ಹೊಸದಿಲ್ಲಿ : ಚುನಾವಣಾ ಆಯೋಗ ತನ್ನ ಮೇಲೆ ಹೇರಿರುವ 48 ತಾಸುಗಳ ಚುನಾವಣಾ ಪ್ರಚಾರ ನಿಷೇಧವನ್ನು ಪ್ರಶ್ನಿಸಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ತಿರಸ್ಕರಿಸಿದೆ.
“ನೀವು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು; ನಾವು ಈಗಲೇ ವಿಚಾರಣೆ ಕೈಗೊಳ್ಳಲಾರೆವು; ಈಗಲೇ ನಾವಿದಕ್ಕೆ ಸ್ಪಷ್ಟೀಕರಣ ನೀಡಬೇಕಾದದ್ದಿಲ್ಲ’ ಎಂದು ಸುಪ್ರೀಂ ಹೇಳಿದೆ.
ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಮಾಯಾವತಿ ಅವರನ್ನು ಚುನಾವಣಾ ಆಯೋಗ 48 ತಾಸು ಕಾಲ ಯಾವುದೇ ರೀತಿಯ ಚುನಾವಣಾ ಪ್ರಚಾರ ಕೈಗೊಳ್ಳದಂತೆ ನೀಷೇಧಿಸಿತ್ತು. ಉತ್ತರ ಪ್ರದೇಶದ ದೇವಬಂದ್ ನಲ್ಲಿ ಮಾಯಾವತಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು.
ದೇವಬಂದ್ ರಾಲಿಯಲ್ಲಿ ಮಾಯಾವತಿ ಅವರು ಮುಸ್ಲಿಂ ಸಮುದಾಯದವರು ಕಾಂಗ್ರೆಸ್‌ಗೆ ಓಟ್ ಹಾಕಬಾರದು ಮತ್ತು ಉತ್ತರ ಪ್ರದೇಶದಲ್ಲಿನ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಬೆನ್ನಿಗೆ ದೃಢವಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದರು.
ಇದನ್ನು ಅನುಸರಿಸಿ ಚುನಾವಣಾ ಆಯೋಗ ಮಾಯಾವತಿ ಅವರು ಮುಂದಿನ 48 ತಾಸುಗಳ ಕಾಲ ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ, ರಾಲಿ, ರೋಡ್ ಶೋ, ಸಂದರ್ಶನ, ಮಾಧ್ಯಮಗಳಿಗೆ ಸಾರ್ವಜನಿಕ ಹೇಳಿಕೆ ನೀಡುವುದು ಇತ್ಯಾದಿ ಯಾವುದನ್ನೂ ಮಾಡಕೂಡದು ಎಂದು ನಿಷೇಧ ಹೇರಿತ್ತು.