನಕಲಿ ಪತ್ರ ಪತ್ತೆಯಾಗಿವೆ. 

2 ಲಕ್ಷ ರೂ.ಗೆ ನಕಲಿ ಪತ್ರ
ಸಹಾಯಕ ಆಡಳಿತ ಅಧಿಕಾರಿ ಹುದ್ದೆ ಪರೀಕ್ಷೆ ಬರೆದಿದ್ದ ಬಗ್ಗೆ ಅಶ್ವಿ‌ನ್‌ ಮೆಲಿಟೋನ್‌ ತನ್ನ ಸ್ನೇಹಿತ ಸೈರಿಯಲ್‌ ಬಳಿ ಹೇಳಿಕೊಂಡಿದ್ದಾನೆ. ಆತ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಪ್ತರಿದ್ದು, ಕೆಲಸ ಕೊಡಿಸುವ ಭರವಸೆ ನೀಡಿದ್ದ. 4 ಲಕ್ಷ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಮಾತು ನಂಬಿದ ಅಶ್ವಿ‌ನ್‌, 2 ಲಕ್ಷ ರೂ. ಮುಂಗಡ ಹಣ ಕೊಟ್ಟಿದ್ದ. ಇನ್ನುಳಿದ 2 ಲಕ್ಷ ರೂ.ಗಳನ್ನು ನೇಮಕಾತಿ ಬಳಿಕ ಕೊಡುವುದಾಗಿ ಹೇಳಿದ್ದ.

ಅನಂತರ ಸೈರಿಯಲ್‌ ತನ್ನ ಸ್ನೇಹಿತ ಪುನೀತ್‌ ಜತೆ ಸೇರಿ ನಕಲಿ ಆಯ್ಕೆ ಪತ್ರ ಸೃಷ್ಟಿಸಿದ್ದಾನೆ. ಅಲ್ಲದೆ ಸಾರಿಗೆ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ| ಬಸವರಾಜು ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಮಾಶಂಕರ್‌ ಅವರ ಹೆಸರಿನ ಆಯ್ಕೆ ಪತ್ರವನ್ನು 2018ರ ಆಗಸ್ಟ್‌ -ಸೆಪ್ಟಂಬರ್‌ನಲ್ಲಿ ಅಶ್ವಿ‌ನ್‌ ಮನೆಗೆ ಕಳುಹಿಸಿದ್ದಾರೆ. ಹುದ್ದೆಯ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂಬುದು ತಿಳಿಯದೆ ಅಶ್ವಿ‌ನ್‌ ಸ್ನೇಹಿತರ ಮಾತನ್ನು ನಂಬಿದ್ದ.

Advertisement

ಅಶ್ವಿ‌ನ್‌ ಮೆಲಿಟೋನ್‌ ಸಿಕ್ವೇರಾ ಎಂಬಾತ ನಕಲಿ ನೇಮಕಾತಿ ಆದೇಶ ಪತ್ರ ನೀಡಿ ಹುದ್ದೆ ಪಡೆಯಲು ಯತ್ನಿಸಿದ್ದ. ಈ ಸಂಬಂಧ ಸಂಸ್ಥೆಯ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಧ್ಯವರ್ತಿಗಳ ಆಮಿಷಕ್ಕೊಳಗಾಗದೆ ನೇರವಾಗಿ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಯಾರೂ ಮೋಸ ಹೋಗಬಾರದು.
ಶಿವಯೋಗಿ ಸಿ. ಕಳಸದ್‌,  ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು.
 

Advertisement

Udayavani is now on Telegram. Click here to join our channel and stay updated with the latest news.

Next