Advertisement

ಮೇಯರ್‌ ಗದ್ದುಗೆ ಗೆದ್ದ ವಿದ್ಯಾನಗರಿ ವೀರ

10:10 AM May 29, 2022 | Team Udayavani |

ಧಾರವಾಡ: ಲಕ್ಷ್ಮೀಪುತ್ರರ ಕೈ ತಪ್ಪಿದ ಅಧಿಕಾರದ ಗದ್ದುಗೆ, ಸರಸ್ವತಿಪುರಕ್ಕೆ ಒಲಿದ ಮೇಯರ್‌ ಪಟ್ಟ. ಪಾಲಿಕೆಯಲ್ಲಿನ ಅಲ್ಪ ಶಕ್ತರಿಗೆ ಸಿಕ್ಕಿತು ಅವಕಾಶ, ಐಪಿಎಲ್‌ನಲ್ಲಿ ಆರ್‌ಸಿಬಿಗೆ ಕಪ್ಪು ಸಿಕ್ಕದೇ ಮತ್ತೆ ನಿರಾಸೆಯಾಗಿರಬಹುದು, ಆದರೆ ಧಾರವಾಡಿಗರಿಗೆ ಮಾತ್ರ ತಪ್ಪದೇ ಸಿಕ್ಕಿತು ಮೇಯರ್‌ ಹುದ್ದೆ ಸಂಭ್ರಮ.

Advertisement

ಹೌದು…, 1960ರ ದಶಕದಿಂದ ಈ ವರೆಗೂ ಅಂದರೆ ಅವಳಿನಗರ ಒಟ್ಟಾದಾಗಿನಿಂದ ಸಿಂಹಪಾಲು ಅಧಿಕಾರ ಅನುಭವಿಸಿದ್ದು ಹುಬ್ಬಳ್ಳಿ ಭಾಗದ ಪಾಲಿಕೆ ಸದಸ್ಯರು. ಹೀಗಾಗಿ ಸಹಜವಾಗಿಯೇ ಧಾರವಾಡಿಗರಿಗೆ ಅಸಮಾಧಾನವಿತ್ತು.

ಪ್ರತಿ ಬಾರಿಯೂ ಮೇಯರ್‌ ಚುನಾವಣೆ ಬಂದಾಗ ಧಾರವಾಡಿಗರ ಹೆಸರು ಕೇಳಿ ಬರುತ್ತಿತ್ತು. ಆದರೆ ಅಂತಿಮವಾಗಿ ಹುಬ್ಬಳ್ಳಿಯವರ ಪಾಲಾಗುತ್ತಿತ್ತು. ಕೊನೆಗೂ ಬಿಜೆಪಿ ಮುಖಂಡರು ಧಾರವಾಡಿಗರನ್ನು ನಿರಾಸೆ ಮಾಡದೇ ಅಧಿಕಾರ ನೀಡಿದ್ದಾರೆ.

ಸದ್ಯ 82 ವಾರ್ಡ್‌ಗಳ ಪೈಕಿ ಧಾರವಾಡದಲ್ಲಿ 26 ವಾರ್ಡ್‌ಗಳಿದ್ದು, ಉಳಿದ 56 ವಾರ್ಡ್‌ಗಳ ಸಂಖ್ಯೆ ಹುಬ್ಬಳ್ಳಿ ವ್ಯಾಪ್ತಿಯನ್ನು ಆವರಿಸಿಕೊಂಡಿವೆ. ಪಕ್ಷಗಳ ಬಲಾಬಲದ ವಿಚಾರದಲ್ಲೂ ಬಿಜೆಪಿಯನ್ನು ಹೆಚ್ಚು ಕೈ ಹಿಡಿದಿದ್ದು ಹುಬ್ಬಳ್ಳಿಯೇ ಆಗಿದೆ. ಆದರೂ ಧಾರವಾಡ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದ್ದು, ಅದರ ಪ್ರತಿಫಲವೇ ಮೇಯರ್‌ಗಿರಿ ಎನ್ನಲಾಗುತ್ತಿದೆ.

