Advertisement
ಬಹುತೇಕ ಸರಕಾರಿ ಕಚೇರಿಗಳು, ಪಾಲಿಕೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಮಣ್ಣಗುಡ್ಡೆ ಸಮೀಪದ ಮೇಯರ್ ಬಂಗಲೆ, ಪಾಲಿಕೆ ಆರೋಗ್ಯಾಧಿಕಾರಿ ಹಾಗೂ ಯೋಜನಾಧಿಕಾರಿಗಳ ಬಂಗಲೆಗಳು ನಿರುಪಯುಕ್ತವಾಗಿರುವುದು ಗಂಭೀರ ವಿಚಾರ. ಅಧಿಕಾರಿಗಳಿಗೆ ಸರಕಾರದಿಂದ ಹಂಚಿಕೆಯಾಗಿರುವ ಈ ಮೂರು ಅಧಿಕೃತ ನಿವಾಸಗಳನ್ನು ಬಳಸದೆ, ಸ್ವಂತ ಮನೆಗಳಲ್ಲಿ ವಾಸವಾಗಿದ್ದಾರೆ. ಪಾಲಿಕೆ ಆಯುಕ್ತರು ಮಾತ್ರ ಅಲ್ಲಿ ವಾಸವಿದ್ದಾರೆ.
ಮೇಯರ್‌ಗಳು ಮಂಗಳೂರಿಗರೇ ಆಗಿರುವುದರಿಂದ ಅವರಿಗೆಂದು ಮೀಸಲಿರಿಸಿದ ಸರಕಾರಿ ಬಂಗಲೆ ಬಳಕೆ ಆಗುತ್ತಿಲ್ಲ. ಪಾಳು ಬಿದ್ದಿದ್ದ ಬಂಗಲೆಯನ್ನು 2015ರಲ್ಲಿ ಮೇಯರ್ ಆಗಿದ್ದ ಮಹಾಬಲ ಮಾರ್ಲ ಅವರು 4.5 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ್ದರು. ಆ ಬಳಿಕ ಯಾರೂ ಈ ಬಂಗಲೆಯಲ್ಲಿ ವಾಸ್ತವ್ಯ ಹೂಡಿಲ್ಲ. ಬಂಗಲೆ ಆವರಣಕ್ಕೆ ಇಂಟರ್‌ಲಾಕ್ ಅಳವಡಿಸಿ, ಹೊರಗಡೆ ಪುಟ್ಟ ಹೂದೋಟವನ್ನೂ ನಿರ್ಮಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಹಾಲಿ ಮೇಯರ್ ಕವಿತಾ ಸನಿಲ್ ಕೂಡ ಲಕ್ಷಾಂತರ ರೂ. ಖರ್ಚು ಮಾಡಿ ಬಂಗಲೆಯನ್ನು ನವೀಕರಣಗೊಳಿಸಿದ್ದರು. ಬಳಸದ ಬಂಗಲೆಗೆ ದುರಸ್ತಿ ಹೆಸರಲ್ಲಿ ಹಣ ವ್ಯಯಿಸುವುದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ.
Related Articles
ಈ ಮೂರು ಕಟ್ಟಡಗಳಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್‌ಗಳನ್ನು ಪಾವತಿಸಲಾಗುತ್ತಿದೆ. ಕೆಲವು ತಿಂಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇವುಗಳ ಸಂಪರ್ಕ ಕಡಿತಗೊಳಿಸಿರುವ ಮೆಸ್ಕಾಂ, ನೋಟಿಸ್ ಜಾರಿ ಮಾಡಿದೆ. ಜನ ವಾಸವಿಲ್ಲದ ಕಾರಣ ನೋಟಿಸ್ ಅನ್ನು ಮೇಯರ್ ನಿವಾಸದ ಗೋಡೆಗೆ ಅಂಟಿಸಲಾಗಿದೆ. ಮೆಸ್ಕಾಂ ಅಧಿಕಾರಿಗಳು ಹೇಳುವ ಪ್ರಕಾರ, ಮೇಯರ್ ಬಂಗ್ಲೆಯು 2,000 ರೂ. ವಿದ್ಯುತ್ ಶುಲ್ಕ ಬಾಕಿಯಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ನಿವಾಸಿಗಳ ಹೆಸರುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಮೇಯರ್ ಘೋಷಿಸಿದ್ದರು. ಈಗ ಅವರ ಅಧಿಕೃತ ನಿವಾಸದ ವಿದ್ಯುತ್ ಶುಲ್ಕ ಬಾಕಿಯಿರಿಸಿರುವುದು ಸಮಾಜಕ್ಕೆ ಎಂಥ ಸಂದೇಶ ನೀಡುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
