ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಏಕ ವಚನದಲ್ಲಿ ಮಾತನಾಡಿರುವುದಕ್ಕೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಮನೂರು ಶಿವಶಂಕರಪ್ಪ ನನಗೆ ತಂದೆ ಸಮಾನರು, ಅವರ ಪುತ್ರ ಮಲ್ಲಿಕಾರ್ಜುನನಷ್ಟೇ ಪ್ರೀತಿ ಅಭಿಮಾನವನ್ನು ನಾನು ಅವರ ಇಟ್ಟುಕೊಂಡಿದ್ದೇನೆ. ಆದರೆ. ವಯೋ ಸಹಜ ಗುಣಗಳಿಂದ ಅವರು ಸಾರ್ವಜನಿಕವಾಗಿ ಪದೇ ಪದೇ ಲಘುವಾಗಿ ಹೇಳಿಕೆಗಳನ್ನು ನೀಡುವಂತದ್ದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೆ ನನಗೆ ಬಚ್ಚಾ ಎಂದಿದ್ದರು. ಈಗ ಎಂ.ಬಿ. ಪಾಟೀಲ್‌ಗೆ ತಲೆ ತಿರುಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನನಗೆ ಜೀವ ಬೆದರಿಕೆ ಇದ್ದರೆ, ಪೊಲಿಸರಿಗೆ ದೂರು ನೀಡಲಿ ಎಂದು ಹೇಳಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಯಾವತ್ತೂ ಹೇಳಿಕೊಂಡಿಲ್ಲ. ಆದರೆ, ಶಾಮನೂರು ಶಿವ ಶಂಕರಪ್ಪ ಪರ ಇರುವ ಕೆಲವು ಸ್ವಾಮೀಜಿಗಳು ಬಸವರಾಜ್ ಹೊರಟ್ಟಿ, ಎಂ.ಬಿ. ಪಾಟೀಲರನ್ನು ಸರ್ವನಾಶ ಮಾಡುತ್ತೇವೆ ಎಂದಿರುವ ವಿಡಿಯೋ ನಮ್ಮ ಬಳಿ ಇದೆ. ನಾವು ಅದನ್ನು ದೊಡ್ಡದು ಮಾಡಲು ಹೋಗಿಲ್ಲ. ಸರ್ವನಾಶ ಎಂದರೆ ಏನು ಎಂದು ಶಾಮನೂರು ತಿಳಿಯಬೇಕು ಎಂದು ಎಂ.ಬಿ. ಪಾಟೀಲ್ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ವೀರಶೈವ ಲಿಂಗಾಯತ, ಬಸವಾದಿ ಶರಣರ ಕುರಿತು ಅಪಾರ ಜ್ಞಾನ ಹೊಂದಿರುವ ತರಳಬಾಳು ಶಿವಾಚಾರ್ಯ ಸ್ವಾಮೀಜಿ, ಸರ್ಕಾರ ಲಿಂಗಾಯತ ಧರ್ಮ ಘೋಷಣೆ ಮಾಡದಿದ್ದರೂ, ಲಿಂಗಾಯತ ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸಿದ್ದಾರೆ. ಲಿಂಗಾಯತ ಮತ್ತು ವೀರಶೈವದ ಭಿನ್ನತೆಯ ಬಗ್ಗೆ ಗೊತ್ತಿರದ ಶಾಮನೂರು ಶಿವ ಶಂಕರಪ್ಪ ಅವರು, ಮಹಾಸಭೆಯ ಅಧ್ಯಕ್ಷರಾದ ನಂತರವಾದರೂ ಅದನ್ನು ತಿಳಿದುಕೊಳ್ಳಬೇಕಿತ್ತು. ವೀರಶೈವ ಲಿಂಗಾಯತದಲ್ಲಿರುವ ವ್ಯತ್ಯಾಸಗಳ ಬಗ್ಗೆ ಶಾಮನೂರು ಶಿವ ಶಂಕರಪ್ಪ ಸ್ವಾಮೀಜಿಗಳಿಂದ ತಿಳಿಯುವ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿದ್ದಾರೆ.
ಎಂಬಿಪಿಗೆ ಎಸ್‌ಆರ್‌ಪಿ ಬೆಂಬಲ: ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವ ಶಾಮನೂರು ಶಿವ ಶಂಕರಪ್ಪ ಅವರ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್ ಪರೋಕ್ಷವಾಗಿ ಖಂಡಿಸಿದ್ದಾರೆ. ಯಾರು ಎಷ್ಟೆ ದೊಡ್ಡವರಾದರೂ ಇನ್ನೊಬ್ಬರ ಬಗ್ಗೆ ಏಕ ವಚನದಲ್ಲಿ ಮಾತನಾಡುವುದು ಸರಿಯಲ್ಲ. ವೀರಶೈವ ಲಿಂಗಾಯತದಲ್ಲಿ ಸೈದ್ಯಾಂತಿಕ ಭಿನ್ನಾಭಿಪ್ರಾಯದಿಂದ ಈ ತಾಕಲಾಟ ಶುರುವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಹೇಳಿದರು.
ಪಂಚ ಪೀಠಾಧೀಶರು ವೀರಶೈವ ಪ್ರತಿಪಾದನೆ ಮಾಡುತ್ತಿದ್ದಾರೆ. ವಿರಕ್ತರು ಲಿಂಗಾಯತದ ಪ್ರತಿಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಲ್ಲರೂ ಒಂದಾಗಿ ಬಂದರೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ಸಾಕಷ್ಟು ಅಧ್ಯಯನ ಮಾಡಿಕೊಂಡಿದ್ದಾರೆ. ಹೀಗಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಪರ ವಾದಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಜೀವ ಬೆದರಿಕೆ ಕರೆ ಬಂದಿರಬಹುದು ಎಂದು ಹೇಳಿದರು.
ಇಂದು “ಯುವ ಬಾಂಧವ್ಯ’
ಅಖೀಲ ಭಾರತ ವೀರಶೈವ ಮಹಾಸಭೆಯ ಯುವ ಘಟಕದ ವತಿಯಿಂದ ಇಂದು ವೀರಶೈವ ಲಿಂಗಾಯತ ನಾವೆಲ್ಲರೂ ಒಂದೇ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಮನೆ ರಸ್ತೆಯಲ್ಲಿರುವ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆವರಣದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.