ಬಹಳ ದಿನದಿಂದಲೂ “ಮೇಲೊಬ್ಬ ಮಾಯಾವಿ’ ಚಿತ್ರದ ಬಗ್ಗೆ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಯಾವಾಗ ಸೆಟ್ಟೇರುತ್ತೆ ಎಂಬುದಕ್ಕೆ ಸ್ವತಃ ಚಿತ್ರತಂಡಕ್ಕೇ ಗೊಂದಲವಿತ್ತು. ಈಗ ಅದಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 4ರಿಂದ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.
“ಮೇಲೊಬ್ಬ ಮಾಯಾವಿ’ ಚಿತ್ರದ ಮೂಲಕ ನವೀನ್ ಕೃಷ್ಣ ನಿರ್ದೇಶಕರಾಗುತ್ತಿದ್ದಾರೆ. ಇದೊಂದು ಮಾಫಿಯಾ, ನಿಗೂಢವಾಗಿ ನಡೆಯುವ ದಂಧೆ ಮತ್ತು ಸಾವಿರಾರು ಕೊಲೆಗಳ ಸುತ್ತ ಹೆಣೆದಿರುವ ಕಥೆ. ಸುಳ್ಯ ಸಮೀಪ ಹಲವು ದಂಧೆಗಳು ನಡೆಯುತ್ತಿವೆ. ಆದರೆ, ಇಂದಿಗೂ ಅವು ನಿಗೂಢ. ಅಷ್ಟೇ ಅಲ್ಲ, ಪೊಲೀಸರಿಗೂ ಇದು ತಲೆನೋವಿನ ಸಂಗತಿ.
ಆ ಭಾಗದಲ್ಲಿ ಸಾವಿರಾರು ಕೊಲೆಗಳಾಗಿದ್ದರೂ, ತನಿಖೆ ಹಳ್ಳ ಹಿಡಿದಿದೆ. ಇಂತಹ ಸೂಕ್ಷ್ಮ ವಿಷಯಗಳ ಸಂಗ್ರಹವೇ “ಮೇಲೊಬ್ಬ ಮಾಯಾವಿ’. ನಿರ್ದೇಶಕ ನವೀನ್ ಕೃಷ್ಣ ಕಥೆ ಬರೆದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಬ್ದಾರಿ ಹೊರಿಸಿದ್ದಾರೆ. ಅದರೊಂದಿಗೆ ಸುಲೈಮಾನ್ ಎಂಬ ಪಾತ್ರಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಚಿತ್ರಕ್ಕೆ ಸಂಚಾರಿ ವಿಜಯ್ ಮುಖ್ಯ ಆಕರ್ಷಣೆ. ಅವರಿಲ್ಲಿ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರದ್ದೊಂದು ರೀತಿ ಅಮಾಯಕ ಎಂಬಂತಹ ಪಾತ್ರ. ಮಂಗಳೂರು ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇದು ಹೊಸ ಅನುಭವ.
ಕಿರುತೆರೆ ನಟಿ ಪವಿತ್ರಾ ಜಯರಾಂ, ಕೃಷ್ಣಮೂರ್ತಿ ಕವತ್ತಾರ್, ನಂಜಪ್ಪ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಗಾಯಕ ಎಲ್.ಎನ್. ಶಾಸ್ತ್ರಿ ಅವರು ಕೊನೆಯ ಬಾರಿ ಹಾಡಿದ ಹಾಗೂ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ ಚಿತ್ರ ಎಂಬುದು ವಿಶೇಷ.
ಈಗ ಅವರ ಪತ್ನಿ ಗಾಯಕಿ ಸುಮಾ ಶಾಸ್ತ್ರೀ ಅವರು ಹರಿಕೃಷ್ಣ ಅವರ ಸಹಾಯದೊಂದಿಗೆ ಹಿನ್ನಲೆ ಸಂಗೀತ ಒದಗಿಸುತ್ತಿದ್ದಾರೆ. ಗಿರೀಶ್ ಸಂಕಲನ ಮಾಡಿದರೆ, ದೀಪಿತ್ ಬಿ.ಜೈ ರತ್ನಾಕರ್ ಛಾಯಾಗ್ರಹಣವಿದೆ. ರಾಮು ನೃತ್ಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಪುತ್ತೂರು ಭರತ್ ನಿರ್ಮಾಪಕರು. ಅವರಿಗೆ ತನ್ವಿ ಅಮಿನ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.