Advertisement

ಮೇಯರ್‌ ದಕ್ಷಿಣಕ್ಕೆ-ಉಪಮೇಯರ್‌ ಉತ್ತರಕ್ಕೆ

04:35 PM Feb 05, 2023 | Team Udayavani |

ಬೆಳಗಾವಿ: ಸರಿಸುಮಾರು ಒಂದೂವರೆ ವರ್ಷಗಳಬಳಿಕ ಮಹಾನಗರ ಪಾಲಿಕೆಗೆ ಮೇಯರ್‌ ಹುದ್ದೆ ಭಾಗ್ಯ ಲಭಿಸುತ್ತಿದ್ದು, ಪೂರ್ಣ ಬಹುಮತ ಹೊಂದಿರುವ ಕಮಲ ಪಾಳಯದವರು ಮೇಯರ್‌-ಉಪಮೆಯರ್‌ ಹುದ್ದೆ ಅಲಂಕರಿಸಲಿದ್ದಾರೆ. ದಕ್ಷಿಣ ಕ್ಷೇತ್ರಕ್ಕೆ ಮೇಯರ್‌, ಉತ್ತರ ಕ್ಷೇತ್ರಕ್ಕೆ ಉಪಮೇಯರ್‌ ಸಿಗುವುದು ಗ್ಯಾರಂಟಿಯಾಗಿದೆ.

Advertisement

ಫೆ. 6ರಂದು ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆಯಲಿರುವ ಮೇಯರ್‌-ಉಪಮೇಯರ್‌ ಚುನಾವಣೆಗಾಗಿ ತೀವ್ರ ಕಸರತ್ತು ನಡೆದಿದೆ. ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿದ್ದು, ಅದರಂತೆ 35 ಸದಸ್ಯರು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಬಹುಮತ ಸಾಧಿಸಿದ್ದಾರೆ.

ಹೀಗಾಗಿ ಪಾಲಿಕೆಯಲ್ಲಿ ಕಮಲ ಧ್ವಜ ಹಾರಿದೆ. ಸದಸ್ಯರಾಗಿ ಚುನಾಯಿತರಾದವರು 17 ತಿಂಗಳ ಬಳಿಕ ಪಾಲಿಕೆ ಅಂಗಳದಲ್ಲಿ ಹೆಜ್ಜೆ ಇಡಲಿದ್ದು, ಅಧಿಕೃತವಾಗಿ
ಪಾಲಿಕೆಯಲ್ಲಿ ಕಾರ್ಯಾರಂಭ ಮಾಡಲಿದ್ದಾರೆ. ಪ್ರತಿ ಸಲ ಪಾಲಿಕೆಯು ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಮೊಂಡುತನದಿಂದ ಅನೇಕ ಕಗ್ಗಂಟುಗಳಿಗೆ ಸಾಕ್ಷಿಯಾಗುತ್ತಿತ್ತು. ಭಾಷೆ ಆಧಾರದ ಮೇಲೆ ಗಲಾಟೆಯಾಗಿ ಇಡೀ ರಾಜ್ಯದ ಗಮನ ಸೆಳೆಯುತ್ತಿತ್ತು.ಆದರೆ ಈಗ ಬಿಜೆಪಿಯವರು ಅತಿ ಹೆಚ್ಚಿನ ಸೀಟು ಗೆದ್ದು ಅ ಧಿಕಾರದ ಗದ್ದುಗೆಹಿಡಿಯಲಿದ್ದಾರೆ. ಕಾಂಗ್ರೆಸ್‌ ಪ್ರತಿಪಕ್ಷವಾಗಿದೆ. ಎಂಇಎಸ್‌ ಬೆಂಬಲಿತ ಹಾಗೂ ಎಐಎಂಐ ಬೆಂಬಲಿತರು ತಲಾ ಒಬ್ಬ ಸದಸ್ಯರಿದ್ದಾರೆ. ಬಿಜೆಪಿಯಿಂದ ಈ ಸಲ ಮೇಯರ್‌ ಆಗಲು ತೀವ್ರ ಕಸರತ್ತು ನಡೆದಿದೆ. ಸಾಮಾನ್ಯ ಮಹಿಳೆ ಮೀಸಲು ಇರುವುದರಿಂದ ಅನೇಕ ಮಹಿಳೆಯರು ರೇಸ್‌ನಲ್ಲಿ ಇದ್ದಾರೆ.

ದಕ್ಷಿಣ ಮತ ಕ್ಷೇತ್ರದಲ್ಲಿ 22 ಬಿಜೆಪಿಯವರು ಆಯ್ಕೆ ಆಗಿದ್ದರಿಂದ ಈ ಕ್ಷೇತ್ರದಿಂದಲೇ ಮೇಯರ್‌ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಉತ್ತರ ಮತಕ್ಷೇತ್ರಕ್ಕೆ ಉಪಮೇಯರ್‌ ಸ್ಥಾನ ಸಿಗಲಿದೆ. ಮೇಯರ್‌-ಉಪಮೇಯರ್‌ ಯಾರಾಗಬೇಕೆಂಬ ಕುರಿತು ರವಿವಾರ ಫೆ. 5ರಂದು ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ವರಿಷ್ಠ ನಿರ್ಮಲಕುಮಾರ ಸುರಾನಾ, ಶಾಸಕರಾದ ಅಭಯ ಪಾಟೀಲ, ಅನಿಲ್‌ ಬೆನಕೆ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಂಡು ಮೇಯರ್‌-ಉಪಮೆಯರ್‌ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

-ಬೈರೋಬಾ ಕಾಂಬಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next