ಲಕ್ನೋ: ದೇಶದ ರಾಷ್ಟ್ರಪತಿಯಾಗುವ ಕನಸು ಕಾಣುತ್ತಿದ್ದಾರೆಂಬ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಆರೋಪಕ್ಕೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ (ಏಪ್ರಿಲ್ 28) ತಿರುಗೇಟು ನೀಡಿದ್ದು, ತನಗೆ ರಾಷ್ಟ್ರಪತಿಯಾಗಬೇಕೆಂಬ ಆಸೆಯೇ ಇಲ್ಲ, ಆದರೆ ಭವಿಷ್ಯದಲ್ಲಿ ದೇಶದ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಲೌಡ್ ಸ್ಪೀಕರ್ ವಿವಾದ: ಮಹಾರಾಷ್ಟ್ರದಲ್ಲಿ ಯೋಗಿಯಂತವರಿಲ್ಲ, ಭೋಗಿಗಳಿದ್ದಾರೆ: ರಾಜ್ ಠಾಕ್ರೆ
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ತನ್ನ ಮತಗಳನ್ನು ಬಿಜೆಪಿಗೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ಮಾಯಾವತಿ ಅವರು ಬಿಜೆಪಿ ತಮ್ಮನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಿದೆ ಎಂದು ಕನಸು ಕಾಣುತ್ತಿದ್ದಾರೆ ಎಂಬುದಾಗಿ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ರಾಷ್ಟ್ರಪತಿಯಾಗಬೇಕೆಂದು ಯಾವತ್ತೂ ಕನಸು ಕಂಡಿಲ್ಲ. ನನಗೆ ರಾಜಕಾರಣದಲ್ಲಿ ಎಲ್ಲವೂ ಗೊತ್ತಿದೆ. ನಾನು ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಮುಂದೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿದ್ದೇನೆಯೇ ಹೊರತು, ರಾಷ್ಟ್ರಪತಿಯಾಗಬೇಕೆಂಬ ಇಚ್ಛೆ ಹೊಂದಿಲ್ಲ ಎಂದು ಮಾಯಾವತಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಮಾತ್ರ ನನ್ನನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿ, ತಾವು ಉತ್ತರಪ್ರದೇಶದಲ್ಲಿ ಆಡಳಿತ ನಡೆಸುವ ಕನಸು ಕಾಣುತ್ತಿದ್ದಾರೆ ಎಂದು ಮಾಯಾವತಿ ತಿರುಗೇಟು ನೀಡಿದ್ದಾರೆ.