ನವದೆಹಲಿ: ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲದ ಬಗ್ಗೆ ಪುನರ್ ಪರಿಶೀಲಿಸಬೇಕಾಗುತ್ತದೆ ಎಂದು ಬಹುಜನ್ ಸಮಾಜ್ ಪಕ್ಷ(ಬಿಎಸ್ಪಿ)ದ ಅಧ್ಯಕ್ಷೆ ಮಾಯಾವತಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದಕ್ಕೆ ಕಾರಣವಾಗಿದ್ದು, ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಸಮಾಜವಾದಿ ಮತ್ತು ಬಿಎಸ್ಪಿ ಪಕ್ಷದ ಮೈತ್ರಿ ಅಭ್ಯರ್ಥಿಯನ್ನಾಗಿ ಲೋಕೇಂದ್ರ ಸಿಂಗ್ ರಾಜ್ ಪುತ್ ಅವರನ್ನು ಕಣಕ್ಕಿಳಿಸಿತ್ತು. ಏತನ್ಮಧ್ಯೆ ಸೋಮವಾರ ಲೋಕೇಂದ್ರ ಬಿಎಸ್ಪಿ ಪಕ್ಷ ತೊರೆದು, ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದು!
ಲೋಕೇಂದ್ರ ಸಿಂಗ್ ಹೂಮಾಲೆಯನ್ನು ಧರಿಸಿ, ಜ್ಯೋತಿರಾದಿತ್ಯ ಸಿಂಧ್ಯಾ ಅವರ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಕ್ಲಿಪ್ಸ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಯುವ ಅಭ್ಯರ್ಥಿ ಲೋಕೇಂದ್ರ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ. ಅಲ್ಲದೇ ತಮ್ಮ ಬೆಂಬಲವನ್ನು ತನಗೆ ನೀಡಿದ್ದು, ನಾವು ಅವರನ್ನು ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ ಎಂದು ಸಿಂಧ್ಯಾ ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಮಾಯಾವತಿ, ಮಧ್ಯಪ್ರದೇಶದಲ್ಲಿನ ಅಲ್ಪ ಬಹುಮತದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲದ ಬಗ್ಗೆ ಪುನರ್ ಪರಿಶೀಲಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.