Advertisement

ಮೇಕೆದಾಟು: ಸಂಸದರ ಪ್ರತಿಭಟನೆಗೆ ಡೇಟ್‌ ಫಿಕ್ಸ್‌

06:00 AM Dec 21, 2018 | Team Udayavani |

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಮೇಕೆದಾಟು ವಿಚಾರ ಪ್ರಸ್ತಾಪಿಸಿ ಗದ್ದಲವೆಬ್ಬಿಸುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳಿಗೆ ಪ್ರತಿಯಾಗಿ ಕರ್ನಾಟಕದ ಸಂಸದರೂ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

Advertisement

ಇದೇ 27ರಂದು ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಯ ಮುಂದೆ ಕರ್ನಾಟಕದ ಸಂಸದರೆಲ್ಲರೂ ಪಕ್ಷಭೇದ ಮರೆತು ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. 

ಪ್ರತಿಭಟನೆಯ ಬಳಿಕ ಸಂಸದರೆಲ್ಲರೂ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿಯವರನ್ನು ಭೇಟಿಯಾಗಿ, ಕಳಸಾ ಬಂಡೂರಿ ಯೋಜನೆಯ ಬಗ್ಗೆ ಹಾಗೂ ಅದು ರಾಜ್ಯಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ವಿವರಣೆ ನೀಡಲಿದ್ದಾರೆ.

ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವರಾದ ಅನಂತ್‌ ಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಮಾತನಾಡಿದ ಸಚಿವ ಡಿಕೆಶಿ, ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಯೋಜನೆಯ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದೆ. ನಾವಿದನ್ನು ರಾಜಕೀಯ ವಿಚಾರವನ್ನಾಗಿ ಮಾಡಲು ಇಷ್ಟಪಡುವುದಿಲ್ಲ. ಸುಖಾಸುಮ್ಮನೆ ಜಗಳವಾಡುವ ಬದಲು ಪರಸ್ಪರ ಕುಳಿತು ಚರ್ಚಿಸೋಣ ಎಂದು ಕರ್ನಾಟಕದ ಸಂಸದರ ಪರವಾಗಿ ತಮಿಳುನಾಡಿನ ಸಂಸದರು ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಅಲ್ಲದೆ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಯೋಜನೆ ಹೊಂದಿದೆಯೇ ಹೊರತು, ನೀರಾವರಿ ಉದ್ದೇಶವಲ್ಲ. ಬೇಕಿದ್ದರೆ ತ.ನಾಡಿನ ಸಂಸದರು ಇಲ್ಲಿಗೆ ಬಂದು ಯೋಜನೆಯನ್ನು ಪರಿಶೀಲಿಸಬಹುದು ಎಂದೂ ಡಿಕೆಶಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next