Advertisement

ಕೈ ಕೊಟ್ಟ ಮಾಯಾವತಿ: ಸ್ವತಂತ್ರ ಸ್ಪರ್ಧೆಗೆ ಬಿಎಸ್‌ಪಿ ನಿರ್ಧಾರ

09:55 AM Oct 04, 2018 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಕನಸಿನ “ಮಹಾ ಘಟಬಂಧನ್‌’ಗೆ ಬಿಎಸ್‌ಪಿ ನಾಯಕಿ ಮಾಯಾ ವತಿ ದೊಡ್ಡ ಶಾಕ್‌ ನೀಡಿದ್ದಾರೆ. ಛತ್ತೀಸ್‌ಗಢ ಬಳಿಕ ಈಗ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯ ಗಳಲ್ಲೂ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Advertisement

ಈ ಮೂರು ರಾಜ್ಯಗಳಲ್ಲಿ ವರ್ಷಾಂತ್ಯವೇ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಬಿಜೆಪಿ ಅಧಿಕಾರದಲ್ಲಿದೆ. 2019ಕ್ಕೆ ಪೂರ್ವಭಾವಿಯಾಗಿ ಈ ರಾಜ್ಯಗಳಲ್ಲೂ ಮಹಾಘಟಬಂಧನ್‌ ಏರ್ಪಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿತ್ತು. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಏರ್ಪಡದ ಹಿನ್ನೆಲೆಯಲ್ಲಿ ಮಾಯಾವತಿ ಮಹಾ ಘಟಬಂಧನ್‌ನಿಂದ ಹೊರಗೆ ಕಾಲಿಟ್ಟಿದ್ದಾರೆ. ಮಾಯಾವತಿ ಅವರ ಈ ನಿರ್ಧಾರದಿಂದಾಗಿ ಹಿಂದಿ ಭಾಷಿಕರೇ ಹೆಚ್ಚಾಗಿರುವ ಈ ಮೂರು ರಾಜ್ಯ ಗಳಲ್ಲೂ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ನೇತೃತ್ವದ ಪ್ರಾದೇಶಿಕ ಪಕ್ಷದ ಜತೆ ಮೈತ್ರಿ ಘೋಷಣೆ ಮಾಡಿಕೊಂಡಿದ್ದಾರೆ. ಈಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಬಿಟ್ಟು ಪ್ರಾದೇಶಿಕ ಪಕ್ಷಗಳ ಜತೆ ಹೋಗಲು ಅವರು ತೀರ್ಮಾನಿಸಿದ್ದಾರೆ. ಆದರೆ 2019ರ ಲೋಕಸಭೆ ಚುನಾವಣೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದೂ ಮಾಯಾ ತಿಳಿಸಿದ್ದಾರೆ.

ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಆಸಕ್ತಿ ಹೊಂದಿ ದ್ದಾರೆ. ಆದರೆ ಉಳಿದ ನಾಯಕರಿಗೆ ಬೇಕಿಲ್ಲ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿನ ಅವರ ನಡವಳಿಕೆ ನೋಡಿಯೇ ಇದು ಗೊತ್ತಾಗಿದೆ. ಕಾಂಗ್ರೆಸ್‌ ಪಕ್ಷ ಬಿಎಸ್‌ಪಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದೆ. ಹೀಗಾಗಿ ನಾವು ಬೇರೆ ದಾರಿ ನೋಡಿಕೊಂಡಿದ್ದೇವೆ ಎಂದು ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್‌ನವರ ವರ್ತನೆಯಿಂದಾಗಿಯೇ ನಾವು ಹಿಂದೆ ಕರ್ನಾಟಕದಲ್ಲಿ ಜೆಡಿಎಸ್‌ ಮತ್ತು ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಇಲ್ಲೂ ಹಾಗೆಯೇ ಆಗಿದೆ. ಕಾಂಗ್ರೆಸ್‌ಗೆ ತಾನು ಗೆಲ್ಲುವುದಕ್ಕಿಂತ ಪ್ರಾದೇಶಿಕ ಪಕ್ಷಗಳನ್ನು ನಾಶಪಡಿಸುವ ಗುರಿ ಇದೆ. ಅಲ್ಲದೆ ಬಿಜೆಪಿಯ ಹಾದಿಯನ್ನೂ ಸುಲಭ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸೀಟು ಹಂಚಿಕೆಯಲ್ಲಿ  ಭಿನ್ನಮತ
ಈ ಎರಡೂ ರಾಜ್ಯಗಳಲ್ಲಿನ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ಒಡಕು ಕಾಣಿಸಿಕೊಂಡಿದೆ. ಮಧ್ಯಪ್ರದೇಶದಲ್ಲಿ 50 ಹಾಗೂ ರಾಜಸ್ಥಾನದಲ್ಲೂ ಹೆಚ್ಚು ಕಡಿಮೆ ಇಷ್ಟೇ ಸೀಟುಗಳನ್ನು ಮಾಯಾವತಿ ಕೇಳಿದ್ದರು. ಆದರೆ ಇದಕ್ಕೆ ಸ್ಥಳೀಯ ನಾಯಕರು ಒಪ್ಪಿಲ್ಲ. ಹೀಗಾಗಿ ಅವರು ನೇರವಾಗಿ ಮಧ್ಯಪ್ರದೇಶದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧವೂ ಕಿಡಿಕಾರಿದ್ದಾರೆ. ಇವರು ಆರ್‌ಎಸ್‌ಎಸ್‌ ಏಜೆಂಟ್‌ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌-ಬಿಎಸ್‌ಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ತಮಗೆ ಕಷ್ಟವಾಗಬಹುದು ಎಂಬುದು ದಿಗ್ವಿಜಯ್‌ ಸಿಂಗ್‌ ಲೆಕ್ಕಾಚಾರವಾಗಿದೆ. ಇದಕ್ಕೆ ಕಾರಣ, ಕೇಂದ್ರವು ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಕ ಕಟ್ಟಿಹಾಕುವುದೋ ಎಂಬ ಹೆದರಿಕೆ ದಿಗ್ವಿಜಯ್‌ ಸಿಂಗ್‌ಗೆ ಇದೆ. ಹೀಗಾಗಿಯೇ ಮೈತ್ರಿಕೂಟಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದಿದ್ದಾರೆ.

