ಲಕ್ನೋ : ಹಾಲಿ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳು ಸೋಲಬಹುದೆಂಬ ಭೀತಿಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಈಗ ರಾಜಕೀಯ ಖಿನ್ನತೆ ಕಾಡುತ್ತಿದೆ; ಹಾಗಾಗಿಯೇ ಆಕೆ ಸಹನೆ ಮತ್ತು ಸಂತುಲನೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.
ಸೋಲಿನ ಭೀತಿಯಿಂದಾಗಿ ಮಾಯಾವತಿ ಅವರಲ್ಲಿ ಮಾನಸಿಕ ದೌರ್ಬಲ್ಯ ಕಂಡುಬರುತ್ತಿದೆ ಮತ್ತು ಆಕೆಯ ಸ್ಮರಣಶಕ್ತಿ ಕುಂದುತ್ತಿದೆ; ಹಾಗಾಗಿಯೇ ಆಕೆಗೆ ಈಗ ಪಾಲಿಟಿಕಲ್ ಟಾನಿಕ್ ಬೇಕಾಗಿದೆ ಎಂದು ಶರ್ಮಾ ಹೇಳಿದರು.
ಉತ್ತರಪ್ರದೇಶದಲ್ಲಿ ಅಖೀಲೇಶ್ ಯಾದವ್ ಜತೆಗಿನ ಬಿಎಸ್‌ಪಿ-ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಮಾಯಾವತಿ ಅವರು ಬಿಜೆಪಿ ವಿರುದ್ಧ ಟ್ವಿಟರ್ ಮತ್ತು ರಾಜಕೀಯ ಭಾಷಣಗಳಲ್ಲಿ ಬೆಂಕಿ ಉಗುಳುತ್ತಿದ್ದಾರೆ ಎಂದು ಶರ್ಮಾ ಆರೋಪಿಸಿದರು.
ಮಾಯಾವತಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಸರ್ವಾಧಿಕಾರಿ ಎಂದು ಟೀಕಿಸಿದ್ದಾರಲ್ಲದೆ ಅದು ತನ್ನ ಹಿರಿಯ ನಾಯಕರನ್ನು ಮತ್ತು ವಿಪಕ್ಷ ನಾಯಕರನ್ನು ಹೆದರಿಸುತ್ತಿದೆ ಎಂದು ದೂರಿದ್ದರು.