Advertisement

ಕಾಯಂಗೆ ಅರ್ಜಿಯಲ್ಲಿ ಮೇಸ್ತ್ರಿ ಸಂಬಂಧಿಗಳು!

04:23 PM Jul 30, 2018 | |

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ 176 ಪೌರ ಕಾರ್ಮಿಕರ ನೇರ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದೆಯಾದರೂ, ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದ ಮೂಲ ಪೌರಕಾರ್ಮಿಕರಿಗೆ ಅನ್ಯಾಯವಾಗುವ ಸಾಧ್ಯತೆ ದಟ್ಟವಾಗಿದೆ. ಮೇಸ್ತ್ರಿ, ಸ್ಯಾನಿಟೇಷನ್‌ ಇನ್ಸ್‌ಪೆಕ್ಟರ್‌ ಗಳು ತಮ್ಮ ಸಂಬಂಧಿಕರಿಂದ ಅರ್ಜಿ ಸಲ್ಲಿಸಿರುವುದು ಈ ಅಕ್ರಮಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ, ಉಳಿದ ಬಳ್ಳಾರಿ ಸೇರಿ 10 ಮಹಾನಗರ ಪಾಲಿಕೆಗಳಲ್ಲಿ ಕೊರತೆಯಿದ್ದ ಪೌರಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಪಾಲಿಕೆಯಲ್ಲಿ 176 ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 570 ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ, ಗುತ್ತಿಗೆ ಮತ್ತು ಕಾಯಂ ಪೌರಕಾರ್ಮಿಕರನ್ನು ನಿರ್ವಹಿಸುವ ಮೇಸ್ತ್ರಿಗಳು ಮತ್ತು ಸ್ಯಾನಿಟೇಷನ್‌ ಇನ್ಸ್‌ಪೆಕ್ಟರ್‌ಗಳು, ತಮ್ಮ ಸಂಬಂಧಿಕರಿಂದಲೂ ಅರ್ಜಿ ಸಲ್ಲಿಸಿದ್ದಾರೆ. 

ಈ ಮೂಲಕ ಮೇಸ್ತ್ರಿ, ಸ್ಯಾನಿಟೇಷನ್‌ ಇನ್ಸಪೆಕ್ಟರ್‌ಗಳಿಂದಲೇ ಮೂಲ ಪೌರಕಾರ್ಮಿಕರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗುತ್ತಿಗೆಪೌರಕಾರ್ಮಿಕರ ಹಾಜರಾತಿ ಪುಸ್ತಕಕ್ಕೆ ಅಷ್ಟೇ ಸೀಮಿತವಾಗಿದ್ದ ಇವರ ಸಂಬಂಧಿಕರು ಹೆಸರಿಗಷ್ಟೇ ಪೌರಕಾರ್ಮಿಕರಾಗಿದ್ದು, ಎಂದೂ ರಸ್ತೆಗಿಳಿದು ಕಸಗುಡಿಸುವ ಕೆಲಸ ಮಾಡಿಲ್ಲ. ಇನ್ನು ಕೆಲವರು ತಮ್ಮ ವೇತನದಲ್ಲಿ ಮೇಸ್ತ್ರಿಗೆ ಒಂದಷ್ಟು ಹಣ ಕೊಟ್ಟು ಕೆಲಸ ಮಾಡದೆ ಕೇವಲ ಹಾಜರಾತಿ ಪುಸ್ತಕದಲ್ಲಿ ಸಹಿಮಾಡಿ ಮನೆಗೆ ಹೋಗುವಂತಹ ಪೌರಕಾರ್ಮಿ ಕರೂ ಅರ್ಜಿ ಸಲ್ಲಿಸಿದ್ದಾರೆ ಎಂದುತಿಳಿದುಬಂದಿದೆ. ಹೀಗೆ ಹಾಜರಾತಿ ಪುಸ್ತಕದಲ್ಲಿ ಸಹಿಗಷ್ಟೇ ಸೀಮಿತವಾಗಿರುವ ಇಂಥವರನ್ನು ಜಿಲ್ಲಾಡಳಿತ ಒಂದು ವೇಳೆ ನೇಮಕ ಮಾಡಿದರೆ ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂಲ ಪೌರಕಾರ್ಮಿಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಅಂಥ ಅರ್ಜಿಗಳನ್ನು ಜಿಲ್ಲಾಡಳಿತ ಕೈಬಿಡಬೇಕೆಂಬುದು ಮೂಲ ಪೌರಕಾರ್ಮಿಕರ ಒತ್ತಾಯವಾಗಿದೆ.

