ಬೆಂಗಳೂರು: ಕಸ ವಿಲೇವಾರಿ, ರಸ್ತೆ ದುರಸ್ತಿ ಹಾಗೂ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸದ ಅಧಿಕಾರಿಗಳ ಮೇಲೆ ಮೇಯರ್ ಎಂ. ಗೌತಮ್‌ಕುಮಾರ್ ಶುಕ್ರವಾರ ತರಾಟೆಗೆ ತೆಗೆದುಕೊಂಡರು.
ದ್ವಿಚಕ್ರ ವಾಹನದ ಮೂಲಕ ಚಿಕ್ಕಪೇಟೆ ವಾರ್ಡ್ ವ್ಯಾಪ್ತಿಯ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಅಭಿನಯ್ ಚಿತ್ರಮಂದಿರದಿಂದ ಶುಕ್ರವಾರ ತಪಾಸಣೆ ಪ್ರಾರಂಭಿಸಿದ ಮೇಯರ್, ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ, ನಗರ್ತಪೇಟೆ, ರಾಮನಪೇಟೆ, ಸುಲ್ತಾನ್‌ಪೇಟೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದರು.
ಬಿ.ವಿ.ಕೆ ಅಯ್ಯಂಗರ್ ರಸ್ತೆಯ ಅಭಿನಯ್ ಚಿತ್ರಮಂದಿರದಿಂದ ಚಿಕ್ಕಪೇಟೆ ವಾರ್ಡ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ, ರಸ್ತೆ ದುರಸ್ತಿ ಕಾಮಗಾರಿ, ಚರಂಡಿ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ವೆಚ್ಚದ ಪಟ್ಟಿ ಸಿದ್ಧಪಡಿಸುವಂತೆ ವಲಯ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಸೂಚನೆ ನೀಡಿದರು. ಇನ್ನು ಅವೆನ್ಯೂ ರಸ್ತೆ ಪಾದಚಾರಿ ಮಾರ್ಗವನ್ನು ಸರಿಪಡಿಸುವಂತೆ ಹಾಗೂ ನಗರ್ತಪೇಟೆ ರಸ್ತೆಯ ಬದಿಯಲ್ಲಿ ಕಟ್ಟಡ ತ್ಯಾಜ್ಯ ತೆರವುಗೊಳಿಸುವಂತೆ ಹಾಗೂ ಸುಲ್ತಾನ್‌ಪೇಟೆಯ ರಸ್ತೆಯಲ್ಲಿನ ಸ್ಯಾನೀಟರಿ ಪೈಪ್‌ಗ್ಳನ್ನು ಸರಿಪಡಿಸುವಂತೆ ನಿರ್ದೇಶಿಸಿದರು.
ನಮ್ಮ ವಾರ್ಡಲ್ಲಿ ಚಪ್ಪಲಿ ಹಾರ ಹಾಕುತ್ತಿದ್ದರು! : ಶುಕ್ರವಾರ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ ಮೇಯರ್ ಬನಪ್ಪಪಾರ್ಕ್‌ನ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಕಸ ವಿಲೇವಾರಿಯಾಗದೆ ಇರುವುದನ್ನು ಕಂಡು ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. “ನಮ್ಮ ವಾರ್ಡ್‌ನಲ್ಲಿ ಈ ರೀತಿ ಕೆಲಸ ಮಾಡಿದ್ದರೆ ಜನ ನಿಮಗೆ ಚಪ್ಪಲಿ ಹಾರ ಹಾಕುತ್ತಿದ್ದರು. ಇಲ್ಲಿನ ಜನ ಸುಮ್ಮನಿದ್ದಾರೆ. ಈ ಲೋಪಗಳನ್ನು ಕೂಡಲೇ ಸರಿಪಡಿಸಿ’ ಎಂದು ತಾಕೀತು ಮಾಡಿದ್ದಾರೆ.