ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಗೃಹ ಸಚಿವ ಎಂ.ಬಿ. ಪಾಟೀಲ್ ಬುಧವಾರ ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ತೆರಳಿ, ಅವರೊಂದಿಗೆ ಭೋಜನ ಸವಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ರೂವಾರಿಯೂ ಆಗಿದ್ದ ಎಂ.ಬಿ. ಪಾಟೀಲ್, ಗೃಹ ಸಚಿವರಾದ ನಂತರ ಪ್ರಥಮ ಬಾರಿಗೆ ದಾವಣಗೆರೆಗೆ ಭೇಟಿ ನೀಡಿದ್ದು, ಪೂರ್ವವಲಯ ಮಟ್ಟದ ಇಲಾಖಾ ಅಧಿಕಾರಿಗಳ ಸಭೆ ನಂತರ ಎಸ್ಸೆಸ್ ನಿವಾಸಕ್ಕೆ ತೆರಳಿ ಅವರೊಂದಿಗೆ ಊಟ ಮಾಡಿದರು.
ಊಟದ ನಂತರ ಶಾಮನೂರು ಶಿವಶಂಕರಪ್ಪರ ಜತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಶಂಕರಪ್ಪನವರು ಹಿರಿಯರು. ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಚುನಾವಣಾ ನೀತಿ ಸಂಹಿತೆ ಜಾರಿ ಮುನ್ನ ಇಲಾಖೆಯ ಎಲ್ಲಾ ವಲಯಗಳ ಪ್ರಗತಿ ಪರಿಶೀಲಿಸಬೇಕಿದೆ. ಆ ನಿಟ್ಟಿನಲ್ಲಿ ದಾವಣಗೆರೆಗೆ ಆಗಮಿಸಿದ್ದೇನೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಮಾಜಿ ಸಚಿವ ಮಲ್ಲಿಕಾರ್ಜುನ್ ಸ್ಪರ್ಧೆಗೆ ಒಲವು ತೋರುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸಮರ್ಥ ಹಾಗೂ ಜನಬೆಂಬಲ ಇರುವವರಿಗೆ ಪಕ್ಷ ಟಿಕೆಟ್ ನೀಡಲಿದೆ. ಶಾಮನೂರು ಕುಟುಂಬದವರಿಗೆ ಜನಬೆಂಬಲವಿದೆ. ಸ್ವಾಭಾವಿಕವಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಸೂಕ್ತ ಅಭ್ಯರ್ಥಿ ಎಂದು ಅವರು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಕೋರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಯಾರು ಸಮರ್ಥರೋ ಅವರಿಗೆ ಟಿಕೆಟ್ ದೊರೆಯಲಿದೆ. ಮಲ್ಲಿಕಾರ್ಜುನ್ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯವಿದೆ. ಅವರು ಸ್ಪರ್ಧಿಸಿದರೆ ತಾವು ಪ್ರಚಾರಕ್ಕೆ ಬರುವುದಾಗಿ ಹೇಳಿದರು.
ಮೈತ್ರಿ ಸರ್ಕಾರ ಇರುವುದರಿಂದ ಈ ಬಾರಿ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವಸೆ, ನೋಟ್ ಬ್ಯಾನ್‌ನಿಂದಾದ ಸಮಸ್ಯೆ, ಜಿಎಸ್‌ಟಿಯಿಂದಾದ ತೊಂದರೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಇತ್ತೀಚೆಗೆ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ್ ವಿಧಾನಸಭಾ ಚುನಾವಣಾ ಫಲಿತಾಂಶ ಸಹ ನಮ್ಮ ಕಣ್ಮುಂದಿದೆ ಎಂದು ಅವರು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, ನೋ ಕಾಮೆಂಟ್ಸ್ ಎಂದಷ್ಟೇ ಉತ್ತರಿಸಿದರೆ, ಪಕ್ಕದಲ್ಲೇ ಇದ್ದ ಶಾಮನೂರು ಶಿವಶಂಕರಪ್ಪ ವೀರಶೈವ, ಲಿಂಗಾಯತ ಎಲ್ಲಾ ಒಂದೇ ಎಂದರು.
ಇದಕ್ಕೂ ಮುನ್ನ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೃಹ ಸಚಿವ ಎಂ.ಬಿ.ಪಾಟೀಲ್ ಈ ಹಿಂದೆ ಹೇಳಿಕೆ ನೀಡಿದ್ದ ಬಗ್ಗೆ ತೀವ್ರ ತರಾಟೆ ತೆಗೆದುಕೊಂಡು, ಅನ್ಯ ಕಾರ್ಯಕ್ರಮಕ್ಕೆ ತೆರಳಿದ್ದರು.