Advertisement

ಮಡಿವಾಳರಿಗೆ ಪರಿಶಿಷ್ಟ  ಮೀಸಲಾತಿ ಸಿಗಲಿ

12:53 PM Jul 31, 2017 | |

ಚಿತ್ರದುರ್ಗ: ಶೋಷಿತ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟರ ಮೀಸಲಾತಿ ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.

Advertisement

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಚಿದೇವ ಮಠದಿಂದ ಶಿಕ್ಷಣ ದತ್ತಿ ನಿಧಿ  ಪಡೆದ ಫಲಾನುಭವಿ ಕುಟುಂಬಗಳಿಗೆ ಗುರುತಿನಪತ್ರ
ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮಡಿವಾಳ ಸಮಾಜ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಲಿಷ್ಠ ನಾಯಕತ್ವ ಇಲ್ಲ. ಜನಸಂಖ್ಯೆಯಲ್ಲಿ ಬಲಾಡ್ಯವೂ ಅಲ್ಲ. ಸಮುದಾಯದವರ ಮೇಲೆ ಬಲಿಷ್ಠರು ದೌರ್ಜನ್ಯ, ದಬ್ಟಾಳಿಕೆ ನಡೆಸುತ್ತಿದ್ದಾರೆ. ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಶೇ. 99ರಷ್ಟು ಜನರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂದಿಗೂ ಈ ಸಮುದಾಯ ಬಟ್ಟೆ ತೊಳೆಯುವ ಕುಲಕಸುಬನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿದೆ ಎಂದರು.

ನಮ್ಮ ಮಠ ಒಂದೊಂದೇ ಮೆಟ್ಟಿಲು ಹತ್ತಿಕೊಂಡು ಬರುತ್ತಿದೆ. ಮಠ ಬೆಳೆದಿದೆ ಎಂದರೆ ಅದಕ್ಕೆ ಮುರುಘಾ ಶರಣರ ಆಶೀರ್ವಾದ, ನಿಮ್ಮೆಲ್ಲರ ಪರಿಶ್ರಮವೇ ಕಾರಣ. ನಮ್ಮ ಮುಂದೆ ಬಹುದೊಡ್ಡ ಸವಾಲಿದೆ. ಶ್ರೀಮಠದ ಬೆಳವಣಿಗೆ ಜತೆಯಲ್ಲಿ ಸಮುದಾಯ ತನ್ನದೆ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಾಜವನ್ನು ಬಲಿಷ್ಠ ಮತ್ತು ನಿಸ್ವಾರ್ಥವಾಗಿ ಕಟ್ಟುವಂತಹ ಜನರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು. ಮಹಾರಾಷ್ಟ್ರದ ಸಾಂಗ್ಲಿಯ ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಶಿವಾನಂದ ಕಲಕೇರಿ ಮಾತನಾಡಿ, ಸಮಾಜದಲ್ಲಿ ಇಂದಿಗೂ ವೃತ್ತಿ ಕೇಂದ್ರಿತ ಮತ್ತು ಧರ್ಮ ಕೇಂದ್ರಿತ ವ್ಯವಸ್ಥೆಯಿದೆ. ಮುರುಘಾ ಶರಣರು ಸಮಾಜದ ಗುರುಗಳಿಗೆ ದಿಧೀಕ್ಷೆ ನೀಡಿ ಧರ್ಮದ ವಿಕೇಂದ್ರೀಕರಣ ಮಾಡಿ ಸ್ವಾವಲಂಬಿಯಾಗಿ ಬದುಕುವಂತಹ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೂಪ್‌ ನಂಜುಂಡಸ್ವಾಮಿ ಮಾತನಾಡಿ, ನಾವು ಹಳ್ಳಿಗಾಡಿನಿಂದ ಬಂದಿದ್ದೇವೆ. ನಮಗೆ ಇಂಗ್ಲಿಷ್‌ ಬರುವುದಿಲ್ಲ, ಕನ್ನಡ ಮಾಧ್ಯಮದ ವಿದ್ಯಾರ್ಥಿ ಎನ್ನುವ ಕೀಳರಿಮೆ ಬೇಡ. ಇಂತಹ ಕೀಳರಿಮೆಯಿಂದ ಐಎಎಸ್‌, ಐಪಿಎಸ್‌ನಂತಹ ಪರೀಕ್ಷೆ ತೆಗೆದುಕೊಳ್ಳದೆ ಅವಕಾಶ ವಂಚಿತರಾಗಬೇಡಿ. ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿಯೇ ಸಾಧನೆ
ಮಾಡಿರುವುದಾಗಿ ತಿಳಿಸಿದರು. 

ಮುಖಂಡ ರಾಜು ಕಲ್ಲೂರ್‌ ಮಾತನಾಡಿ, ಮಡಿವಾಳ ಸಮುದಾಯ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಸಮುದಾಯದ ಯಾರೊಬ್ಬರೂ ಶಾಸಕರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Advertisement

ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಟಿ. ರಮೇಶ್‌, ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ನಿರ್ದೇಶಕ ಕೂನಬೇವು ಶ್ರೀನಿವಾಸಮೂರ್ತಿ, ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿರ್ದೇಶಕ ಬಿ. ಹನುಮಂತರಾಯ, ರಂಗಸ್ವಾಮಿ ಇದ್ದರು.

