ಬೆಂಗಳೂರು: ಸೆಪ್ಟೆಂಬರ್ ಬಳಿಕ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಗೆ ಸಿದ್ಧತೆಗಳು ಪ್ರಾರಂಭವಾಗಿದ್ದು, ಮತದಾರರ ಪಟ್ಟಿ ಸಿದ್ಧವಾಗಿದೆ. ಅನರ್ಹವಾಗಿರುವ ಕಾಂಗ್ರೆಸ್‌ನ ನಾಲ್ವರು ಮತ್ತು ಜೆಡಿಎಸ್‌ನ ಒಬ್ಬ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, 257 ಮತದಾರರ ಹೆಸರನ್ನು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ ಪ್ರಾದೇಶಿಕ ಆಯುಕ್ತರಿಗೆ ನೀಡಿದ್ದಾರೆ.
ಮೇಯರ್ ಗಂಗಾಂಬಿಕೆ ಮತ್ತು ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆ.28ರಂದು ಕೊನೆಗೊಳ್ಳಲಿದೆ. ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಒಟ್ಟು ಮತದಾರರ ಸಂಖ್ಯೆ 257ಕ್ಕೆ ಇಳಿದಿದ್ದು, ಮ್ಯಾಜಿಕ್ ಸಂಖ್ಯೆ 129 ಆಗಿದೆ.
ಪ್ರಸ್ತುತ ಸಿದ್ಧಪಡಿಸಿರುವ ಮತದಾರರ ಪಟ್ಟಿಯಂತೆ ಕಾಂಗ್ರೆಸ್-ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಸಂಖ್ಯೆ ಜಾಸ್ತಿಯಿದ್ದು, ಬಿಜೆಪಿ ನಾಲ್ಕು ಮತಗಳಿಂದಷ್ಟೇ ಹಿಂದಿದೆ. ಇದರಂತೆ ಮೈತ್ರಿ ಪಕ್ಷಗಳು ಮತ್ತು 6 ಪಕ್ಷೇತರ ಸದಸ್ಯರು ಸೇರಿ 131 ಮತದಾರರಿದ್ದಾರೆ. ಬಿಜೆಪಿ 126 ಮತದಾರರನ್ನು ಹೊಂದಿದೆ. ಪಕ್ಷೇತರರೊಬ್ಬರು ಬಹಿರಂಗವಾಗಿಯೇ ಬಿಜಿಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಮೈತ್ರಿ ಮತದಾರರ ಸಂಖ್ಯೆ 130ಕ್ಕೆ ಇಳಿದಿದ್ದು, ಬಿಜೆಪಿ 127ಕ್ಕೆ ತಲುಪಿದೆ.
ಅನರ್ಹರ ಬೆಂಬಲಿಗರ ಮೇಲೆ ನಿಂತಿದೆ ಚುನಾವಣೆ: ಅನರ್ಹಗೊಂಡ ಶಾಸಕರ ಬೆಂಬಲಿಗರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ಅನರ್ಹಗೊಂಡ ಶಾಸಕರ ಬೆಂಬಲಿಗರು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ. ಈ ಭೇಟಿ ನೂತನ ಸಚಿವರಿಗೆ ಶುಭಕೋರುವುದಕ್ಕಷ್ಟೇ ಸೀಮಿತ ಎಂದು ಹೇಳಲಾಗಿದೆಯಾದರೂ, ಇದು ಮೇಯರ್ ಚುನಾವಣೆಯ ಪೂರ್ವ ಸಿದ್ಧತೆ ಎನ್ನಲಾಗಿದೆ.
ಆರ್.ಮುನಿರತ್ನ ಅವರ ಬೆಂಬಲಿಗರಾದ ಜಾಲಹಳ್ಳಿ ವಾರ್ಡ್‌ನ ಸದಸ್ಯ ಜೆ.ಎನ್.ಶ್ರೀನಿವಾಸ ಮೂರ್ತಿ, ಲಕ್ಷ್ಮೀದೇವಿನಗರ ವಾರ್ಡ್‌ನ ಸದಸ್ಯ ಎಂ.ವೇಲು ನಾಯಕರ್, ಕೊಟ್ಟಿಗೆಪಾಳ್ಯದ ಜಿ.ಮೋಹನ್ ಕುಮಾರ್ ಮತ್ತು ಯಶವಂತಪುರ ವಾರ್ಡ್‌ನ ಜಿ.ಕೆ.ವೆಂಕಟೇಶ್ ಗುರುವಾರ ಸಚಿವ ಅಶೋಕ್‌ರನ್ನು ಭೇಟಿ ಮಾಡಿದ್ದರು. ಈ ಬೆಳವಣೆಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಜೆಡಿಎಸ್ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್ ನೇರವಾಗಿ ಬಿಜಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಪಕ್ಷೇತರರು ಮತ್ತು ಅನರ್ಹ ಶಾಸಕರ ಬೆಂಬಲಿಗರೂ ಬಿಜೆಪಿಗೆ ಜಿಗಿಯುವ ಸಾಧ್ಯತೆಯಿದೆ.
ಮತದಾರರ ವಿವರ
ಬಿಬಿಎಂಪಿ ಸದಸ್ಯರು
ಪಕ್ಷ ಸದಸ್ಯರು
ಬಿಜೆಪಿ 101
ಕಾಂಗ್ರೆಸ್ 76
ಜೆಡಿಎಸ್ 14
ಪಕ್ಷೇತರರು 7
ಒಟ್ಟು 198
ಶಾಸಕರು
ಬಿಜೆಪಿ 11
ಕಾಂಗ್ರೆಸ್ 11
ಜೆಡಿಎಸ್ 1
ಒಟ್ಟು 23
ವಿಧಾನ ಪರಿಷತ್ ಸದಸ್ಯರು
ಬಿಜೆಪಿ 7
ಕಾಂಗ್ರೆಸ್ 10
ಜೆಡಿಎಸ್ 5
ಒಟ್ಟು 22
ಸಂಸದರು
ಬಿಜೆಪಿ 4
ಕಾಂಗ್ರೆಸ್ 1
ಒಟ್ಟು 5
ರಾಜ್ಯಸಭಾ ಸದಸ್ಯರು
ಬಿಜೆಪಿ 02
ಕಾಂಗ್ರೆಸ್ 06
ಜೆಡಿಎಸ್ 01
ಒಟ್ಟು 09
ಪಕ್ಷವಾರು ಮತದಾರರ ವಿವರ
ಬಿಜೆಪಿ 125
ಕಾಂಗ್ರೆಸ್ 104
ಜೆಡಿಎಸ್ 21
ಪಕ್ಷೇತರರು 7
ಒಟ್ಟು 257
ಮ್ಯಾಜಿಕ್ ಸಂಖ್ಯೆ 129