Advertisement

ಮೇಯರ್‌ ವೈದ್ಯಕೀಯ ನಿಧಿ ಮತ್ತೆ ಖಾಲಿ!

12:45 AM Mar 19, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸ್ಥಾಪಿಸಿರುವ “ಮೇಯರ್‌ ವೈದ್ಯಕೀಯ ಪರಿಹಾರ ನಿಧಿ’ ಮತ್ತೆ ಖಾಲಿಯಾಗಿದ್ದು, ಸದ್ಯ 2,407 ಅರ್ಜಿಗಳು ವಿವಿಧ ಹಂತದಲ್ಲಿ ಅಧಿಕಾರಿಗಳ ಬಳಿ ಬಾಕಿ ಉಳಿದಿವೆ. ಇನ್ನು 430 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.

Advertisement

ಮೇಯರ್‌ ವೈದ್ಯಕೀಯ ನಿಧಿ ಮೊತ್ತ ಖಾಲಿಯಾದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮೊತ್ತವನ್ನು ಏಪ್ರಿಲ್‌ನಂತರ ಸ್ವೀಕರಿಸುವುದಾಗಿ ಮೇಯರ್‌ ಕಚೇರಿ ಬಾಗಿಲಿಗೆ ಫ‌ಲಕ ಹಾಕಲಾಗಿದೆ. ಇತ್ತೀಚೆಗಷ್ಟೇ ಅನುದಾನ ಖಾಲಿಯಾದ ಹಿನ್ನೆಲೆಯಲ್ಲಿ (ಜ.30ರಂದು)15 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಈ ಮೊತ್ತವೂ ಖಾಲಿಯಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಕಿಡ್ನಿ, ಹೃದಯ, ಕಣ್ಣು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದು ಅದರ ವೆಚ್ಚದ ಮರುಪಾವತಿ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸುತ್ತಿದ್ದು, ಅನುದಾನ ಖಾಲಿಯಾಗಿರುವುದರಿಂದ ಅರ್ಜಿಗಳು ವಿಲೇವಾರಿಯೇ ಆಗುತ್ತಿಲ್ಲ.

ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನವನ್ನು ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ಮೀಸಲಿಡಲಾಗುತ್ತಿದ್ದು, ಈ ಮೊತ್ತಕ್ಕಿಂತ ದುಪ್ಪಟ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. 2016-20 ವರೆಗೆ ತಲಾ 10 ಕೋಟಿ ರೂ.ಗಳಂತೆ 40 ಕೋಟಿ ರೂ.ಗಳನ್ನು ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ಬಿಡುಗಡೆ ಮಾಡಲಾಗಿತ್ತು. ಅನುದಾನ ಖಾಲಿಯಾಗಿದೆ. ನಿರೀಕ್ಷೆಗೂ ಮೀರಿದ ಅರ್ಜಿ ಸಲ್ಲಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

ನಿಧಿ ಅರ್ಹರನ್ನು ತಲುಪುತ್ತಿದೆಯೇ?: ಮೇಯರ್‌ ವೈದ್ಯಕೀಯ ನಿಧಿಯ ಮೂಲಕ ನೀಡುವ ಪರಿಹಾರವನ್ನು ಅರ್ಹರಿಗಷ್ಟೇ ನೀಡುವಲ್ಲಿ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸುವ ಚರ್ಚೆಗಳು ನಡೆಯುತ್ತಲೇ ಇದೆಯಾದರೂ, ಇದು ಕಾರ್ಯರೂಪಕ್ಕೆ ಬಂದಿಲ್ಲ. ವೈದ್ಯಕೀಯ ವೆಚ್ಚವನ್ನು ನೇರವಾಗಿ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಜಮೆ ಮಾಡುವ ಪ್ರಸ್ತಾವನೆ “ಕಮಿಷನ್‌’ ಹಾವಳಿಯಿಂದ ಕಾರ್ಯರೂಪಕ್ಕೆ ಬರುತ್ತಿಲ್ಲ.

Advertisement

ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಮಾಜಿ ಮೇಯರ್‌ ಒಬ್ಬರು “ಮೇಯರ್‌ ವೈದ್ಯಕೀಯ ನಿಧಿಯಲ್ಲಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಠಿಣ ನಿಯಮ ರೂಪಿಸಲು ಚರ್ಚೆಯಾಗಿತ್ತು. ಆದರೆ, ಇದಕ್ಕೆ ಪಾಲಿಕೆ ಸದಸ್ಯರೇ ಸ್ಪಂದಿಸಲಿಲ್ಲ. ಇದರಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳ ಲೋಪವೂ ಇದೆ. ದಾಖಲೆಗಳನ್ನು ಪರಿಶೀಲಿಸದೆ ಮೇಯರ್‌ ಸಹಿಗೆ ಕಳುಹಿಸಲಾಗುತ್ತಿದೆ. ಇದರ ಹಿಂದೆ ಕಮಿಷನ್‌ ದಂಧೆಯೂ ಕೆಲಸ ಮಾಡುತ್ತಿದೆ’ಎಂದು ಆರೋಪಿಸಿದರು.

ಹೆಚ್ಚು ಹಣ ಅಗತ್ಯ: ಕಳೆದ ವರ್ಷಾಂತ್ಯದಲ್ಲಿ 1,500 ಅರ್ಜಿಗಳು ಬಾಕಿ ಉಳಿದಿದ್ದವು. ಇದಕ್ಕೆ ಅಂದಾಜು 20 ಕೋಟಿ ರೂ.ಬೇಕಾಗಿತ್ತು. ಹೀಗಾಗಿ, ಜನವರಿಯಲ್ಲಿ 15 ಕೋಟಿ ರೂ.ಅನುದಾನ ನೀಡಲಾಗಿತ್ತು. ಈಗ ಒಟ್ಟು 2,837 ಅರ್ಜಿಗಳು ವಿಲೇವಾರಿಯಾ ಗಬೇಕಿದ್ದು, ಮತ್ತೆ 10-15 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮೇಯರ್‌ ವೈದ್ಯಕೀಯ ನಿಧಿಯಲ್ಲಿ ಹಣ ಖಾಲಿಯಾಗಿದ್ದು, 2020-21ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು.
-ಎಂ.ಗೌತಮ್‌ಕುಮಾರ್‌, ಮೇಯರ್‌

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next