ಮುಂಬಯಿ: ಕೃಷಿ ಮಾಡಲು ನಿರ್ಧಿಷ್ಟ ವರ್ಗ ಅಥವಾ ಪಾಂಡಿತ್ಯದ ಅವಶ್ಯಕತೆ ಬೇಕಾಗಿಲ್ಲ. ಕೃಷಿಯನ್ನು ಖುಷಿಯನ್ನಾಗಿಸಿಕೊಂಡು ಬೆಳೆಸುವ ಮನಸ್ಸುಗಳ ಅಗತ್ಯವಿದೆ. ಕೃಷಿ ಲಾಭದಾಯಕ ಬೆಳೆಯಾಗಿದ್ದರೂ ಅದರ ಪೋಷಣಾ ನಿರ್ಲಕ್ಷ್ಯತನದಿಂದ ಮಹತ್ವ ಕಳಕೊಂಡಿದೆ. ಆದಾಯಕ್ಕಿಂತ ವಸ್ತು ನಿಷ್ಠೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡರೆ ಅಂಗೈಯಲ್ಲಿ ಕೃಷಿಯನ್ನು ಮೇಳೈಸಬಹುದು. ಲಾಭಾಂಶದ ಕೊರತೆಯಿಂದ ಕೃಷಿ ವಿನಾಶದ ಅಂಚಿನಲ್ಲಿದ್ದು ಇಂತಹ ಕೃಷಿ ಪೋಷಣೆಗೆ ಗುಣಾತ್ಮಕ ರೂಪ ನೀಡುವ ಅಗತ್ಯವಿದೆ. ಇಲ್ಲವಾದಲ್ಲಿ ಕೃಷಿ ಕ್ಷೇತ್ರದ ಮಹತ್ವ ಕಡಿಮೆಯಾಗಿ ಮರೆಯಾಗಲಿದೆ. ವೃತ್ತಿಯೊಂದಿಗೆ ಕೃಷಿ ಮಾಡಿದರೆ ಉತ್ಪನ್ನ ಮಟ್ಟವು ಉನ್ನತಮಟ್ಟವನ್ನು ತಲುಪಬಹುದು ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಕೃಷಿಕ ಡಾ| ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯಪಟ್ಟರು.
ಫೆ. 25 ರಂದು ಸಂಜೆ ಮಾಟುಂಗಾದ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ನಡೆದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ 9 ನೇ ವಾರ್ಷಿಕ ಸಮಾವೇಶದಲ್ಲಿ ಸಂಸ್ಥೆಯ ವಾರ್ಷಿಕ “ಕೃಷಿಬಂಧು’ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಇವರು, ಇಂದಿನ ಯುವಪೀಳಿಗೆಯನ್ನು ಕೃಷಿಯ ಸೆಳೆತ ಕಡಿಮೆಯಾಗುತ್ತಿರುವುದು ವಿಷಾಧನೀಯ. ಇದಕ್ಕೆ ಹಲವಾರು ಕಾರಣಗಳಿರಬಹುದು. ಹಿರಿಯರು ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ತಳಮಟ್ಟದಿಂದಲೇ ಮಾಡಬೇಕು. ಆಗ ಮಾತ್ರ ಕೃಷಿ ಪ್ರಧಾನ ಪರಂಪರೆ ಮುಂದುವರಿಯಲು ಸಾಧ್ಯ ವಾಗುತ್ತದೆ ಎಂದರು.
ಶ್ರೀ ಕೃಷ್ಣವಿಠuಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ನ್ಯಾಯವಾದಿ ವಿ. ಎಸ್. ಎನ್ ಹೆಬ್ಟಾರ್, ಸಮಾಜ ಸೇವಕ ಮೋಹನ್ ಕುಮಾರ್ ಜೆ. ಗೌಡ, ಉದ್ಯಮಿ ಅನಂತ ಎಸ್. ಪೈ ಮುಲುಂಡ್, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್. ಭಾಗವತ್, ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ ಆವೃತ್ತಿಯ ಸಹಾಯಕ ಸಂಪಾದಕ ಅಜಿತ್ ಘೋರ್ಪಡೆ ಗದಗ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ “ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಲಿ’ ಸಂಸ್ಥೆಗೆ “ಚಕ್ರಧಾರಿ ಪ್ರಶಸ್ತಿ’ಯನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಸೇವೆಗೈಯುತ್ತಿರುವ ಸಮಾಜ ಸೇವಕ, ಪ್ರಾಚಾರ್ಯ ಪ್ರೊ| ವೆಂಕಟೇಶ ಪೈ ಮತ್ತು ವಸುಧಾ ವಿ.ಪೈ ಇವರು “ಚಕ್ರಧಾರಿ ಪ್ರಶಸ್ತಿ’ ಸ್ವೀಕರಿಸಿದರು. ಬಳಿಕ ಅತಿಥಿಗಳು ಪ್ರೊ| ವೆಂಕಟೇಶ ಪೈ ಇವರ “ಚೆ„ತನ್ಯದ ಚಿಲುಮೆ’ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಅಭಿನಂದಿಸಿ ಗೌರವಿಸಿದರು.
