Advertisement

ಎಂ.ಬಿ. ಪಾಟೀಲ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸಚಿವ

03:07 PM May 26, 2017 | Team Udayavani |

ಹುಬ್ಬಳ್ಳಿ: ಸಚಿವ ಎಂ.ಬಿ.ಪಾಟೀಲ ರಾಜ್ಯ ಕಂಡ ಅತ್ಯಂತ ಭ್ರಷ್ಟ ಜಲ ಸಂಪನ್ಮೂಲ ಸಚಿವರಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿನ ನೀರಾವರಿ ಯೋಜನೆಗಳ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಲಾಗುವುದುಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಸಂಪನ್ಮೂಲ ಇಲಾಖೆ ಎಂಬುದು ಭ್ರಷ್ಟ ಹಾಗೂ ಲೂಟಿ ಮಾಡುವ ಇಲಾಖೆಯಂತಾಗಿದೆ. ಇದಕ್ಕೆ ಸಚಿವ ಎಂ.ಬಿ.ಪಾಟೀಲರೇ ಹೊಣೆಯಾಗಿದ್ದಾರೆ. ಬರದಿಂದ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದರೆ, ಆಲಮಟ್ಟಿ ಜಲಾಶಯ ಹಿನ್ನೀರಿನ ಸಂಗ್ರಹದ ನೀರನ್ನು ಜಿಂದಾಲ್‌ ಕಂಪೆನಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು. 

ಮಲಪ್ರಭಾ-ಘಟಪ್ರಭಾ ನಾಲೆಗಳ ಆಧುನೀಕರಣಕ್ಕೆ ನಮ್ಮ ವಿರೋಧ ಇಲ್ಲ. ಮಲಪ್ರಭಾ ನಾಲೆ ಆಧುನೀಕರಣಕ್ಕೆ 400-500 ಕೋಟಿ ರೂ.ಗಳಷ್ಟು ಇದ್ದ ಅಂದಾಜು ವೆಚ್ಚ ಇದ್ದಕ್ಕಿದ್ದಂತೆ 1200 ಕೋಟಿ ರೂ.ಗಳಿಗೆ ಹೆಚ್ಚಾಗಿದ್ದರ ಹಿಂದೆ ಹಣ ಹೊಡೆಯುವ ದಂಧೆಯಾಗಿದೆ ಎಂದು ಆರೋಪಿಸಿದರು. 

ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ: ಆಲಮಟ್ಟಿ ಹಿನ್ನೀರು ಸಂಗ್ರಹ ನೀರನ್ನು ಜಿಂದಾಲ್‌ ಕಂಪೆನಿಗೆ ಮಾರಾಟ ಮಾಡಿದ್ದು ಹಾಗೂ ನಾಲೆಗಳ ಆಧುನೀಕರಣಕ್ಕೆ ಅಂದಾಜು ವೆಚ್ಚ ಮೂರು ಪಟ್ಟು ಹೆಚ್ಚಳವಾಗಿದ್ದರ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಜಲಸಂಪನ್ಮೂಲ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಗೋವಿಂದ ಕಾರಜೋಳ, ಪ್ರಹ್ಲಾದ ಜೋಶಿ, ಲಕ್ಷ್ಮಣ ಸವದಿ, ಶ್ರೀಕಾಂತ ಕುಲಕರ್ಣಿ, ಎಸ್‌.ಕೆ.ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ ಅವರನ್ನೊಳಗೊಂಡ ಒಂಬತ್ತು ಜನರ ಸಮಿತಿ ಮಾಡಲಾಗಿದೆ.

ಸಮಿತಿ ಮೇ 30-31ರಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಲಿದೆ. ವರದಿ ಆಧರಿಸಿ ಮುಂದಿನ ಹೋರಾಟ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿನ ಒಟ್ಟಾರೆ ನೀರಾವರಿ ಯೋಜನೆಗಳ ಅಕ್ರಮಗಳ ಕುರಿತಾಗಿ ಪಕ್ಷದಿಂದ ಮಾಹಿತಿ ಸಂಗ್ರಹಿಸಿ ಜನರ ಮುಂದಿಡಲಾಗುವುದು ಎಂದರು. 

Advertisement

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ 2010ರಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಲೋಕಾಯುಕ್ತಕ್ಕೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದೆ. ಹಗರಣ ಆಗಿದ್ದರೆ ಕ್ರಮ ಕೈಗೊಳ್ಳಲಿ ಯಾರು ಬೇಡ ಎಂದವರು. ಶೋಭಾ ಕರಂದ್ಲಾಜೆ ಉತ್ತಮ ರೀತಿಯಲ್ಲಿ ಅಧಿಕಾರ ನಿಭಾಯಿಸಿದ್ದಾರೆ ಎಂದರು. 

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಅಡ್ಡಿಯಾಗುತ್ತಿದೆ. ಅದೇ ರೀತಿ ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಬಂದ ಹಣವನ್ನು ಸೋನಿಯಾ ಗಾಂಧಿ ಅವರ ಕಾರ್ಯಕ್ರಮದ ಪ್ರಚಾರಕ್ಕೆ ಬಳಸಿದ್ದರ ಬಗ್ಗೆ ತನಿಖೆ ನಡೆದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next