ಮಡಿವಾಳ ಸಮಾಜಕ್ಕಿದೆ ಮುರುಘಾ ಶರಣರ ಆಶೀರ್ವಾದ 
ಮಡಿವಾಳ ಸಮಾಜಕ್ಕೆ ಮುರುಘಾ ಶರಣರು ಎಲ್ಲ ರೀತಿಯ ಆಶೀರ್ವಾದ ಮಾಡಿದ್ದಾರೆ. ಮುರುಘಾ ಶರಣರಲ್ಲಿ ಬಸವಣ್ಣ, ಮಾಚಿದೇವರನ್ನು ಏಕಕಾಲದಲ್ಲಿ ನೋಡುವಂತಾಗಿದೆ. ಅವರು ಶೋಷಿತ, ಹಿಂದುಳಿದ ಸಮುದಾಯಗಳನ್ನು ಮೇಲೆತ್ತಲು  ದೀಕ್ಷೆ ನೀಡಿ ಸಹಕರಿಸಿದರು.

ಇಂತಹ ಕಾರ್ಯದಿಂದ ಶರಣರು ಸಂತಸ ಪಡುವುದಕ್ಕಿಂತ ನೋವು ಅನುಭವಿಸಿದ್ದೇ ಹೆಚ್ಚು. ಎದೆಯೊಡ್ಡಿ ನಿಂತು ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡಿದ ಧೈರ್ಯಶಾಲಿಗಳಾಗಿದ್ದಾರೆ ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. ಮಠಾಧೀಶರು ರಾಜಕಾರಣಿಗಳ ಕೈಗೊಂಬೆಯಲ್ಲ: ಶಿಮುಶ
ಚಿತ್ರದುರ್ಗ: ಧಾರ್ಮಿಕ ಗುರುಪೀಠಗಳ ಸ್ವಾಮೀಜಿಗಳು ಆಸ್ತಿ, ಇತರೆ ಸೌಲಭ್ಯಕ್ಕಾಗಿ ರಾಜಕಾರಣಿಗಳ ಬಳಿ ಕೈಯೊಡ್ಡಿ ನಿಲ್ಲುವ ಸಂಸ್ಕೃತಿ ಕೊನೆಯಾಗಬೇಕು. ಯಾವುದೇ ಕಾವಿಧಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.  ರಾಜಕಾರಣಿಗಳು ಕೊಡುವ ಆಸ್ತಿ, ಭೂಮಿ, ಹಣ ಇತ್ಯಾದಿಗಳನ್ನು ಪಡೆದು ಅವರ ಮನೆಗಳ ಮುಂದೆ ಕೈಕಟ್ಟಿ ನಿಂತುಕೊಳ್ಳುವುದನ್ನ ನಾವು ನೋಡುತ್ತಿದ್ದೇವೆ. ಆದರೆ ಬಸವ ಮಾಚಿದೇವ ಸ್ವಾಮೀಜಿ ಅವರದು ವಿಭಿನ್ನ ವ್ಯಕ್ತಿತ್ವ. ಅವರು ಯಾವುದೇ ಕಾರಣಕ್ಕೂ ರಾಜಕಾರಣಿಗಳ ಕೈಗೊಂಬೆ ಆಗುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ ಎಂದರು.

ಬಸವ ಮಾಚಿದೇವ ಸ್ವಾಮೀಜಿಯವರಿಗೆ ಬಸವಣ್ಣ ಹಾಗೂ ಮಾಚಿದೇವರಿಗಿದ್ದ ಬದ್ಧತೆ ಇದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಶರಣ ಪರಂಪರೆ ಜತೆಗೆ ಹೋಗುವುದು ಆದ್ಯ ಕರ್ತವ್ಯ ಎಂದು ಭಾವಿಸಿ, ಶಿಸ್ತುಬದ್ಧವಾಗಿ, ಪ್ರಬುದ್ಧವಾಗಿ ನಮ್ಮ ಜತೆ ಇದ್ದಾರೆ. ಬಸವ ಮಾಚಿದೇವ ಸ್ವಾಮೀಜಿಯವರು ಸ್ವಾಭಿಮಾನಿ. ಸ್ವಾಭಿಮಾನದ ಕಿಚ್ಚನ್ನು ಹಿಡಿದುಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ತಲೆ ಎತ್ತಿ ನಡೆಯುತ್ತಿದೆ. ಮಾಚಿದೇವರು ಹಾಕಿಕೊಟ್ಟ ತತ್ವ, ಸಿದ್ಧಾಂತಗಳನ್ನು ಪಾಲಿಸಿಕೊಂಡು ಸ್ವಾಭಿಮಾನ ಪೂರ್ಣ ಬದುಕು ನಡೆಸುತ್ತಿದ್ದಾರೆ. ಮಾಚಿದೇವರು ಹೊಲಸು ಬಟ್ಟೆಯನ್ನಷ್ಟೇ ಶುದ್ಧಗೊಳಿಸಲಿಲ್ಲ. ಆತ್ಮಶುದ್ಧಿಯನ್ನೂ ಮಾಡಿದರು. ಪರಮ ದಕ್ಷತೆ ಮತ್ತು ಆಪ್ತತೆ ತೋರಿದಂತ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಮಡಿವಾಳ ಸಮಾಜದಲ್ಲಿ ಐಎಎಸ್‌ ಮಾಡಿದವರು, ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಯಲ್ಲಿರುವವರಿದ್ದಾರೆ. ವಿದ್ಯಾವಂತ ಸಮಾಜ ನಿಧಾನವಾಗಿ ಅನಾವರಣಗೊಳ್ಳುತ್ತಿದೆ. ಐಎಎಸ್‌, ಐಪಿಎಸ್‌, ಎಂಎಲ್‌ಎ, ಎಂಪಿಗಳಾಗುವ ಮೂಲಕ ಸಮಾಜ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next