ದಿಗ್ವಿಜಯ್‌ ತಿರುಗೇಟು
ಮಾಯಾವತಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌, ತಮ್ಮ ಸಹೋದರನನ್ನು ಸಿಬಿಐ ಕುಣಿಕೆಯಿಂದ ಪಾರು ಮಾಡಲು ಮಾಯಾ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಹೀಗಾಗಿಯೇ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಮಾಯಾವತಿ ಅವರನ್ನು ಗೌರವಿಸುವುದಾಗಿಯೂ ಹೇಳಿದ್ದಾರೆ.

2019ಕ್ಕೂ ಅನುಮಾನ?
ಸದ್ಯದ ಪರಿಸ್ಥಿತಿಯಲ್ಲಿ ಈ ಒಡಕು ಈ  ಮೂರು ರಾಜ್ಯಗಳಿಗೆ ಮಾತ್ರ ಎಂದು ಮಾಯಾವತಿ ಹೇಳಿದ್ದರೂ 2019ರಲ್ಲೂ ಒಮ್ಮತ ಬರುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿನ ಸ್ಥಾನ ಹಂಚಿಕೆಯೇ ಕಷ್ಟವಾಗಿದೆ. ಕಾಂಗ್ರೆಸ್‌ ಮತ್ತು ಎಸ್‌ಪಿ ಗರಿಷ್ಠ ಸ್ಥಾನಗಳಿಗಾಗಿ ಪಟ್ಟು ಹಿಡಿದಿವೆ. ಇಲ್ಲಿ ಎಸ್‌ಪಿ 40ರಲ್ಲಿ ಸ್ಪರ್ಧಿಸಿದರೆ, ಉಳಿದ 40ರಲ್ಲಿ ಬಿಎಸ್‌ಪಿ, ಅಜಿತ್‌ ಸಿಂಗ್‌ ಅವರ ಪಕ್ಷ ಸಹಿತ ಉಳಿದ ಸಣ್ಣಪುಟ್ಟ ಪಕ್ಷಗಳ ಜತೆಗೆ ಕಾಂಗ್ರೆಸ್‌ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಬಿಎಸ್‌ಪಿಯೇ ಗರಿಷ್ಠ ಸ್ಥಾನ ಬೇಕು ಎಂದು ಹೇಳುವ ಸಂಭವ ಇರುವುದರಿಂದ ಕಾಂಗ್ರೆಸ್‌ಗೆ ಕಡಿಮೆ ಕ್ಷೇತ್ರಗಳು ಸಿಗಬಹುದು. ಹೀಗಾಗಿ ಇಲ್ಲೂ ಸ್ಥಾನ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಎಂಬ ಮಾತುಗಳಿವೆ.

ಕಾಂಗ್ರೆಸ್‌ಗೆ ನಷ್ಟ?
ಈ ಮೂರು ರಾಜ್ಯಗಳಲ್ಲಿ ಹಿಂದಿ ಭಾಷಿಕರೇ ಪ್ರಮುಖರಾಗಿದ್ದಾರೆ. ಇಲ್ಲಿ ಮಾಯಾವತಿ ಅವರ ಪ್ರಭಾವ ಇದ್ದೇ ಇದೆ. ಇವರು ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಲಾಭವಾಗುವ ಸಂಭವವಿತ್ತು ಎಂಬ ವಿಶ್ಲೇಷಣೆ ಇದೆ. ಇದಕ್ಕೆ ಕಾರಣ, ಕಳೆದ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಬಿಟ್ಟರೆ, ಮತ ಹಂಚಿಕೆಯಲ್ಲಿ ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಬಿಎಸ್‌ಪಿ ಮಾತ್ರ. ಅಲ್ಲದೆ ಎಷ್ಟೋ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಅಡ್ಡಿಯಾಗಿದ್ದೂ ಇದೆ. ಜತೆಗೆ ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಮತ ಬ್ಯಾಂಕ್‌ ಒಂದೇ. ಈ ಎರಡೂ ಪಕ್ಷಗಳು ಬೇರೆ ಬೇರೆಯಾಗಿ ಸ್ಪರ್ಧಿಸುವುದರಿಂದ ಮತ ಹಂಚಿಕೆಯಾಗಿ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳೂ ಬಹಳಷ್ಟಿವೆ ಎಂಬ ವಿಶ್ಲೇಷಣೆಗಳಿವೆ.

ಹೊಂದಾಣಿಕೆ ಎಂಬುದೇ ಕಾಂಗ್ರೆಸ್‌ನ  ಡಿಎನ್‌ಎಯಲ್ಲಿ ಇಲ್ಲ. ಅದು ಕೇವಲ ಗಾಂಧಿ ಕುಟುಂಬಕ್ಕೆ ಮಾತ್ರ ವಿಧೇಯವಾಗಿರುತ್ತದೆ. ಮಾಯಾವತಿ ಅವರ  ನೋವನ್ನು ಅರ್ಥ ಮಾಡಿಕೊಳ್ಳುವುದರ ಬದಲಾಗಿ  ತಮ್ಮ  ವ್ಯಾಪಾರ ಹಿತಾಸಕ್ತಿಗೆ ಬೆಲೆ ಕೊಡುತ್ತದೆ.

ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next