ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೊಬೈಲ್ ಕರೆಯ ವಿವರಗಳನ್ನು ಅನ್ಯರಿಗೆ ನೀಡದಂತೆ ಪೊಲೀಸ್ ಮಹಾನಿರ್ದೇಶಕರು- ಮಹಾನಿರೀಕ್ಷಕರಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ.
ಈ ಕುರಿತು ಪೊಲೀಸ್ ಉನ್ನತ ಅಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿರುವ ಎಂ.ಬಿ.ಪಾಟೀಲ, ಕೆಲವು ವ್ಯಕ್ತಿಗಳು ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಮೊಬೈಲ್ ಕರೆಗಳ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ನಾನು ಶಾಸಕನಾಗಿರುವ ಬಬಲೇಶ್ವರ ಕ್ಷೇತ್ರದಲ್ಲಿ ಕೆಲವರು ವಿಧಾನಸಭೆ ಚುನಾವಣೆ ಈ ಹಂತದಲ್ಲಿ ದುರುದ್ದೇಶದಿಂದ ನನ್ನ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ಕಲಬುರ್ಗಿ, ಬಾಗಲಕೋಟ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನಮ್ಮ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹಿಸುವ ಕೃತ್ಯದಲ್ಲಿ ನಿರತರಾಗಿದ್ದಾರೆ. ಚುನಾವಣೆ ಈ ಹಂತದಲ್ಲಿ ನನ್ನ ರಾಜಕೀಯ ವಿರೋಧಿಗಳು ಇಂಥ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಯಾವುದೇ ಅನ್ಯ ವ್ಯಕ್ತಿಗೆ ನನ್ನ ಮೊಬೈಲ್ ಕರೆಯ ಮಾಹಿತಿ ನೀಡದಂತೆ ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ಮೊಬೈಲ್ ಕರೆಗಳ ಮಾಹಿತಿ ನನ್ನ ವೈಯಕ್ತಿಕ. ಹೀಗಾಗಿ ವೈಯಕ್ತಿಕ ಮಾಹಿತಿ ಕಸಿಯುವ ಯತ್ನ ನಡೆಸಿರುವ ನನ್ನ ರಾಜಕೀಯ ವಿರೋಧಿಗಳ ಹುನ್ನಾರಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.
ನನ್ನ, ನನ್ನ ಪತ್ನಿ ಆಶಾ ಪಾಟೀಲ, ನನ್ನ ತಮ್ಮನಾದ ವಿಧಾನ ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ, ಪುತ್ರ ಬಸನಗೌಡ ಪಾಟೀಲ, ಬಿ ಎಲ್ ಡಿ ಇ ಪ್ರಚಾರಾಧಿಕಾರಿ ಮಹಾಂತೇಶ ಬಿರಾದಾರ ಇವರ ಮೊಬೈಲ್ ಕರೆಗಳ ಮಾಹಿತಿಯನ್ನು ಪಡೆಯಲು ಮೊಬೈಲ್ ಸಿಮ್ ಸೇವೆ ನೀಡಿರುವ ಏಜೆನ್ಸಿ ಹಾಗೂ ಪೊಲೀಸ್ ಇಲಾಖೆ ನಮ್ಮ ಖಾಸಗಿತನದ ಮೊಬೈಲ್ ಕರೆಗಳ ಮಾಹಿತಿಯನ್ನು ಅನ್ಯರಿಗೆ ನೀಡಬಾರದು ಎಂದು ಲಿಖಿತ ಆಕ್ಷೇಪದಲ್ಲಿ ಕೋರಿದ್ದಾರೆ.
ಒಂದೊಮ್ಮೆ ನಮ್ಮ ಮೊಬೈಲ್ ಕರೆಗಳ ಖಾಸಗಿ ಮಾಹಿತಿಯನ್ನು ಅನ್ಯರಿಗೆ ನೀಡಿದಲ್ಲಿ ಮೊಬೈಲ್ ಸಿಮ್ ಸೇವೆ ನೀಡಿದ ಏಜೆನ್ಸಿ ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಎಂದೂ ಬಬಲೇಶ್ವರ ಶಾಸಕರೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಎಚ್ಚರಿಸಿದ್ದಾರೆ.