ಹರಿಹರ: ನಗರಸಭೆ ಅನುದಾನದ ಕೊರತೆಯಿಂದ ನಗರದ ಕೆಲವು ವಾರ್ಡ್‌ಗಳಲ್ಲಿ ನಿರೀಕ್ಷಿತ ಕಾಮಗಾರಿ ಮಾಡಲಾಗಿಲ್ಲ, ಶಾಸಕರ ಜೊತೆ ಚರ್ಚಿಸಿ ಅವರ ಅನುದಾನದಲ್ಲಾದರೂ ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದೆಂದು ನಗರಸಭಾಧ್ಯಕ್ಷೆ ಶಾಹೀನಾ ದಾದಾಪೀರ್ ಹೇಳಿದರು.
ನಗರದ 5,6 ಮತ್ತು 11ನೇ ವಾರ್ಡ್‌ಗಳಲ್ಲಿ ಸ್ಥಳೀಯ ನಗರಸಭಾ ಸದಸ್ಯರೊಂದಿಗೆ ಸಂಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣಕ್ಕೆ ಸರ್ಕಾರದಿಂದ ನಗರಸಭೆಗೆ ನಿಗದಿತವಾಗಿ ಬರಬೇಕಿದ್ದ ಅನುದಾನದಲ್ಲಿ ವ್ಯತ್ಯಯವಾಗಿದ್ದು, ಕೆಲ ಕಾಮಗಾರಿ ಕೈಗೊಳ್ಳಲಾಗಿಲ್ಲ. ಶಾಸಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
5ನೇ ವಾರ್ಡ್‌ನಲ್ಲಿ ಸದಸ್ಯ ನಾಗರತ್ನಮ್ಮ ಪೌರ ಕಾರ್ಮಿಕರ ಕೊರತೆ, ಗಂಗನರಸಿ ರಸ್ತೆಯ ಸಮಸ್ಯೆ, ಜಲಸಿರಿ ಮತ್ತು ಯುಜಿಡಿ ಕಾಮಗಾರಿ ಅಸಮರ್ಪಕವಾಗಿರುವ ಕುರಿತು ಅಧ್ಯಕ್ಷರ ಗಮನ ಸೆಳೆದರು.
6ನೇ ವಾರ್ಡ್‌ನಲ್ಲಿ ಸದಸ್ಯ ಸೈಯದ್ ಅಲೀಂ ಹರ್ಲಾಪುರ್, ತಾಪಂ ಕಚೇರಿ ಹಾಗೂ ಎಂಕೆಇಟಿ ಶಾಲೆ ಸುತ್ತಲಿನ ಚರಂಡಿಗಳ ಸ್ವಚ್ಚತೆ ಮಾಡುವುದು, ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಬೇಕೆಂದರು. 11ನೇ ವಾರ್ಡ್‌ನಲ್ಲಿ ಸದಸ್ಯೆ ಸುಮಿತ್ರ ಕೆ.ಮರಿದೇವ್, ಸ್ವತ್ಛತೆ ಕೊರತೆಯಿಂದಾಗಿ ಸೊಳ್ಳೆಗಳ ಕಾಟ ಅಧಿ ಕವಾಗಿದೆ. ಡೆಂಘೀ ಅಂತಹ ಮಾರಕ ಕಾಯಿಲೆ ಬರುವ ಸಾಧ್ಯತೆ ಇರುವುದರಿಂದ ಕೂಡಲೆ ಕೀಟ ನಿವಾರಕ ದ್ರಾವಣ ಸಿಂಪರಣೆ ಮಾಡಿಸಲು ಹಾಗೂ ಕಸ ಸಂಗ್ರಹದ ವಾಹನ ಪ್ರತಿ ದಿನ ಬರುಂತಾಗಬೇಕೆಂದರು.
ಕಾಂಗ್ರೆಸ್ ಯುವ ಮುಖಂಡ ದಾದಾಪೀರ್ ಭಾನುವಳ್ಳಿ, ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್ ನಾಯ್ಕ ಹಾಗೂ ಸಿಬ್ಬಂದಿ ಹಾಜರಿದ್ದರು.