ಮೂಗಿಗೆ ತುಪ್ಪ: ಮಹಾನಗರ ಪಾಲಿಕೆ ಚುನಾವಣೆ ಮುಗಿದು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡ ಬೆನ್ನಲ್ಲೇ ಯಾರು ಮೇಯರ್‌ ಆಗಬೇಕು ಎನ್ನುವ ಪ್ರಶ್ನೆ ಬಂದಾಗಲೇ ಧಾರವಾಡಕ್ಕೆ ಸ್ಥಾನ ಸಿಕ್ಕಬೇಕು ಎನ್ನುವ ಕೂಗು ಶುರುವಾಯಿತು.

Advertisement

ಅದರ ಬೆನ್ನಲ್ಲಿಯೇ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಗಬೇಕು ಎನ್ನುವ ಬಲವಾದ ಕೂಗು ಆರಂಭಗೊಂಡು, ಕರ್ನಾಟಕ ವಿದ್ಯಾವರ್ಧಕ ಸಂಘ ಇದರ ನೇತೃತ್ವ ವಹಿಸಿಕೊಂಡು ಸತತ ಧರಣಿ ಸತ್ಯಾಗ್ರಹ ನಡೆಸಿತು.

ಮಹಾನಗರ ಪಾಲಿಕೆ ಆಡಳಿತವೆಲ್ಲವೂ ಹುಬ್ಬಳ್ಳಿ ಕೇಂದ್ರೀಕೃತವಾಗಿದೆ. ಧಾರವಾಡದಲ್ಲಿ ವಾರಕ್ಕೆ ಎರಡು ದಿನ ಸಭೆ, ಅಧಿಕಾರ ನಡೆಯಬೇಕು ಎನ್ನುವ ತೀರ್ಮಾನವಿದ್ದರೂ, ಅಧಿಕಾರಿಗಳು ಅಷ್ಟಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕೊಟ್ಟುಬಿಡಿ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಮುಕ್ತಿಕೊಡಿ ಎನ್ನುವ ಗಟ್ಟಿ ಮಾತುಗಳು ಹೋರಾಟಗಾರರ ಬಾಯಲ್ಲಿ ಕೇಳಿ ಬಂದವು. ಈ ಬಂಡಾಯವನ್ನು ತಾತ್ಕಾಲಿಕವಾಗಿ ಶಮನ ಮಾಡಲು ಬಿಜೆಪಿ ಮೇಯರ್‌ಗಿರಿಗೆ ಒಲವು ತೋರಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮೇಯರ್‌ಗಿರಿ ಪ್ರತಿಫಲ: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಆಡಳಿತಾಧಿಕಾರ ವಶಕ್ಕೆ ಪಡೆಯಲು ಈರೇಶ ಅಂಚಟಗೇರಿ ಮುಂದಾಳತ್ವವಿತ್ತು. ಅದಕ್ಕೆ ಸಚಿವ ಜೋಶಿ ಅವರ ತಂತ್ರಗಾರಿಕೆ ಬೆಂಬಲವೂ ಇತ್ತು. ಅದನ್ನು ಕೈ ಹಿಡಿತದಿಂದ ತಪ್ಪಿಸಿ ಕಮಲ ಪಡೆ ಮಡಿಲಿಗೆ ಹಾಕಲು ಮೇಟಿಯಾಗಿ ನಿಂತಿದ್ದು ಅಂಚಟಗೇರಿ. ಧಾರವಾಡ ನಗರದ ಹೊರವಲಯಗಳಲ್ಲಿ ಲಿಂಗಾಯತ ಸಮುದಾಯದ ಆಗು ಹೋಗುಗಳ ಬಗ್ಗೆ ಕೈ ಪಡೆ ಸದಾ ನಿಗಾ ಇಟ್ಟಿತ್ತು.

