Advertisement

ವಾರ್ಡ್‌ ಕಳೆದುಕೊಂಡ ಮೇಯರ್‌ ಭಾಗ್ಯ

11:51 AM Jun 24, 2018 | Team Udayavani |

ಮೈಸೂರು: ಮಹಾ ನಗರಪಾಲಿಕೆ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ವಾರ್ಡ್‌ವಾರು ಮೀಸಲಾತಿಯ ಕರಡು ಅಧಿಸೂಚನೆ ನೀಡಿದೆ. ಇದರರಿಂದ ಮೇಯರ್‌ ಭಾಗ್ಯವತಿ ಸೇರಿದಂತೆ ಹಲವು ಘಟಾನುಘಟಿಗಳು ಈಗ ತಾವು ಪ್ರತಿನಿಧಿಸುತ್ತಿರುವ ವಾರ್ಡ್‌ಗಳನ್ನು ಕಳೆದುಕೊಂಡು ಹೊಸ ವಾರ್ಡ್‌ ಹುಡುಕಿಕೊಳ್ಳಬೇಕಾಗಿದೆ.

Advertisement

65 ಸದಸ್ಯ ಬಲದ ಮಹಾ ನಗರಪಾಲಿಕೆಯಲ್ಲಿ ಸದ್ಯ 23 ಮಹಿಳಾ ಸದಸ್ಯರಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲು ಕಲ್ಪಿಸುವ ಸಂಬಂಧ 2016ರಲ್ಲಿ ರಾಜ್ಯಸರ್ಕಾರ ಕಾನೂನು ತಿದ್ದುಪಡಿ ಮಾಡಿದ ಬಳಿಕ ಮೊದಲ ಬಾರಿಗೆ ಮೈಸೂರು ಮಹಾ ನಗರಪಾಲಿಕೆ ಚುನಾವಣೆ ನಡೆಯುತ್ತಿರುವುದರಿಂದ ಪಾಲಿಕೆಯ 65 ವಾರ್ಡ್‌ಗಳಲ್ಲಿ ಸಾಮಾನ್ಯ ಮಹಿಳೆ-16, ಹಿಂದುಳಿದ ವರ್ಗ-ಎ ಮಹಿಳೆ-8, ಪರಿಶಿಷ್ಟ ಜಾತಿ-4, ಪರಿಶಿಷ್ಟ ಪಂಗಡ -1 ಸೇರಿದಂತೆ 31 ಮಹಿಳೆಯರು ಆರಿಸಿ ಬರಲು ಅವಕಾಶವಾಗಲಿದೆ.

ವಾರ್ಡ್‌ ಕಳೆದುಕೊಂಡವರು: ವಾರ್ಡ್‌ವಾರು ಮೀಸಲಾತಿ ಮರು ನಿಗದಿಯಿಂದಾಗಿ ಪರಿಶಿಷ್ಟ ಜಾತಿ ಮಹಿಳಾ ಮೀಸಲು ವಾರ್ಡ್‌ ಆಗಿದ್ದ ಜಯಲಕ್ಷ್ಮೀಪುರಂ ವಾರ್ಡ್‌ ಸಂಖ್ಯೆ 19ರಿಂದ ಆರಿಸಿ ಬಂದಿದ್ದ ಮೇಯರ್‌ ಬಿ.ಭಾಗ್ಯವತಿ, ಈ ಬಾರಿ ತಮ್ಮ ವಾರ್ಡ್‌ ಬಿಸಿಎಂ-ಎ ಗೆ ಮೀಸಲಾಗಿರುವುದರಿಂದ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಉಪ ಮೇಯರ್‌ ಎಂ.ಇಂದಿರಾ ಪ್ರತಿನಿಧಿಸಿದ್ದ ಕ್ಯಾತಮಾರನಹಳ್ಳಿ ವಾರ್ಡ್‌ ಸಂಖ್ಯೆ 30 ಬಿಸಿಎಂ-ಎ ಮಹಿಳೆಗೆ ಮೀಸಲಾಗಿದೆ.

ಮಾಜಿ ಮೇಯರ್‌ ಎನ್‌.ಎಂ.ರಾಜೇಶ್ವರಿ ಸೋಮು ಪ್ರತಿನಿಧಿಸಿದ್ದ ವಾರ್ಡ್‌ ಸಂಖ್ಯೆ 22, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಇದರಿಂದ ಕಳೆದ ಚುನಾವಣೆಯಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ ಆರಿಸಿ ಬಂದಿದ್ದ ರಾಜೇಶ್ವರಿ ಸೋಮು ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದ್ದರೆ, ಕಳೆದ ಬಾರಿ ಇದೇ ವಾರ್ಡ್‌ ಪ್ರತಿನಿಧಿಸಿದ್ದ ರಾಜೇಶ್ವರಿ ಪುಟ್ಟಸ್ವಾಮಿ ಸ್ಪರ್ಧೆಗೆ ಅವಕಾಶವಾದಂತಾಗಿದೆ.

