Advertisement

ಇಪ್ಪತ್ತರ ಆಪತ್ತು; ಡಿಸಿಎಂಗೆ ಪಟ್ಟು ಹಿಡಿದ ಎಂ.ಬಿ.ಪಾಟೀಲ್‌

06:00 AM Jun 09, 2018 | |

 ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದವರ ಅತೃಪ್ತಿ ತೀವ್ರಗೊಂಡಿದ್ದು ಇವರ ಮನವೊಲಿಕೆಗಾಗಿ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ರಂಗಪ್ರವೇಶ ಮಾಡಿದ್ದಾರೆ. ಮತ್ತೂಂದೆಡೆ ಕಾಂಗ್ರೆಸ್‌ ಹೈಕಮಾಂಡ್‌ ಸಹ ಎಚ್ಚೆತ್ತುಕೊಂಡಿದ್ದು ಎಂ.ಬಿ.ಪಾಟೀಲ್‌ ಅವರಿಗೆ ಬುಲಾವ್‌ ನೀಡಿದೆ. 

Advertisement

ಈ ಮಧ್ಯೆ ಅತೃಪ್ತರ ಸಂಖ್ಯೆ 20 ದಾಟಿದ್ದು ಎಂ.ಬಿ.ಪಾಟೀಲ್‌ ಅಸಮಾಧಾನಿತರ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಮೂಲಕ ನಾನು ಏಕಾಂಗಿಯಲ್ಲ ಎಂದು ಹೇಳಿರುವ ಅವರು ಡಿಸಿಎಂ ಪಟ್ಟದ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದ್ದು ಹೊಸ ತಲೆನೋವಿಗೆ ಕಾರಣವಾಗಿದೆ. ಮತ್ತೂಂದೆಡೆ ಸಚಿವ ಸ್ಥಾನ ಸಿಗದಿರುವುದು ನನಗೆ ಅಸಮಾಧಾನ ತಂದಿದೆ ಎಂದು ಬಹಿರಂಗವಾಗಿ ಹೇಳಿರುವ ಸತೀಶ್‌ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಲಿಂಗಾಯಿತರಿಗೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿದ್ದು, ಸಚಿವ ಸ್ಥಾನ ಸಿಗದ ಅತೃಪ್ತರು ಎಂ.ಬಿ.ಪಾಟೀಲ್‌-ಸತೀಶ್‌ ಜಾರಕಿಹೊಳಿ ಜತೆಗೂಡುತ್ತಿದ್ದಾರೆ. ಮತ್ತೂಬ್ಬ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಎಚ್‌.ಕೆ.ಪಾಟೀಲ್‌ ಸಹ ಪ್ರತ್ಯೇಕವಾಗಿ ಶಾಸಕರ ಸಭೆ ನಡೆಸಿ ಹೈಕಮಾಂಡ್‌ ಮೇಲೆ ಒತ್ತಡ ಹಾಕುವ ತಂತ್ರ ರೂಪಿಸುತ್ತಿದ್ದಾರೆ. ಮತ್ತೂಂದೆಡೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಸೇರಿ ರಾಜ್ಯದ ವಿವಿಧೆಡೆ ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರ ಪ್ರತಿಭಟನೆ, ರಾಜೀನಾಮೆ ಪರ್ವ ಮುಂದುವರಿದಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರ ಪ್ರಾರಂಭದಲ್ಲೇ ಸವಾಲು ಆತಂಕ ಎದುರಿಸುವಂತಾಗಿದೆ. 

ಎಂ.ಬಿ.ಪಾಟೀಲ್‌ ನಿವಾಸಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಆರ್‌.ವಿ ದೇಶಪಾಂಡೆ, ಕೆ.ಜೆ. ಜಾರ್ಜ್‌ ಭೇಟಿ ನೀಡಿ ಮಾತುಕತೆ ನಡೆಸಿ ಅಸಮಾಧಾನ ನಿವಾರಿಸುವ ಪ್ರಯತ್ನ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿ ಸಮಾಧಾನಪಡಿಸುವ ಯತ್ನ ಮಾಡಿದರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಹ ಎಚ್‌.ಕೆ.ಪಾಟೀಲ್‌ ಸೇರಿದಂತೆ ಅತೃಪ್ತರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಆತುರದ ತೀರ್ಮಾನ ಕೈಗೊಳ್ಳಬೇಡಿ. ಪಕ್ಷಕ್ಕೆ ಮುಜುಗರ ಉಂಟು ಮಾಡುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಸೋಮವಾರ ಅತೃಪ್ತ ಶಾಸಕರ ಸಭೆ ನಡೆಯಲಿದ್ದು ಅಂದು ಮುಂದಿನ ಹೋರಾಟದ ರೂಪು-ರೇಷೆ ನಿರ್ಧಾರವಾಗಲಿದೆ. ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ.  ಅತೃಪ್ತರೆಲ್ಲಾ ಒಂದು ತಂಡವಾಗಿ ಹೈಕಮಾಂಡ್‌ ಮುಂದೆ ಡಿಸಿಎಂ ಹುದ್ದೆ ಹಾಗೂ ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಬೇಡಿಕೆ ಇಡಲಿದ್ದಾರೆ ಎಂದು ಹೇಳಲಾಗಿದೆ.