ಚಕ್ರಧಾರಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಪ್ರೊ| ವೆಂಕಟೇಶ ಪೈ ಇವರು, ಮನುಷ್ಯನು ಸ್ವಾವಲಂಬಿಯಾಗಿ ಬಾಳಬೇಕು. ಅವಾಗಲೇ ಮಾನವ ಬದುಕು ಹಸನಾಗುವುದು. ಸ್ವಾವಲಂಭನ ಕೇಂದ್ರದಲ್ಲಿ ದುಡಿಸಿಕೊಳ್ಳುವ ಎಲ್ಲರೂ ಭೇದ-ಭಾವ ಇಲ್ಲದೆ ನಿಷ್ಠಾವಂತ ಸೇವಾಕಾಂಕ್ಷಿಗಳಾಗಿ ಶ್ರಮಿಸುತ್ತಿದ್ದಾರೆ. ಇಂತಹ ಸೇವಾ ನೆಮ್ಮದಿಯೇ ಸಮೃದ್ಧಿಯ ಬದುಕಾಗಿದೆ. ಇಲ್ಲಿ ಕನ್ನಡವನ್ನು ಕಟ್ಟುವ ಜೊತೆಗೆ ನಾಡು-ನುಡಿ, ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾಯಕದಲ್ಲೂ ತೊಡಗಿಸಿಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದ ಅದೆಷ್ಟೊ ತುಳು-ಕನ್ನಡಿಗರನ್ನು ಸ್ವಾವಲಂಬಿಗಳಾಗಿ ಬೆಳೆಸಿದ ಶ್ರೇಯಸ್ಸು ನಮ್ಮ ಸಂಸ್ಥೆಗಿದೆ. ನಮ್ಮ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಕೃಷಿ ಎಂದರೆ ಸರಹದ್ದು ಇಲ್ಲದ ಕ್ಷೇತ್ರವಾಗಿದೆ. ಹೇಗೆ ವಿದ್ಯೆಗೆ ವಯಸ್ಸಿಲ್ಲವೋ ಅಂತೆಯೇ ಕೃಷಿಗೂ ಅಂಚಿಲ್ಲ. ಹೇಗೆ ವೃತ್ತಿ ಮತ್ತು ಪ್ರವೃತ್ತಿ ಜೀವದ ಎರಡು ಅಕ್ಷಿಗಳಂತೆಯೋ ಕೃಷಿಯೂ ಬದುಕಿನ ಅವಿಭಾಜ್ಯ ಅಂಗದಂತೆ. ಆದ್ದರಿಂದ ಕೃಷಿಗೆ ರಕ್ಷಣೆ ಮತ್ತು ಪೋಷಣೆ ಎಲ್ಲರ ಹೊಣೆಯಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಕೈರಬೆಟ್ಟು ವಿಶ್ವನಾಥ ಭಟ್ ಅವರು ತಿಳಿಸಿದರು.
ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯಾವಳಿ, ಭಾವಗೀತೆ, ಜನಪದ ಗೀತೆ, ಸಮೂಹ ಗಾಯನ ಸೇರಿದಂತೆ ಇನ್ನಿತರ ವಿವಿಧ ವಿನೊದಾವಳಿಗಳು ಪ್ರದರ್ಶನಗೊಂಡಿತುಅಲ್ಲದೆ ಮೀರಾರೋಡ್‌ನ ರಾಧಾಕೃಷ್ಣ ನೃತ್ಯ ಅಕಾಡೆಮಿಯ ಕಲಾವಿದರಿಂದ ಕಾರ್ತಿಕ್ ಸುಬ್ರಹ್ಮಣ್ಯ ಭಟ್ ಇವರ ಮುಂದಾಳತ್ವದಲ್ಲಿ ನೃತ್ಯಸಿಂಚನ ಪ್ರದರ್ಶನಗೊಂಡಿತು.
ಗುರುಮೂರ್ತಿ ಭುವನಗಿರಿ ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ನಿಧನರಾದ ಸಾಹಿತಿ ಬಿ. ಎಸ್. ಕುರ್ಕಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಅತಿಥಿಗಳನ್ನು ಗೌರವಿಸಿದರು. ಹೇಮಾ ಎಸ್. ಅಮೀನ್ ಸ್ವಾಗತಿಸಿ ಶುಭ ಸಂದೇಶ ವಾಚಿಸಿದರು. ಕೋಶಾಧಿಕಾರಿ ಪದ್ಮನಾಭ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಪ್ರತಿಭಾ ವೈದ್ಯ ಮತ್ತು ಶಾರದಾ ಅಂಬೆಸಂಗೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ತನುಜಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಜೇಶ್ ಪಿ. ಗೌಡ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್