ಇನ್ನು ಮಾಜಿ ಮೇಯರ್‌ಗಳಾದ ಬಿ.ಎಲ್‌.ಭೈರಪ್ಪ ಪ್ರತಿನಿಧಿಸಿದ್ದ ಜೆ.ಪಿ.ನಗರ ವಾರ್ಡ್‌ ಸಂಖ್ಯೆ 63 ಪ.ಜಾ, ಸಂದೇಶ್‌ ಸ್ವಾಮಿ ಪ್ರತಿನಿಧಿಸಿದ್ದ ಗಾಯತ್ರಿಪುರಂ ವಾರ್ಡ್‌ ಸಂಖ್ಯೆ 39 ಪ.ಜಾ ಮಹಿಳೆ, ಅಯೂಬ್‌ ಖಾನ್‌ ಪ್ರತಿನಿಧಿಸಿದ್ದ ಉದಯಗಿರಿ ವಾರ್ಡ್‌ ಸಂಖ್ಯೆ 13 ಬಿಸಿಎಂ-ಬಿ, ಪುರುಷೋತ್ತಮ್‌ ಪ್ರತಿನಿಧಿಸಿದ್ದ ಕೃಷ್ಣಮೂರ್ತಿಪುರಂ ವಾರ್ಡ್‌ ಸಂಖ್ಯೆ 56 ಸಾ.ಮಗೆ ಮೀಸಲಾಗಿರುವುದರಿಂದ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿ, ಬದಲಿ ವಾರ್ಡ್‌ ಹುಡುಕಿಕೊಳ್ಳುವಂತಾಗಿದೆ.

Advertisement

ಮಾಜಿ ಉಪ ಮೇಯರ್‌ಗಳಾದ ರತ್ನಾ ಪ್ರತಿನಿಧಿಸಿದ್ದ ರಾಜೇಂದ್ರ ನಗರ ವಾರ್ಡ್‌ ಸಂಖ್ಯೆ 15 ಎಸ್‌ಸಿ, ಶೈಲೇಂದ್ರ ಪ್ರತಿನಿಧಿಸಿದ್ದ ಅಶೋಕಪುರಂ ವಾರ್ಡ್‌ ಸಂಖ್ಯೆ 60 ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಕೆ.ವಿ.ಮಲ್ಲೇಶ್‌ ಪ್ರತಿನಿಧಿಸಿದ್ದ ಕುವೆಂಪು ನಗರ ವಾರ್ಡ್‌, ಸಿಐಟಿಬಿ ವಾರ್ಡ್‌ ಆಗಿ ಮಾರ್ಪಾಡಾಗಿದೆ. ಬಿಜೆಪಿ ಸದಸ್ಯ ಮಾ.ವಿ.ರಾಮಪ್ರಸಾದ್‌ ಪ್ರತಿನಿಧಿಸಿದ್ದ ಚಾಮುಂಡಿಪುರಂ ವಾರ್ಡ್‌ ಸಂಖ್ಯೆ 55 ಈಗ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್‌ ಉಳಿಸಿಕೊಂಡವರು: ಮಾಜಿ ಮೇಯರ್‌ಗಳಾದ ಎಂ.ಜೆ.ರವಿಕುಮಾರ್‌ ತಾವು ಪ್ರತಿನಿಧಿಸಿದ್ದ ದೇವರಾಜ ಮೊಹಲ್ಲಾ ವಾರ್ಡ್‌ ಸಂಖ್ಯೆ 41, ಎಚ್‌.ಎನ್‌.ಶ್ರೀಕಂಠಯ್ಯ ಪ್ರತಿನಿಧಿಸಿದ್ದ ಕೆ.ಎನ್‌.ಪುರ ಗೌಸಿಯಾ ನಗರ ವಾರ್ಡ್‌ ಸಂಖ್ಯೆ 31, ಟಿ.ಬಿ.ಪುಷ್ಪಲತಾ ಚಿಕ್ಕಣ್ಣ ಪ್ರತಿನಿಧಿಸಿದ್ದ ವಿಜಯನಗರ ವಾರ್ಡ್‌ ಸಂಖ್ಯೆ 20, ಮಾಜಿ ಉಪ ಮೇಯರ್‌ಗಳಾದ ಮಹದೇವಪ್ಪ ಪ್ರತಿನಿಧಿಸಿದ್ದ ವಾರ್ಡ್‌ ಸಂಖ್ಯೆ 2,

ವನಿತಾ ಪ್ರಸನ್ನ ಪ್ರತಿನಿಧಿಸಿದ್ದ ಇಟ್ಟಿಗೆ ಗೂಡು ವಾರ್ಡ್‌ ಸಂಖ್ಯೆ 52, ಜೆಡಿಎಸ್‌ ನಗರ ಅಧ್ಯಕ್ಷರಾಗಿರುವ ಕೆ.ಟಿ.ಚೆಲುವೇಗೌಡ ಪ್ರತಿನಿಧಿಸಿರುವ ಹೆಬ್ಟಾಳು-ಲೋಕನಾಯಕ ನಗರ ವಾರ್ಡ್‌ ಸಂಖ್ಯೆ 4, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ತಾವು ಪ್ರತಿನಿಧಿಸಿರುವ ವಾರ್ಡ್‌ ಉಳಿಸಿಕೊಂಡಿದ್ದು, ಮುಂಬರುವ ಚುನಾವಣೆಗೆ ಅದೇ ವಾರ್ಡ್‌ಗಳಿಂದ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ.

ಮೀಸಲಾತಿ ಮರು ನಿಗದಿಗೆ ಒತ್ತಾಯ: ವಾರ್ಡ್‌ವಾರು ಪ್ರದೇಶ ಹಾಗೂ ಮೀಸಲಾತಿ ಪುನರ್‌ ವಿಂಗಡಣೆಯಿಂದ ಹಲವರು ಅವಕಾಶ ವಂಚಿತರಾಗುವುದರಿಂದ ವಾರ್ಡ್‌ ವ್ಯಾಪ್ತಿ ಮತ್ತು ಮೀಸಲಾತಿ ಮರು ನಿಗದಿಗೆ ಒತ್ತಾಯ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next