ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಕುರಿತು ತೀವ್ರ ಕುತೂಹಲ ಮೂಡಿರುವ ಬೆನ್ನಲ್ಲೇ, ಮೇಯರ್ ಆಯ್ಕೆ ವಿಚಾರದಲ್ಲಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿರುವ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೇಯರ್ ಚುನಾವಣೆಯಲ್ಲಿ ತಲೆ ಹಾಕೋದಿಲ್ಲ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಹೀಗಾಗಿ ಮೇಯರ್ ಆಯ್ಕೆ ಕುರಿತು ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಅವರೊಂದಿಗೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಮೈಸೂರಿನಲ್ಲಿ ಇಬ್ಬರೂ ಸಚಿವರು ಜೆಡಿಎಸ್ ಪಕ್ಷದವರೇ ಆದಕಾರಣ ಕಾಂಗ್ರೆಸ್‌ಗೆ ಒಂದು ವಾಯ್ಸ ಇರಬೇಕು ಎಂದು ಮೇಯರ್ ಸ್ಥಾನ ಕೇಳುತ್ತಿದ್ದೇವೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮೈಸೂರಿನಲ್ಲೂ ಮೈತ್ರಿ ಆಡಳಿತದಲ್ಲಿ ಮೇಯರ್ ಆಗುತ್ತಾರೆ ಎಂದ ಅವರು, ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್‌ಗೆ ಹೋಗಿರುವುದು ನನಗೆ ಗೊತ್ತಿಲ್ಲ. ಅವರ ಪಕ್ಷದ ಸದಸ್ಯರನ್ನು ರಕ್ಷಣೆ ಮಾಡಿಕೊಳ್ಳಲು ರೆಸಾರ್ಟ್‌ಗೆ ಹೋಗಿರಬೇಕು ಎಂದರು.
ಸಾಲಮನ್ನಾ ಮಾಡಲು ಸಮ್ಮಿಶ್ರ ಸರ್ಕಾರ ಸಿದ್ಧವಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ರೈತರ ಸಾಲಮನ್ನಾ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳ ಸಾಲಗಳನ್ನು ಹಂತ ಹಂತವಾಗಿ ಮನ್ನಾ ಮಾಡಲಾಗುವುದು.
ಸಾಲ ಮರು ಪಾವತಿಯಲ್ಲಿ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನು ಸರಿದೂಗಿಸುತ್ತದೆ. ರೈತರು ಆತಂಕ ಪಡುವ ಪ್ರಮೇಯವಿಲ್ಲ. ಈಗಾಗಲೇ ಸಹಕಾರ ಸಂಘಗಳಲ್ಲೂ ಹೊಸ ಸಾಲ ನೀಡಲು ಸರ್ಕಾರ ಆದೇಶ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೂ ಹೊಸ ಸಾಲ ನೀಡಲು ಮುಂದಾಗಬೇಕು ಎಂದು ಹೇಳಿದರು.