Advertisement

ಅತಿ ಹೆಚ್ಚು ಸಭೆ ನಡೆಸಿದ ಮೇಯರ್‌

12:02 PM Jul 29, 2018 | Team Udayavani |

ಬೆಂಗಳೂರು: ಅತಿ ಹೆಚ್ಚು ಪಾಲಿಕೆ ಸಭೆಗಳನ್ನು ನಡೆಸಿದ ಮೇಯರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಉದ್ದೇಶದೊಂದಿಗೆ ಮೇಯರ್‌ ಆರ್‌.ಸಂಪತ್‌ರಾಜ್‌, ಈವರೆಗೆ 31ಸಭೆಗಳನ್ನು ನಡೆಸಿದ್ದಾರೆ. ಆ ಮೂಲಕ ಪಾಲಿಕೆಯ ಇತಿಹಾಸದಲ್ಲಿ ಅತಿಹೆಚ್ಚು ಸಭೆಗಳನ್ನು ನಡೆಸಿದ ಮೇಯರ್‌ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಆದರೆ, ಕೌನ್ಸಿಲ್‌ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಪೈಕಿ ಶೇ.10ರಷ್ಟು ಕೂಡ ಪಾಲನೆಯಾಗಿಲ್ಲ.  

Advertisement

ಸಾಮಾನ್ಯವಾಗಿ ಮೇಯರ್‌ ಅವರು ಮಾಸಿಕ ಸಭೆ ಹಾಗೂ ಪ್ರಸ್ತುತ ವಿಷಯಗಳ ಕುರಿತು ಚರ್ಚಿಸಲು ಒಂದು ವಿಶೇಷ ಸಭೆ ಕರೆಯುವುದು ವಾಡಿಕೆ. ಆದರೆ, ಮೇಯರ್‌ ಸಂಪತ್‌ರಾಜ್‌ ಅವರ ಆಡಳಿತವಾಧಿ ಮುಗಿಯಲು ಎರಡು ತಿಂಗಳಿರುವ ಮೊದಲೇ ಅವರು 31 ಸಭೆಗಳನ್ನು ನಡೆಸಿದ್ದು, ಮುಂದಿನ ಎರಡು ತಿಂಗಳಲ್ಲಿ ಸಭೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆಡಳಿತದಲ್ಲಿ ಸುಧಾರಣೆ ತರಬೇಕೆಂಬ ಸದುದ್ದೇಶದಿಂದ ಸಂಪತ್‌ರಾಜ್‌ ಮೇಯರ್‌ ಆದ ನಂತರ ತಿಂಗಳಿಗೆ ಎರಡರಿಂದ ಮೂರು ಬಾರಿ ಕೌನ್ಸಿಲ್‌ ಸಭೆ ನಡೆಸಿದರೂ ಅಲ್ಲಿ ಆಗುವ ಆದೇಶಗಳಲ್ಲಿ ಶೇ.10ರಷ್ಟೂ ಪಾಲನೆಯಾಗಿಲ್ಲ.

ಪಾಲಿಕೆಯ ಈ ಅವಧಿಯಲ್ಲಿ ಮೊದಲು ಮೇಯರ್‌ ಆಗಿದ್ದ ಮಂಜುನಾಥರೆಡ್ಡಿ 29, ನಂತರ ಜಿ.ಪದ್ಮಾವತಿ ಅವರು 21 ಸಭೆಗಳನ್ನು ನಡೆಸಿದ್ದಾರೆ. ಆದರೆ, ಕೇವಲ ಹತ್ತು ತಿಂಗಳಲ್ಲಿ ಮೇಯರ್‌ ಸಂಪತ್‌ರಾಜ್‌ 31  ಕೌನ್ಸಿಲ್‌ ಸಭೆ ನಡೆಸಿದ್ದು, ಜುಲೈ ಅಂತ್ಯಕ್ಕೆ ಸಭೆಗಳ ಸಂಖ್ಯೆ 32ಕ್ಕೇರಲಿದೆ. ಆದರೆ, ಫ‌ಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಂತಾಗಿದೆ. ಈಮಧ್ಯೆ, ಸಂಪತ್‌ರಾಜ್‌  ನೇತೃತ್ವದಲ್ಲಿ ಕರೆಯಲಾಗುತ್ತಿರುವ ಕೌನ್ಸಿಲ್‌ ಸಭೆಗಳನ್ನು 10.30 ನಿಗದಿಪಡಿಸಿದರೂ, ಸಭೆಗಳು ಆರಂಭವಾಗುತ್ತಿರುವುದು ಮಾತ್ರ 12 ಗಂಟೆ ನಂತರವೇ.

