ಬೆಂಗಳೂರು: ನಗರದಲ್ಲಿ “ಇಂದಿರಾ ಕ್ಯಾಂಟಿನ್’ ಜಾರಿಗೆ ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, ಈಗಾಗಲೇ ಕ್ಯಾಂಟಿನ್‌ನ ಲಾಂಭನ ಅಂತಿಗೊಳಿಸಲಾಗಿದೆ. ಜತೆಗೆ ಎಲ್ಲ 198 ಕ್ಯಾಂಟಿನ್‌ಗಳ ವಿನ್ಯಾಸ ಅಂತಿಮಗೊಳಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಆಗಸ್ಟ್ 15ರಂದು ಏಕಕಾಲದಲ್ಲಿ ಎಲ್ಲಾ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ತೀರ್ಮಾನಿಸಲಾಗಿದೆ. ಕ್ಯಾಂಟಿನ್ ನಿರ್ಮಾಣಕ್ಕಾಗಿ ಪಾಲಿಕೆಯ 198 ವಾರ್ಡ್‌ಗಳಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದೆ.
ಈ ಪೈಕಿ 21 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕೂಡಲೇ ಪ್ರೀಕಾರ್ಟ್ ಎಲಿಮೆಂಟ್‌ಗಳನ್ನು ಜೋಡಿಸಲಾಗುತ್ತಿದೆ. 18 ಸ್ಥಳಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದ್ದು, 3 ಸ್ಥಳಗಳಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳುವುದು ಕಷ್ಟವಾದ ಹಿನ್ನೆಲೆಯಲ್ಲಿ ಬೇರೆ ಸ್ಥಳಗಳನ್ನು ಗುರುತಿಸುವಂತೆ ಮೇಯರ್ ಸೂಚಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಕುರಿತಂತೆ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕ್ಯಾಂಟಿನ್‌ಗಾಗಿ 198 ವಾರ್ಡ್‌ಗಳಲ್ಲಿ ಜಾಗ ಗುರುತಿಸಿರುವ ಕುರಿತು ಮತ್ತು ಕೂಡಲೇ ನಿರ್ಮಾಣಕ್ಕೆ ಸಿದ್ಧವಾಗಿರುವ ಸ್ಥಳಗಳ ಕುರಿತು ಮಾಹಿತಿ ಪಡೆದರು.
ನಗರದ 21 ಜಾಗಗಳ ಕ್ಯಾಂಟಿನ್ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೇಯರ್, ಕಟ್ಟಡದಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಅಂತಹ ಜಾಗ ಬಿಟ್ಟು ಬೇರೆ ಕಡೆ ಜಾಗ ಗುರುತಿಸಿ ಎಂದು ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮೇಯರ್ ಪದ್ಮಾವತಿ, ಬೆಂಗಳೂರು ನಗರಾಭಿವೃದ್ಧಿ ಸಚಿವರು ಇಂದಿರಾ ಕ್ಯಾಂಟಿನ್‌ಗೆ ಗುರುತಿಸಿರುವ ಜಾಗಗಳ ವಿವರ ನೀಡುವಂತೆ ಕೋರಿದ್ದು, ಅದರ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ. ಅಧಿಕಾರಿಗಳು ಮೂರು ಜಾಗಗಳಲ್ಲಿ ಮಾತ್ರ ಕ್ಯಾಂಟಿನ್ ನಿರ್ಮಾಣಕ್ಕೆ ಸಾಧ್ಯವಿಲ್ಲವೆಂದು ತಿಳಿಸಿದ್ದು, ಹೊಸ ಜಾಗ ಗುರುತಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಒಟ್ಟು 198 ಕ್ಯಾಂಟಿನ್‌ಗಳ ಪೈಕಿ ಶೇ.20ರಷ್ಟು ವಾರ್ಡ್‌ಗಳನ್ನು ಸ್ತ್ರೀ ಸ್ವಸಹಾಯ ಸಂಘಟಗಳಿಗೆ ನೀಡಲು ಸರ್ಕಾರದ ನಿರ್ಧರಿಸಿದೆ. ಉಳಿದಂತೆ ಕ್ಯಾಂಟೀನ್ ಸೇವೆ ನೀಡಲು ಸಿದ್ಧವಿರುವವರು ಪಾಲಿಕೆಗೆ ಮನವಿ ಮಾಡಿದರೆ ಲಾಟರಿ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಿದರು.