ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಸಂಸ್ಥೆಯು ಉದ್ಯಮಿ ಎಲಾನ್ ಮಸ್ಕ್ ಪಾಲಾಗುತ್ತಿದ್ದಂತೆಯೇ, ಮೈಕ್ರೋ-ಬ್ಲಾಗಿಂಗ್ ತಾಣದ ಮೂಲಕ ಆದಾಯ ಗಳಿಸುವ ಲೆಕ್ಕಾಚಾರವನ್ನು ಅವರು ಹಾಕಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದು ನಿಜ ಎಂಬುದು ಈಗ ಸಾಬೀತಾಗಿದೆ. ಸ್ವತಃ ಮಸ್ಕ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.
ಅದರಂತೆ, ಇನ್ನು ಮುಂದೆ ಟ್ವಿಟರ್‌ನ ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ನಿಗದಿತ ಶುಲ್ಕವನ್ನು ವಿಧಿಸಲು ಮಸ್ಕ್ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಅಲ್ಪ ಮೊತ್ತವನ್ನು ಶುಲ್ಕದ ರೀತಿಯಲ್ಲಿ ವಿಧಿಸಲಾಗುತ್ತದೆ ಎಂದಿದ್ದಾರೆ. ಆದರೆ, ಜನಸಾಮಾನ್ಯರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ, ಅವರು ಈಗಿನಂತೆಯೇ ಟ್ವಿಟರ್ ಬಳಕೆಯನ್ನು ಮುಂದುವರಿಸಬಹುದು ಎಂದು ಮಸ್ಕ್ ಹೇಳಿದ್ದಾರೆ. ಜತೆಗೆ, ಸಂಸ್ಥೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.
ಇದಲ್ಲದೆ, ಆ್ಯಪ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲೂ ಮಸ್ಕ್ ನಿರ್ಧರಿಸಿದ್ದಾರಂತೆ. ಟ್ವಿಟರ್‌ನಲ್ಲಿನ ಕೆಲವು ಸ್ಪ್ಯಾಮ್ ಮತ್ತು ಸ್ಕ್ಯಾಮ್‌ಗಳನ್ನು ಕಿತ್ತುಹಾಕಬೇಕು. ಯಾವುದೇ ಒಂದು ವಿಚಾರವು ವಾಸ್ತವದಲ್ಲಿ ಜನಾಭಿಪ್ರಾಯವೋ ಅಥವಾ ಒಂದು ಲಕ್ಷ ನಕಲಿ ಖಾತೆ ಇಟ್ಟುಕೊಂಡವನು ಮಾಡುತ್ತಿರುವ ಟ್ವೀಟ್‌ಗಳ್ಳೋ ಎಂಬುದನ್ನು ನಿಮಗೆ ಈಗ ಹೇಳಲು ಸಾಧ್ಯವೇ? ಆ ನಿಟ್ಟಿನಲ್ಲಿ ಕೆಲ ಬದಲಾವಣೆ ತರಲು ಚಿಂತನೆ ನಡೆಸಿದ್ದೇನೆ ಎಂದೂ ಮಸ್ಕ್ ಹೇಳಿದ್ದಾರೆ.
ಈ ನಡುವೆ, ತಾವು ಟ್ವಿಟರ್ ಖರೀದಿಸಿದ್ದರಿಂದ ಅಸಮಾಧಾನಗೊಂಡು ಸಾಮೂಹಿಕ ರಾಜೀನಾಮೆಗೆ ಉದ್ಯೋಗಿಗಳು ನಿರ್ಧರಿಸಿದ್ದರೆ, ಅವರಿಗೆ ಕಂಪನಿ ತೊರೆಯಲು ಮುಕ್ತ ಅವಕಾಶವಿದೆ ಎಂದೂ ಮಸ್ಕ್ ಘೋಷಿಸಿದ್ದಾರೆ.
ಇದನ್ನೂ ಓದಿ : ರೌಡಿಶೀಟರ್ ಇಲ್ಯಾಸ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