Advertisement
ಹೂದೋಟವೂ ಕಣ್ಮರೆಬಂಗಲೆ ಆವರಣದೊಳಗಿದ್ದ ಹೂದೋಟವೂ ನಿರ್ವಹಣೆಯಿಲ್ಲದೆ ಕಣ್ಮರೆಯಾಗಿದೆ. ಅಲ್ಲಿನ ಭದ್ರತೆಗೆ ಅಥವಾ ನಿರ್ವಹಣೆಗೆ ಸಿಬಂದಿ ಕಂಡು ಬರುತ್ತಿಲ್ಲ. ಮೇಯರ್ ಬಂಗಲೆ ಕಾಂಪೌಂಡ್ ಹೊರಭಾಗದಲ್ಲಿ ಬಿಯರ್ ಬಾಟಲಿಗಳು ರಾಶಿ ಬಿದ್ದಿದ್ದರೆ, ಒಳಭಾಗದಲ್ಲಿ ಪೊದೆ ಬೆಳೆದಿದೆ. ಗೇಟ್ ತೆರೆದ ಸ್ಥಿತಿಯಲ್ಲಿದೆ. ಬಂಗಲೆ ಒಳಗಡೆ ಲಕ್ಷಾಂತರ ರೂ. ಮೌಲ್ಯದ ಸೋಫಾಗಳು, ಡೈನಿಂಗ್ ಟೇಬಲ್, ಎ.ಸಿ., ಫೈಬರ್ ಚೇರ್ ಗಳು, ವಾಟರ್ ಪ್ಯೂರಿಫೈರ್, ಫ್ಯಾನ್, ಕಪಾಟು, ಬೆಡ್‌ನಂಥ ಗೃಹೋಪಯೋಗಿ ವಸ್ತುಗಳಿದ್ದು, ಅವುಗಳ ಸುರಕ್ಷೆಯತ್ತಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಪೊದೆ ಮಧ್ಯೆ ಆರೋಗ್ಯಾಧಿಕಾರಿ ಬಂಗಲೆ
ಪಾಲಿಕೆಯು ನಗರಸಭೆ ಆಗಿದ್ದಾಗ ಆಗಿನ ಅಧಿಕಾರಿಗಳಿಗಾಗಿ ನಿರ್ಮಿಸಲ್ಪಟ್ಟ ಬಂಗಲೆಯನ್ನು ಬಳಿಕ ಮನಪಾ ಆರೋಗ್ಯಾಧಿಕಾರಿಗಳ ಬಂಗಲೆ ಎಂದು ಪರಿಗಣಿಸಲಾಯಿತು. ಅದರಲ್ಲಿ ಕೆಲವೇ ಕೆಲವು ಅಧಿಕಾರಿಗಳಷ್ಟೇ ತಂಗಿದ್ದರು. ಪ್ರಸ್ತುತ ಅಲ್ಲಿ ಯಾರೂ ವಾಸವಿಲ್ಲದೆ ಪಾಳು ಬಿದ್ದಿದೆ. ಮನೆ ಆವರಣ ಪೊದೆಗಳಿಂದ ತುಂಬಿದ್ದು, ಒಳಗಡೆ ಪ್ರವೇಶಿಸುವುದೂ ಅಸಾಧ್ಯ. ಇಲ್ಲೂ ಬೆಲೆಬಾಳುವ ವಸ್ತುಗಳಿವೆ. ಯೋಜನಾಧಿಕಾರಿಗಳ ಬಂಗಲೆ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪಾಳು ಬಿದ್ದಿರುವ ಈ ಮೂರು ಬಂಗಲೆಗೆ ಹೊಂದಿರುವ ಮತ್ತೂಂದು ಬಂಗಲೆಗಳಲ್ಲಿ ಮನಪಾ ಆಯುಕ್ತರ ಕಚೇರಿಯಿದ್ದು, ಆಯುಕ್ತರು ಕೂಡ ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಂದು ಬಂಗಲೆಯ ಮಾಹಿತಿಯಿಲ್ಲ
ನಾನು ವಾಸವಿರುವ ಮನೆಯ ಪಕ್ಕದಲ್ಲಿರುವ ಎರಡು ಬಂಗಲೆಗಳು ಇರುವುದು ಗೊತ್ತಿದೆ. ಮೇಯರ್ ಗೆ ನಗರದಲ್ಲಿ ಪ್ರತ್ಯೇಕ ಮನೆ ಇರುವುದರಿಂದ ಅಲ್ಲಿ ವಾಸ ಮಾಡುತ್ತಿಲ್ಲ. ಹಿಂದಿನ ಯೋಜನಾಧಿಕಾರಿಗಳ ಮನೆ ಈಗ ಉಪ ಆಯುಕ್ತರ ಮನೆಯಾಗಿದೆ. ಪ್ರಸ್ತುತ ಆ ಹುದ್ದೆ ಖಾಲಿ ಇರುವುದರಿಂದ ಆ ಮನೆಯೂ ಖಾಲಿ ಇದೆ. ಇನ್ನೊಂದು ಬಂಗಲೆಯ ಬಗ್ಗೆ ನನಗೆ ತಿಳಿದಿಲ್ಲ.
– ಅಬ್ದುಲ್ ನಝೀರ್,
ಮನಪಾ ಆಯುಕ್ತ ಪ್ರಜ್ಞಾ ಶೆಟ್ಟಿ