Advertisement
ಈ ಬಾರಿಯ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿತ್ತು. ಮೈತ್ರಿ ಧರ್ಮದ ಆಧಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಕ್ರಮವಾಗಿ ಮೇಯರ್ ಹಾಗೂ ಉಪಮೇಯರ್ ಸ್ಥಾನ ಅಲಂಕರಿಸಿದವು.
Related Articles
Advertisement
ಪುಷ್ಪಲತಾಗೆ ಒಲಿದ ಅದೃಷ್ಟ: ಪಾಲಿಕೆ ಮೇಯರ್ ಸ್ಥಾನ ಬಹುತೇಕ ಕಾಂಗ್ರೆಸ್‌ಗೆ ಎಂಬುದು ಶುಕ್ರವಾರ ಸಂಜೆ ವೇಳೆಗೆ ಖಚಿತವಾಗಿತ್ತು. ಆದರೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಶಾಂತಕುಮಾರಿ ಹಾಗೂ ಶೋಭಾ ಅವರು ಮೇಯರ್ ಸ್ಥಾನದ ರೇಸ್‌ನಲ್ಲಿದ್ದರು. ಈ ನಡುವೆ ಮೂರನೇ ಆಕಾಂಕ್ಷಿಯಾಗಿ ಪುಷ್ಪಲತಾ ಜಗನ್ನಾಥ್ ಸಹ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.
ಆದರೆ ಇವರಲ್ಲಿ ಯಾರಿಗೆ ಮೇಯರ್ ಪಟ್ಟ ನೀಡಬೇಕೆಂಬ ಜವಾಬ್ದಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಕಟ್ಟಲಾಗಿತ್ತು. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ಮೇಯರ್ ಆಗಿ ಆಯ್ಕೆಯಾದರು.
ನಾಮಪತ್ರ ಸಲ್ಲಿಕೆ: ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ 7ರಿಂದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಹಾಗೂ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನ ಶಫಿ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದರು. ಪುಷ್ಪಲತಾ ಜಗನ್ನಾಥ್‌ಗೆ ಸೂಚಕರಾಗಿ ಅಯೂಬ್ ಖಾನ್, ಅನುಮೋದಕರಾಗಿ ಶೋಭಾ ಸುನೀಲ್ ಸಹಿ ಹಾಕಿದ್ದರು.
ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಜೆಡಿಎಸ್‌ನ ಶಫಿ ಅಹಮ್ಮದ್‌ಗೆ ಸೂಚಕರಾಗಿ ನಮ್ರತಾ ರಮೇಶ್, ಅನುಮೋದಕರಾಗಿ ಎಸ್‌ಬಿಎಂ ಮಂಜು ಸಹಿ ಹಾಕಿದ್ದರು. ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುನಂದಾ ಪಾಲನೇತ್ರಗೆ ಸೂಚಕರಾಗಿ ಬಿ.ವಿ.ಮಂಜುನಾಥ್, ಅನುಮೋದಕರಾಗಿ ಸತೀಶ್ ಸಹಿ ಹಾಕಿದ್ದರು. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಸತೀಶ್ ಅವರಿಗೆ ಸೂಚಕರಾಗಿ ಚಂಪಕಾ, ಅನುಮೋದಕರಾಗಿ ಸುನಂದಾ ಪಾಲನೇತ್ರ ಸಹಿ ಮಾಡಿದ್ದರು.
ರಾಮ್‌ಪ್ರಸಾದ್ ತಟಸ್ಥ: ನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮ.ವಿ.ರಾಮಪ್ರಸಾದ್ ತಟಸ್ಥರಾಗಿ ಉಳಿದರು. ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮ.ವಿ.ರಾಮಪ್ರಸಾದ್ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಯಾವುದೇ ಪಕ್ಷದ ಅಭ್ಯರ್ಥಿಗಳಿಗೂ ಬೆಂಬಲ ನೀಡಲಿಲ್ಲ.
ಈ ಹಿಂದೆ ಬಿಜೆಪಿಯಲ್ಲಿದ್ದ ಮ.ವಿ.ರಾಮಪ್ರಸಾದ್ ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷೇತರ 6ನೇ ವಾರ್ಡಿನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಟೋ ಚಿಹ್ನೆಯಲ್ಲಿ ಗೆದ್ದಿರುವ ಮ.ವಿ.ರಾಮಪ್ರಸಾದ್ ಮೈಸೂರು ಪೇಟ ಧರಿಸಿ, ಆಟೋದಲ್ಲಿ ನಗರ ಪಾಲಿಕೆಗೆ ಆಗಮಿಸಿದರು.
ಬಿಜೆಪಿ ಸಂಸದರ ಗೈರು: ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಸದಸ್ಯರ ಜತೆಗೆ ಸ್ಥಳೀಯ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಬಿಜೆಪಿ ಸಂಸದ ಪ್ರತಾಪಸಿಂಹ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಗೆ ಗೈರಾಗಿದ್ದರು. ಚುನಾವಣೆ ಪ್ರಕ್ರಿಯೆ ಮುಗಿಯುವ ವೇಳೆಗೆ ಪ್ರತಾಪಸಿಂಹ ಪಾಲಿಕೆಗೆ ಆಗಮಿಸಿದರು. ಆದರೆ ಈ ಹೊತ್ತಿಗೆ ಚುನಾವಣಾ ಹಾಜರಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಮತಚಾಲಾಯಿಸಲು ಅವಕಾಶವಾಗಲಿಲ್ಲ.