Advertisement
ಮಾರ್ಚ 23ರಂದು ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದ್ದು, ಸ್ಪಷ್ಟ ಬಹುಮತ ಯಾರಿಗೂ ಇರದ ಹಿನ್ನೆಲೆಯಲ್ಲಿ ಆಡಳಿತ ಪಡೆಯಲು ಹಗ್ಗ ಜಗ್ಗಾಟ ನಡೆದಿದ್ದರಿಂದ ಯಾರ ಕೈ ಮೇಲುಗೈ ಆಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
Related Articles
Advertisement
ಸಮ ಸಂಖ್ಯಾಬಲ ಮೂಡಿದ ಕುತೂಹಲ: ಬಿಜೆಪಿಯ 22 ಸದಸ್ಯರು, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು, ಸಂಸದರಾದ ಡಾ. ಉಮೇಶ ಜಾಧವ್, ಲೇಹರಸಿಂಗ್
ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ್ , ಸುನೀಲ್ ವಲ್ಲಾಪುರೆ, ಲಕ್ಷ್ಮಣ ಸವದಿ, ಮುನಿರಾಜಗೌಡ, ಭಾರತಿಶೆಟ್ಟಿ, ರಘುನಾಥ ಮಲ್ಕಾಪುರೆ, ಸಾಯಬಣ್ಣ ತಳವಾರ ಸೇರಿ ಸಂಖ್ಯಾಬಲ 34 ಆಗುತ್ತದೆ.
ಅದೇ ರೀತಿ ಕಾಂಗ್ರೆಸ್ ದಿಂದ 27 ಪಾಲಿಕೆ ಸದಸ್ಯರು, ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಶಾಸಕಿ ಖನೀಜಾ ಫಾತೀಮಾ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್ ಸೇರಿದರೆ 30 ಆಗುತ್ತದೆ. ಹೀಗಾಗಿ ಜೆಡಿಎಸ್ ಬೆಂಬಲ ನೀಡಿದಲ್ಲಿ ಸಂಖ್ಯಾ ಬಲ ಸಮಾನಾಗುತ್ತದೆ. ಹೀಗಾಗಿ ಟಾಸ್ ವೇ ಫಲಿತಾಂಶ ನಿರ್ಧರಿಸುತ್ತದೆ.
ಜೆಡಿಎಸ್ ಕಿಂಗ ಮೇಕರ್: ನಾಲ್ಕು ಸದಸ್ಯರನ್ನು ಹೊಂದಿರುವ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಿದೆ. ಹೀಗಾಗಿ ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಖರ್ಗೆ ಬರುವರೇ?: ಪಾಲಿಕೆಯಯಲ್ಲಿ ಅಧಿಕಾರಕ್ಕೇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಹೀಗಾಗಿ ಇಬ್ಬರ ನಡುವೆ ಜಂಗೀ ಕುಸ್ತಿ ಏರ್ಪಟ್ಟಿದೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂಬುದು ಎರಡು ಪಕ್ಷಗಳು ಹವಣಿಸುತ್ತಿರುವುದರಿಂದ ಪ್ರಮುಖವಾಗಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಈ ಚುನಾವಣೆಗೆ ಏಲ್ಲಿಲ್ಲದ ಮಹತ್ವ ಬಂದಿದೆ.
ಟಾಸ್ ಇಲ್ಲವೇ ಕೂದಲೆಳೆ ಅಂತರದ ಮತದಿಂದ ಗೆಲುವು ಸಾಧಿಸುವುದರಿಂದ ರಾಜ್ಯಸಭಾ ಸದಸ್ಯರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದೇ ಯಕ್ಷ ಪ್ರಶ್ನೆ ಯಾಗಿದೆ. ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಈ ಎರಡರಲ್ಲಿ ಯಾರೇ ಅಧಿಕಾರದ ಗದ್ದುಗೆ ಹಿಡಿದಿದ್ದರೂ ರಾಷ್ಟ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯಾಗಿರುವುದರಿಂದ ಕಲಬುರಗಿ ಮೇಯರ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ. ಹೀಗಾಗಿ ಡಾ. ಮಲ್ಲಿಕಾರ್ಜುನ ಖರ್ಗೆ ಆಗಮನ ಮೇಲೆ ಎಲ್ಲರ ಗಮನ ಸೆಳೆದಿದೆ.
ಪಕ್ಷದ ಸಂಘಟನೆಯಲ್ಲಿ ತೊಡಗಿಸಿದ್ದರಿಂದ ಬರುವುದು ಕುತೂಹಲ ಮೂಡಿಸಿದೆ ಅದಲ್ಲದೇ ಮಾರ್ಚ 25 ರಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಕಾಂಗ್ರೆಸ್ ಸೇರ್ಪಡೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವುದರಿಂದ ಮಾರ್ಚ 23ರ ಪಾಲಿಕೆ ಚುನಾವಣೆಗೆ ಬರುತ್ತಾರೆಯೇ? ಒಂದು ಯಕ್ಷ ಪ್ರಶ್ನೆ ಯಾಗಿ ಪರಿಣಮಿಸಿದೆ.
ಬಿಜೆಪಿ ನಾಯಕರ ದಂಡು: ಚುನಾವಣೆಯಲ್ಲಿ ತಂತ್ರಗಳನ್ನು ಹೆಣೆಯಲು ಬಿಜೆಪಿ ನಾಯಕರ ದಂಡು ಯುಗಾದಿ ಹಬ್ಬದಂದು ಆಗಮಿಸಲಿದೆ. ಇನ್ನೂ ಕಾಂಗ್ರೆಸ್ ಉನ್ನತ ಮಟ್ಟದಲ್ಲಿ ಮಾತುಗಾರಿಕೆ ನಡೆಸುತ್ತಿದೆ. ಒಟ್ಟಾರೆ ಯುಗಾದಿ ಹಬ್ಬ ಬಿಜೆಪಿಗೋ ಇಲ್ಲವೇ ಕಾಂಗ್ರೆಸ್ ಗೋ ಎನ್ನುವಂತಾಗಿರುವುದು ಸ್ಪಷ್ಟ.