ದಿನೇದಿನೆ ವಿಸ್ತಾರಗೊಳ್ಳುತ್ತಿರುವ ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆಗೆ ಒಟ್ಟು 650 ಪೌರಕಾರ್ಮಿಕರ ಅಗತ್ಯವಿದೆ. ಪಾಲಿಕೆಯಲ್ಲಿ ಸದ್ಯ 178 ಕಾಯಂ, 465 ಗುತ್ತಿಗೆ ಸೇರಿ ಒಟ್ಟು 643 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾಡಳಿತ ಅಗತ್ಯವಿರುವ 465 ಪೌರಕಾರ್ಮಿಕರ ಬದಲಿಗೆ ಕೇವಲ 176 ಹುದ್ದೆಗಳಿಷ್ಟೇ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 570 ಜನರಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ನಿಯಮದ ಪ್ರಕಾರ ಪೌರಕಾರ್ಮಿಕರಿಗೆ ಸಮವಸ್ತ್ರ, ಮುಖಕ್ಕೆ ಮಾಸ್ಕ್, ಕೈ ಗವಸು, ಕಾಲಿಗೆ ಬೂಟು, ಪೊರಕೆ, ಆರೆ, ಬಕೆಟ್‌ ಸೇರಿ ಒಟ್ಟು 25 ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಕೈಗೊಂಡಿರುವ ಕ್ರಮಗಳು ಭೌತಿಕವಾಗಿ ಪೌರಕಾರ್ಮಿಕರ ಕೈ ಸೇರದಿದ್ದರೂ, ಅದಕ್ಕಾಗುವ ವೆಚ್ಚದ ಬಿಲ್ಲುಗಳು ಮಾತ್ರ ಪಾಸಾಗುತ್ತವೆ ಎಂಬುದು ಪೌರಕಾರ್ಮಿಕರ ಆರೋಪವಾಗಿದೆ.

Advertisement

ಪೌರ ಕಾರ್ಮಿಕರಿಗೆ ಈ ಮೊದಲು ಪೇ ಸ್ಕೇಲ್‌ ಪ್ರಕಾರ ವೇತನ ನೀಡಲಾಗುತ್ತಿತ್ತು. ಪ್ರತಿ ತಿಂಗಳು ಕಾರ್ಮಿಕರ ಕೈ ಸೇರಬೇಕಿದ್ದ ವೇತನ 4 ತಿಂಗಳಿಗೊಮ್ಮೆ 2 ತಿಂಗಳ ವೇತನ ಪಾವತಿಸಲಾಗುತ್ತಿದೆ. ಮಾರ್ಚ್‌, ಏಪ್ರಿಲ್‌ ತಿಂಗಳ ವೇತನ ಜು. 12 ರಂದು ಪಾವತಿಯಾಗಿದ್ದು, ಇನ್ನು ಮೇ, ಜೂನ್‌ ತಿಂಗಳ ವೇತನ ಬಾಕಿ ಉಳಿದಿದೆ. ವೇತನ ಪಾವತಿಗೆ ನಿಗದಿತ ದಿನಾಂಕವಿಲ್ಲದಿದ್ದರೂ, 10ನೇ ತಾರೀಖು ಮೇಲೆ ಪಾವತಿಸಲಾಗುತ್ತಿದೆ. 

ಕಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರ ಆರೋಗ್ಯ, ಸುರಕ್ಷೆ ವಿಷಯದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕೈ ಗವಸು, ಮಾಸ್ಕ್ ಸೇರಿ ಅಗತ್ಯ ಪರಿಕರಗಳನ್ನು ಆಯಾ ವಿಭಾಗದ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ. 3 ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿತ ಅವಧಿಯಲ್ಲೇ ವೇತನ ಪಾವತಿಸಲಾಗುತ್ತದೆ. ಆದರೆ, ಗುತ್ತಿಗೆದಾರರಿಂದ ತಡವಾಗಿ ಕಾರ್ಮಿಕರ ಕೈ ಸೇರುತ್ತಿರಬಹುದು. ಸದ್ಯ ಪೌರಕಾರ್ಮಿಕರ ಹುದ್ದೆಗಳಿಗೆ ನೇರನೇಮಕಾತಿ ನಡೆಯುತ್ತಿದೆ.
  ನಾರಾಯಣಪ್ಪ, ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ

ಪೌರಕಾರ್ಮಿಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಪಾಲಿಕೆ ಮೇಸ್ತ್ರಿಗಳು, ಸ್ಯಾನಿಟೇಷನ್‌ ಇನ್ಸ್‌ಪೆಕ್ಟರ್‌ಗಳು ತಮ್ಮ ಸಂಬಂಧಿ ಕರಿಂದ ಅರ್ಜಿ ಸಲ್ಲಿಸಿರುವುದು ನಮ್ಮ ಗಮನಕ್ಕಿಲ್ಲ. ಗುತ್ತಿಗೆದಾರರಿಂದ ಮಾಹಿತಿ ಪಡೆಯಲಾಗುವುದು. ಒಂದುವೇಳೆ ಅದು ನಿಜವಾದಲ್ಲಿ ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದ ಮೂಲ ಪೌರಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಪೌರಕಾರ್ಮಿಕರಿಗೆ ಸಮವಸ್ತ್ರ, ಕೈ ಗವಸು ಇತರೆ ಪರಿಕರಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ. ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
 ಆರ್‌.ಸುಶೀಲಾಬಾಯಿ, ಮಹಾಪೌರರು, ಮಹಾನಗರ ಪಾಲಿಕೆ, ಬಳ್ಳಾರಿ

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next