Advertisement

ಘೋಷಣೆ
ಎಂ.ಬಿ.ಪಾಟೀಲ್‌ ನಿವಾಸಕ್ಕೆ ಪರಮೇಶ್ವರ್‌ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು ಪರಮೇಶ್ವರ್‌ ವಿರುದ್ಧ ಘೋಷಣೆ ಕೂಗಿ, ಘೆರಾವ್‌ ಹಾಕಿದರು. ಬೆಂಬಲಿಗರನ್ನು ಸಮಾಧಾನ ಪಡೆಸಿದ ಎಂ.ಬಿ. ಪಾಟೀಲ್‌ ಪರಮೇಶ್ವರ್‌ ಅವರನ್ನು ಒಳಗೆ ಕರೆದುಕೊಂಡು ಹೋಗುವಲ್ಲಿ ಸಾಕು ಸಾಕಾಯಿತು.

ಸಂಪುಟ ವಿಸ್ತರಣೆ ಸಂಬಂಧ ಆಗಿರುವ ಬೆಳವಣಿಗೆ  ಮರೆತುಬಿಡಿ. ನೀವು ಬಯಸಿದರೆ, ಮಂತ್ರಿ ಸ್ಥಾನ ಇಲ್ಲವೇ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಪಕ್ಷ ಸಿದ್ಧ ಎಂದು ಪರಮೇಶ್ವರ್‌ ಎಂ.ಬಿ. ಪಾಟೀಲರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದು ಎಂ.ಬಿ. ಪಾಟೀಲ್‌ ಹೇಳಿದ್ದಾರೆ ಎನ್ನಲಾಗುತ್ತಿದೆ.

ಮಾತುಕತೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ವಿರುದ್ಧ ಎಂ.ಬಿ. ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿ, ನನಗೆ ನಿಮ್ಮ ಸಮಾಧಾನ, ಮಂತ್ರಿ ಪದವಿ ಎರಡೂ ಬೇಡ ಎಂದು ನೇರವಾಗಿಯೇ ಹೇಳಿದ್ದಾರೆ. ನನಗೆ ಮಂತ್ರಿ ಸ್ಥಾನ ತಪ್ಪಲು ನಾನು ಮಾಡಿರುವ ತಪ್ಪು ಏನು ಹೇಳಿ ಎಂದು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.  

ಅವರು ತೆರಳಿದ ನಂತರ ಡಿ.ಕೆ. ಶಿವಕುಮಾರ್‌ ಎಂ.ಬಿ. ಪಾಟೀಲ್‌ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಪಕ್ಷದ ಜವಾಬ್ದಾರಿ ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ತಾವು ಒಪ್ಪುವುದಾದರೆ ದೆಹಲಿಗೆ ತೆರಳಿ ಹೈಕಮಾಂಡ್‌ ಒಪ್ಪಿಗೆ ಪಡೆಯುವುದಾಗಿ ಹೇಳಿದ್ದಾರೆ. ಅವರ ಮನವಿಗೂ ಎಂ.ಬಿ.ಪಾಟೀಲ್‌ ಒಪ್ಪದಿದ್ದಾಗ, ಡಿ.ಕೆ. ಶಿವಕುಮಾರ್‌ ಎಂ.ಬಿ. ಪಾಟೀಲ್‌ ಬೆಂಬಲಿಗ‌ರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ನಿಮ್ಮ ನಾಯಕನನ್ನು ಒಪ್ಪಿಸಿ, ನಾನು ಅವರ ಪರವಾಗಿ ದೆಹಲಿಗೆ ತೆರಳಿ ಹೈ ಕಮಾಂಡ್‌  ಬಳಿ ಮಾತನಾಡುವುದಾಗಿ ಹೇಳಿದ್ದಾರೆ. ಎಂ.ಬಿ. ಪಾಟೀಲ್‌ ಬೆಂಬಲಿಗರೂ ಅವರ ಮನವಿಗೆ ಸ್ಪಂದಿಸದಿದ್ದಾಗ ಡಿ.ಕೆ. ಶಿವಕುಮಾರ್‌ ನಿರ್ಗಮಿಸಿದರು.