ಭತ್ಯೆ, ಊಟಕ್ಕೆ ಲಕ್ಷ ಲಕ್ಷ ಖರ್ಚು: ಬಿಬಿಎಂಪಿ ಕೌನ್ಸಿಲ್‌ ಸಭೆಗೆ ಹಾಜರಾಗುವ ಪ್ರತಿಯೊಬ್ಬರ ಸದಸ್ಯರಿಗೂ ಒಂದು ದಿನಕ್ಕೆ 400 ರೂ. ಭತ್ಯೆ ನೀಡಲಾಗುತ್ತದೆ. 198 ಚುನಾಯಿತ ಸದಸ್ಯರು ಹಾಗೂ 20 ನಾಮನಿರ್ದೇಶಿತ ಸದಸ್ಯರಿಗೆ ಭತ್ಯೆ ನೀಡಲಾಗುತ್ತಿದೆ. ಇದರೊಂದಿಗೆ ಊಟ, ಉಪಹಾರ ಸೇರಿ ಇನ್ನಿತರ ವೆಚ್ಚ ಸೇರಿ ಒಂದು ದಿನದ ಸಭೆಗೆ ಅಂದಾಜು 8 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಆದರೂ, ಸಭೆಗಳು ಸಮರ್ಪಕವಾಗಿ ನಡೆಯದಿರುವುದು ಹಿರಿಯ ಸದಸ್ಯರ ಕೋಪಕ್ಕೆ ಕಾರಣವಾಗಿದೆ. 

“ಪಿಂಕ್‌ ಅವರ್‌’ ಜಾರಿಯಾಗಿಲ್ಲ: ಸಂಪತ್‌ರಾಜ್‌ ಅವರು ಸಭೆಯಲ್ಲಿ ಮಹಿಳೆಯರು ಮಾತನಾಡಲು ಒಂದು ಗಂಟೆ ಪಿಂಕ್‌ ಅವರ್‌ ನಿಗದಿಪಡಿಸುವುದಾಗಿ ಘೋಷಿಸಿದ್ದರು. ಆದರೆ, ಈವರೆಗೆ ಒಮ್ಮೆಯೂ ನಿರಂತರವಾಗಿ ಒಂದು ಗಂಟೆ ಮಹಿಳೆಯರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಹಿಳಾ ಸದಸ್ಯರೇ ಸಭೆಯಲ್ಲಿ ನೇರವಾಗಿ ಮೇಯರ್‌ ಅವರನ್ನು ಕೇಳಿದ ಘಟನೆಗಳು ನಡೆದಿವೆ. 

Advertisement

ಜಾರಿಯಾಗದ ಪ್ರಮುಖ ಆದೇಶಗಳು 
-ತ್ಯಾಜ್ಯಕ್ಕೆ ಬೆಂಕಿ ಹಾಕುವವರಿಗೆ ದುಬಾರಿ ದಂಡ 
-ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ
-ಫ್ಲೆಕ್ಸ್‌ ಮುದ್ರಣ ಮಳಿಗೆಗಳಿಗೆ ಬೀಗ
-ಖಾಸಗಿ ತ್ಯಾಜ್ಯ ನಿರ್ವಹಣಾ ಘಟಕ ಮೇಲೆ ನಿಗಾವಹಿಸಲು ಪ್ರತ್ಯೇಕ ಸಮಿತಿ
-ಪೊಲೀಸ್‌ ಇಲಾಖೆಯಿಂದ ಜಪ್ತಿಯಾದ ವಾಹನಗಳ ವಿಲೇವಾರಿ ಮಾಡದಿದ್ದರೆ ವಾಹನಗಳು ಪಾಲಿಕೆ ವಶಕ್ಕೆ 
-ಶಿಷ್ಟಾಚಾರ ಉಲ್ಲಂ ಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
-ನೀರಿನ ಸಮಸ್ಯೆ ನಿವಾರಣೆಗೆ ವಲಯವಾರು ಪ್ರತ್ಯೇಕ ಅಧಿಕಾರಿ ನೇಮಕ
-ದುಬೈ ಮಾದರಿ ವಾಹನ ನಿಲುಗಡೆ, ಜಾಹೀರಾತು ಹಾಗೂ ಒಎಫ್ಸಿ ಶುಲ್ಕ ಸಂಗ್ರಹ
-3 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವರ್ಗಾವಣೆ
-ಭಿತ್ತಿಪತ್ರ ಅಂಟಿಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

Advertisement

Udayavani is now on Telegram. Click here to join our channel and stay updated with the latest news.

Next