ಅಲ್ಲಿ ಕಮಲ ಅರಳಿಸಲು ಸದ್ದಿಲ್ಲದೇ ನುಸುಳಿದ್ದು ಅಂಚಟಗೇರಿ. ಕಮಲಾಪುರ, ಮಾಳಾಪುರ, ಹೆಬ್ಬಳ್ಳಿ ಅಗಸಿ, ನವಲೂರು, ಕೆಲಗೇರಿ, ತಪೋವನ ಸೇರಿದಂತೆ ಸುತ್ತಲಿನ ವಾರ್ಡ್‌ಗಳಲ್ಲಿ ಅಂಚಟಗೇರಿ ಬಿಜೆಪಿಯ ಎಲ್ಲಾ ಮುಖಂಡರ ಜೊತೆ ಒಂದಿಲ್ಲ ಒಂದು ಕಾರಣಕ್ಕೆ ಹಾಸುಹೊಕ್ಕಾಗಿ ಹೋಗಿದ್ದಾರೆ. ಇದಕ್ಕೆ ಬೆಂಬಲವಾಗಿ ನಿಂತಿದ್ದು ಸಚಿವ ಪ್ರಹ್ಲಾದ ಜೋಶಿ ಅವರು. ಪಕ್ಷ ಮತ್ತು ಜೋಶಿ ಬೆಂಬಲಿಗರ ಪಡೆಯನ್ನು ಸದೃಢಗೊಳಿಸಲು ಅಂಚಟಗೇರಿ ಹಾಕಿದ ಶ್ರಮಕ್ಕೆ ಮೇಯರ್‌ಗಿರಿ ಪ್ರತಿಫಲವಾಗಿ ಲಭಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಚಿವ ಜೋಶಿ ಬಲಗೈ ಬಂಟ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಟ್ಟಾ ಬೆಂಬಲಿಗ ಹಾಗೂ ಅವರ ಬಲಗೈ ಭಂಟ ಎಂದೇ ಖ್ಯಾತಿ ಪಡೆದಿರುವ ಈರೇಶ ಅಂಚಟಗೇರಿ ಅವರನ್ನು ಮೇಯರ್‌ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇರವಾಗಿ ಅಖಾಡಕ್ಕೆ ಇಳಿದಿದ್ದು ಸತ್ಯ. ಹುಬ್ಬಳ್ಳಿ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ರಾಜಣ್ಣ ಕೊರವಿ ಬಗ್ಗೆ ಮಾಜಿ ಸಿಎಂ ಜಗದೀಶ ಶೆಟ್ಟರ ಒಲವು ತೋರಿದ್ದರೆ, ವಿಜಯಾನಂದ ಶೆಟ್ಟಿ ಅವರಿಗೆ ಪಟ್ಟಕಟ್ಟಲು ಶಾಸಕ ಅರವಿಂದ ಬೆಲ್ಲದ ಪ್ರಯತ್ನಿಸಿದ್ದು ಸತ್ಯ. ಆದರೆ ಅಂತಿಮವಾಗಿ ಎಲ್ಲಾ ಮಗ್ಗಲುಗಳಿಂದ ಅಳೆದು ತೂಗಿ ನೋಡಿದ ಬಿಜೆಪಿ ಮುಖಂಡರು ಸಚಿವ ಪ್ರಹ್ಲಾದ ಜೋಶಿ ಪಟ್ಟದ ಶಿಷ್ಯನಿಗೆ ಪಟ್ಟಕಟ್ಟಲು ಒಲವು ತೋರಿದರು ಎನ್ನಲಾಗಿದೆ. ಈ ಬಾರಿಯ ಮೇಯರ್‌ ಆಯ್ಕೆ ನಿಜಕ್ಕೂ ಬಹಳ ಹಿಂದೆಯೇ ಆಗಿತ್ತು ಎನ್ನುವ ಮಾತುಗಳೂ ಕೇಳಿಬರುತ್ತಿವೆ!