ಕಾಂಗ್ರೆಸ್‌ ನಾಯಕರು ತೆರಳಿದ ಹತ್ತು ನಿಮಿಷದಲ್ಲಿ ಖುದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಸದಾಶಿವ ನಗರದಲ್ಲಿರುವ ಎಂ.ಬಿ ಪಾಟೀಲ್‌ ಅವರ ನಿವಾಸಕ್ಕೆ ಆಗಮಿಸಿ, ಸಮ್ಮಿಶ್ರ ಸರ್ಕಾರದ ಭವಿಷ್ಯದ ದೃಷ್ಠಿಯಿಂದ ಗೊಂದಲಗಳನ್ನು ನಿವಾರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಂಪುಟದಲ್ಲಿ ಸೇರಿಸಿಕೊಳ್ಳಲು ಕಾಂಗ್ರೆಸ್‌ ಹೈ ಕಮಾಂಡ್‌ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಕುಮಾರಸ್ವಾಮಿ ಸಲಹೆಯನ್ನು ನಯವಾಗಿ ತಳ್ಳಿ ಹಾಕಿರುವ ಎಂ.ಬಿ ಪಾಟೀಲ್‌, ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರವಾಗಿದ್ದು, ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಬೇಕು. ಆ ನಿಟ್ಟಿನಲ್ಲಿ ಎಂ.ಬಿ.ಪಾಟೀಲ್‌ ಜತೆ ಚರ್ಚಿಸಿದ್ದೇನೆ. ಕಾಂಗ್ರೆಸ್‌ ಸಂಕಷ್ಟದಲ್ಲಿದ್ದಾಗ ನಿಷ್ಟಾವಂತನಾಗಿ ಕಷ್ಟಪಟ್ಟು ದುಡಿದು ಸಂಘಟನೆ ಕೆಲಸ ಮಾಡಿದ್ದೇನೆ. ಆದರೂ ಈ ರೀತಿ ಮೂಲೆಗುಂಪು ಮಾಡಿರುವುದು ನೋವುಂಟುಮಾಡಿದೆ ಎಂದು ಪಾಟೀಲ್‌ ನೋವು ತೋಡಿಕೊಂಡಿದ್ದಾರೆ. ನನಗೆ ತಿಳಿದ ಮಾಹಿತಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಈ ವಿಷಯದಲ್ಲಿ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ದೆಹಲಿಗೆ ಬುಲಾವ್‌
ಈ ಬೆಳವಣಿಗೆಯ ನಂತರ ಹೈ ಕಮಾಂಡ್‌ ಮಧ್ಯ ಪ್ರವೇಶ ಮಾಡಿದ್ದು, ಎಂ.ಬಿ. ಪಾಟೀಲ್‌ಗೆ ದೆಹಲಿಗೆ ಬರುವಂತೆ ಬುಲಾವ್‌ ನೀಡಿದೆ. ಎಂ.ಬಿ. ಪಾಟೀಲ್‌ ದೆಹಲಿಗೆ ತೆರಳಿದ್ದು,  ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ದೆಹಲಿಗೆ ತೆರಳಿ ಖಾಲಿ ಇರುವ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡಿ, ಬಂಡಾಯ ಶಮನ ಮಾಡುವ ಪ್ರಯತ್ನ ನಡೆಸುವಂತೆ ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 

ಇದು ಕಾಂಗ್ರೆಸ್‌ ಆಂತರಿಕ ವಿಚಾರ. ನಮ್ಮ ತಂದೆಯ ಕಾಲದಿಂದಲೂ ಅವರ ತಂದೆಯೊಂದಿಗೆ ಒಳ್ಳೆಯ ಸಂಬಂಧ ಇದೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ನನ್ನ ಸಲಹೆಯನ್ನು ಕಾಂಗ್ರೆಸ್‌ ನಾಯಕರ ಮುಂದೆ ಇಡುತ್ತೇನೆ. ನಾನು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್‌ ಹೈ ಕಮಾಂಡ್‌ ಇದನ್ನು ಬಗೆ ಹರಿಸಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

ನಾವು ಪಕ್ಷದ ವಿರುದ್ಧ ಯಾವುದೇ ಬಂಡಾಯ ಸಭೆ ನಡೆಸುತ್ತಿಲ್ಲ. ಪಕ್ಷದ ಶಾಸಕರು ನಮಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನಾನು ಏಕಾಂಗಿಯಲ್ಲ. ನನ್ನೊಂದಿಗೆ ಹದಿನೈದು ಇಪ್ಪತ್ತು ಶಾಸಕರಿದ್ದಾರೆ. ಎಲ್ಲರೂ ಮುಂದಿನ ದಿನಗಳಲ್ಲಿ ಸಭೆ ಸೇರಿ ಚರ್ಚೆ ಮಾಡುತ್ತೇವೆ. 
– ಎಂ.ಬಿ. ಪಾಟೀಲ್‌, ಮಾಜಿ ಸಚಿವ. 

ಹೈಕಮಾಂಡ್‌ ಸಂಪುಟ ರಚನೆ ಸಂಬಂಧ ಒಂದು ಫಾರ್ಮುಲಾ ರಚನೆ ಮಾಡಿದೆ. ಮೊದಲು ಸಚಿವರಾದವರಿಗೆ ಎರಡು ವರ್ಷ ಅವಧಿ. ಎರಡನೇ ಹಂತದಲ್ಲಿ ಸಚಿವರಾದವರಿಗೆ ಮೂರು ವರ್ಷ ಅವಧಿ ನೀಡಲು ತೀರ್ಮಾನಿಸಿದೆ. ಆದ್ದರಿಂದ ಎರಡು ವರ್ಷ ಕಾದು ಸಚಿವರಾಗುವವರಿಗೆ ಮೂರು ವರ್ಷ ಅಧಿಕಾರ ಸಿಗಲಿದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ. 

Advertisement

Udayavani is now on Telegram. Click here to join our channel and stay updated with the latest news.

Next