Advertisement

ಭಾಷಣಕ್ಕೆ ಅಡ್ಡಿ: ರಾಜ್ಯಸಭೆಗೆ ಮಾಯಾವತಿ ರಾಜೀನಾಮೆ

03:20 AM Jul 19, 2017 | Harsha Rao |

ಹೊಸದಿಲ್ಲಿ: ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಭಾಷಣ ನಿಲ್ಲಿಸಲು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಎಸ್‌ಪಿ ನಾಯಕಿ ಮಾಯಾವತಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

Advertisement

ಆದರೆ ತ್ಯಾಗಪತ್ರ ಕ್ರಮಬದ್ಧವಾಗಿಲ್ಲ ದ್ದರಿಂದ ಅದು ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರ ಜತೆಗೆ ಲೋಕ
ಸಭೆಯಲ್ಲಿ ಗೋರಕ್ಷಕರೆಂಬ ಗುಂಪಿನಿಂದ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಇತರ ವಿಚಾರಗಳ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಹೀಗಾಗಿ ಕಲಾಪ ನಡೆಸಲು ಅಸಾಧ್ಯವಾದ್ದರಿಂದ ಸದನವನ್ನು ಬುಧ ವಾರಕ್ಕೆ ಮುಂದೂಡಲಾಗಿದೆ.

ರಾಜೀನಾಮೆ: ಹಾಲಿ ಅವಧಿಯ ಸಂಸತ್‌ನ ಮುಂಗಾರು ಅಧಿವೇಶನದ 2ನೇ ದಿನವಾಗಿರುವ ಮಂಗಳವಾರ ರಾಜ್ಯಸಭೆಯಲ್ಲಿ ಉತ್ತರ ಪ್ರದೇಶದ ಸಹರಣ್‌ಪುರ ಸಹಿತ ದೇಶದ ವಿವಿಧ ಸ್ಥಳಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಹಿಂಸಾಕೃತ್ಯ ಗಳನ್ನು ಖಂಡಿಸಿ ಪೂರ್ವ ಸಿದ್ಧತೆ ಇಲ್ಲದೆ ಬಿಎಸ್‌ಪಿ ನಾಯಕಿ ಮಾಯಾವತಿ ಮಾತನಾಡುತ್ತಿದ್ದರು. ಸಭಾಪತಿ ಹಮೀದ್‌ ಅನ್ಸಾರಿ ಭಾಷಣ ಚುಟುಕಾಗಿ ಮುಗಿಸುವಂತೆ ಅವರಿಗೆ ಸೂಚನೆ ನೀಡಿದರು. ಇದರಿಂದ ಕ್ರುದ್ಧರಾದ ಮಾಯಾವತಿ ಆಕ್ರೋಶ ವ್ಯಕ್ತ ಪಡಿಸಿದರು. ಸದನದಿಂದ ಹೊರಬಂದ ಅವರು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. 

ಸಂಜೆ 5.30ಕ್ಕೆ ಸಭಾಪತಿ ಹಮೀದ್‌ ಅನ್ಸಾರಿ ಅವರನ್ನು ಭೇಟಿಯಾದ ಮಾಯಾವತಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಸಭೆ ಮುಂದೂಡಿಕೆ: ಕೆಳಮನೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗೋರಕ್ಷಕರೆಂಬ ತಂಡದಿಂದ ಹಲ್ಲೆ, ಥಳಿತ ನಡೆಯುತ್ತಿರುವುದು ಹಾಗೂ ಇನ್ನಿತರ ವಿಚಾರಗಳಿಗಾಗಿ ಕಾಂಗ್ರೆಸ್‌, ಆರ್‌ಜೆಡಿ, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿ ಗದ್ದಲ ಎಬ್ಬಿಸಿದರು. ಸರಕಾರದ ವಿರುದ್ಧ ಘೋಷಣಾ ಫ‌ಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಆತ್ಮಹತ್ಯೆ ವಿಚಾರಕ್ಕೂ ಅವರು ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಗದ್ದಲದಲ್ಲಿ ಯಾವುದೇ ನಿಯಂತ್ರಣ ಉಂಟಾಗದೇ ಇದ್ದುದರಿಂದ ಸ್ಪೀಕರ್‌ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ರಾಜೀನಾಮೆ ಪತ್ರ ಹೇಗಿರಬೇಕು?
– ಲೋಕಸಭೆ, ರಾಜ್ಯಸಭೆಯ ಸದಸ್ಯರಾಗಿರುವವರು ರಾಜೀನಾಮೆ ಪತ್ರದಲ್ಲಿ ಬೇಷರತ್ತಾಗಿ ಬರೆದಿರಬೇಕು. ಅಂದರೆ “ನಾನು ರಾಜ್ಯಸಭೆ ಅಥವಾ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದೇ ಬರೆದಿರಬೇಕು.

Advertisement

– ಅದರಲ್ಲಿ ಯಾವುದೇ ವಿವರಣೆ ಅಥವಾ ಸ್ಪಷ್ಟನೆಗೆ ಅವಕಾಶ ಇಲ್ಲ.

ಹಿಂದೆ ಏನಾಗಿತ್ತು?
– ಮಾಜಿ ಸಂಸದ ನವಜೋತ್‌ ಸಿಂಗ್‌ ಸಿಧು 2004ರಲ್ಲಿ ರಾಜೀನಾಮೆ ನೀಡಿದ್ದಾಗ ಅದು ಕ್ರಮಬದ್ಧವಾಗಿರಲಿಲ್ಲ
– ರಾಜೀನಾಮೆಯಲ್ಲಿ  ವಿವರಣೆ ಇದ್ದಿದ್ದರಿಂದ ಸ್ವೀಕರಿಸಲು ಅನರ್ಹ ಎಂದು ಲೋಕಸಭೆ ಸ್ಪೀಕರ್‌ ಕಾರ್ಯಾಲಯ ತಿರಸ್ಕರಿಸಿತ್ತು.
– ಹೊಸತಾಗಿ ಒಂದು ಸಾಲಿನ ರಾಜೀನಾಮೆಯನ್ನು ಬರೆಯಿಸಿ ಅದನ್ನು ಸ್ವೀಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next