ಧಾರವಾಡದಿಂದ ಬೆರಳೆಣಿಕೆ ಮೇಯರ್‌ಗಳು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಚನೆಯಾದಾಗಿನಿಂದಲೂ ಹೆಚ್ಚು ಬಾರಿ ಹುಬ್ಬಳ್ಳಿಗರೇ ಮೇಯರ್‌ ಪಟ್ಟ ಅಲಂಕರಿಸಿದ್ದರು. ಬಿಜೆಪಿಯಿಂದ ಪೂರ್ಣಾ ಪಾಟೀಲ, ಶಿವು ಹಿರೇಮಠ ಹಾಗೂ 37ನೇ ಮೇಯರ್‌ ಆಗಿ ಮಂಜುಳಾ ಅಕ್ಕೂರ ಅವರಿಗೆ ಅವಕಾಶ ಸಿಕ್ಕಿತ್ತು. ಬಿಜೆಪಿ ಆಡಳಿತದ ಅವಧಿಯಲ್ಲಿಯೇ ಹುಬ್ಬಳ್ಳಿಯಿಂದ ಡಾ| ಪಾಂಡುರಂಗ ಪಾಟೀಲ ಸೇರಿ ಏಳು ಜನರಿಗೆ ಅವಕಾಶ ಲಭಿಸಿತ್ತು. ಕಾಂಗ್ರೆಸ್‌ ಅವಧಿಯಲ್ಲೂ ಅಷ್ಟೇ ಧಾರವಾಡಕ್ಕೆ ಸಿಕ್ಕಿದ್ದು ಎರಡು ಮೂರು ಬಾರಿ ಮಾತ್ರ, ಉಳಿದಂತೆ ಆಗಲೂ ಹುಬ್ಬಳ್ಳಿ ಭಾಗದ ಸದಸ್ಯರೇ ಹೆಚ್ಚು ಅಧಿಕಾರ ನಡೆಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳೇ ಮಹಾನಗರ ಪಾಲಿಕೆ ಆಡಳಿತ ನಡೆಸುತ್ತ ಬಂದಿದ್ದು, ಜನರಿಗೆ ಒಂದಿಷ್ಟು ಕಷ್ಟವಾಗಿತ್ತು. ಇದೀಗ ನಾನು ಮೇಯರ್‌ ಆಗಿದ್ದು, ಹುಬ್ಬಳ್ಳಿ ಜೊತೆ ಜೊತೆಗೆ ಧಾರವಾಡ ನಗರಕ್ಕೆ ವಿಶೇಷ ಆದ್ಯತೆ ನೀಡಿ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುತ್ತೇನೆ. ಈರೇಶ ಅಂಚಟಗೇರಿ, ನೂತನ ಮೇಯರ್‌, ಹು-ಧಾ ಮಹಾನಗರ ಪಾಲಿಕೆ

ಬರೀ ಮೇಯರ್‌ ಸ್ಥಾನದಿಂದ ಧಾರವಾಡದ ಸಮಗ್ರ ಅಭಿವೃದ್ಧಿ ಅಸಾಧ್ಯ. ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಮುಂದುವರಿಸುತ್ತೇವೆ. ಈ ಸಂಬಂಧ ಜೂ. 1ಕ್ಕೆ ಸಭೆ ಕರೆದಿದ್ದು, ಸಾವಿರಾರು ಕೋಟಿ ರೂ. ಅಭಿವೃದ್ಧಿ ಹಣದಿಂದ ಹುಬ್ಬಳ್ಳಿ-ಧಾರವಾಡ ಎರಡೂ ವಂಚಿತವಾಗುತ್ತಿವೆ. ಹೀಗಾಗಿ ಪ್ರತ್ಯೇಕವಾಗುವುದೇ ಸೂಕ್ತ.   ವೆಂಕಟೇಶ ಮಾಚಕನೂರು, ಧಾರವಾಡ ಮಹಾನಗರ ಪಾಲಿಕೆ ಹೋರಾಟಗಾರ                 

 –ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next